ಬೆಂಗಳೂರು: ಕೇಂದ್ರ ಸರ್ಕಾರದ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯಡಿ ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಾವಳಿಗಳನ್ನು ರಚಿಸಿ ಇತ್ತೀಚೆಗಷ್ಟೇ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ ಇದೀಗ ಕೆ.ಜಿ.ರಸ್ತೆಯ ಕಾವೇರಿ ಭವನದ ಕರ್ನಾಟಕ ಗೃಹ ಮಂಡಳಿ ಸಮುತ್ಛಯದಲ್ಲಿ ರೇರಾ ಕಚೇರಿ ತೆರೆದಿದೆ.
ರಿಯಲ್ ಎಸ್ಟೇಟ್‌ಗೆ ಸಂಬಂಧಪಟ್ಟ ಮಾಹಿತಿ ಪಡೆಯಲು ಹಾಗೂ ನಿವೇಶನ, ಫ್ಲ್ಯಾಟ್, ಮನೆಗಳನ್ನು ಯಾವುದೇ ರೀತಿಯ ಶ್ರಮವಿಲ್ಲದೆ ಆಯ್ಕೆ ಮಾಡಿಕೊಳ್ಳಲು ಅಗತ್ಯವಾದ ಮಾಹಿತಿ, ನೆರವನ್ನು ಈ ಕಚೇರಿ ಮೂಲಕ ಪಡೆಯಬಹುದಾಗಿದೆ. ಹಾಗೆಯೇ ರಿಯಲ್ ಎಸ್ಟೇಟ್ ಉದ್ದಿಮೆದಾರರು, ಏಜೆಂಟ್‌ಗಳ ವಿರುದ್ಧ ದೂರು ದಾಖಲಿಸಲು, ಪರಿಹಾರ ಪಡೆಯಲು ಸಹ ನಿಯಮಾವಳಿಯಲ್ಲಿ ಅವಕಾಶವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಮುಂಗಡವಾಗಿ ಹಣ ಪಾವತಿಸಿಕೊಂಡು ನಂತರ ನಿವೇಶನ, ಫ್ಲ್ಯಾಟ್, ಮನೆಗಳ ನೋಂದಣಿಗೆ ವಿಳಂಬ ಮಾಡುವ, ಮೋಸ ಮಾಡುವ ರಿಯಲ್ ಎಸ್ಟೇಟ್ ಉದ್ದಿಮೆದಾರರು, ಏಜೆಂಟ್‌ಗಳ ವಿರುದ್ಧವೂ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ. ಆ ಮೂಲಕ ಗ್ರಾಹಕರ ಹಕ್ಕು ಮತ್ತು ಹಿತಾಸಕ್ತಿ ಕಾಪಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ರಿಯಲ್ ಎಸ್ಟೇಟ್ ಉದ್ಯಮದವರು, ಏಜೆಂಟರ್‌ಗಳು ರೇರಾ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹಾಗೆಯೇ ತಾವು ಮಾರಾಟ ಮಾಡಲು ಉದ್ದೇಶಿಸುವ ನಿವೇಶನ, ಫ್ಲ್ಯಾಟ್, ಮನೆಗಳನ್ನು ಕಡ್ಡಾಯವಾಗಿ ರೇರಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಕಡ್ಡಾಯ. ಇದರಿಂದ ಪಾರದರ್ಶಕತೆ ಕಾಯ್ದುಕೊಳ್ಳುವ ಜತೆಗೆ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಸಹ ಅನುಕೂಲ ಕಲ್ಪಿಸಿದಂತಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ವೆಬ್‌ಸೈಟ್: karnataka.gov.in/ housing. kar.nic.in, ಇ ಮೇಲ್: info. rerakarnataka.gov.in ಸಂಪರ್ಕಿಸಬಹುದು.