Advertisement

ಶಾಶ್ವತ ನೀರಾವರಿ ಯೋಜನೆಗೆ ಆಗ್ರಹ

10:31 AM Jul 21, 2019 | Suhan S |

ಬೀಳಗಿ: ಯೋಜನಾ ಪ್ರದೇಶದ ವ್ಯಾಪ್ತಿ ಹೆಚ್ಚಾಗಿದೆ. ವ್ಯಾಪ್ತಿಗೆ ಅನುಗುಣವಾಗಿ ಆಲಮಟ್ಟಿ ಜಲಾಶಯ 524.26 ಮೀಟರವರೆಗೆ ಎತ್ತರಿಸಬೇಕು. ಎಲ್ಲ ಏತ ನೀರಾವರಿ ಯೋಜನೆಗಳನ್ನು ಶಾಶ್ವತ ನೀರಾವರಿ ಯೋಜನೆಗಳನ್ನಾಗಿ ಮಾರ್ಪಡಿಸಬೇಕು. ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕೆಂದು ಒತ್ತಾಯಿಸಿ ತಾಲೂಕಿನ ರೈತ ಬಾಂಧವರು ಶನಿವಾರ ತಹಶೀಲ್ದಾರ್‌ ಉದಯ ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.

Advertisement

ರೈತ ಮುಖಂಡ ಪ್ರಕಾಶ ಅಂತರಗೊಂಡ ಹಾಗೂ ವಿ.ಜಿ.ರೇವಡಿಗಾರ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಜಿಲ್ಲೆಯ ನದಿ ತೀರದ ರೈತರು ಅತಿ ಹೆಚ್ಚು ಭೂಮಿಯನ್ನು ಕಳೆದುಕೊಂಡಿದ್ದಾರೆ. ನಮ್ಮ ಪಾಲಿನ ನೀರಿನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕಾಲುವೆಗಳ ಮುಖಾಂತರ ಮುಂಗಾರಿ-ಹಿಂಗಾರು ಎರಡೂ ಅವಧಿಗೂ ಏತ ನೀರಾವರಿ ನೀರು ಸಿಗಬೇಕು. ಇಂತಹ ಶಾಶ್ವತ ನೀರಾವರಿ ಯೋಜನೆ ಸಿಕ್ಕಾಗ ಮಾತ್ರ ರೈತರ ಬದುಕು ಬಂಗಾರವಾಗುತ್ತದೆ. ಈ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಏತ ನೀರಾವರಿಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದರು.

ಜಿಎಲ್ಬಿಸಿ, ಜಿಆರ್‌ಬಿಸಿ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನಿಗದಿಪಡಿಸಿದ ನೀರನ್ನು ಸಮರ್ಪಕವಾಗಿ ಪಡೆದುಕೊಳ್ಳಬೆಕು. ಕೆಎನ್‌ಎನ್‌ಎಲ್ ಹಾಗೂ ಕೆಬಿಜೆಎನ್‌ಎಲ್ ಕಾಲುವೆಗಳಿಗೆ ಸಂಬಂಧಪಟ್ಟಂತೆ ಸಮಸ್ಯೆ ಬಗೆಹರಿಸಲು ಸಮನ್ವಯ ಸಮಿತಿ ರಚಿಸಬೇಕು. ಬಾಗಲಕೋಟೆ ಜಿಲ್ಲೆ ವ್ಯಾಪ್ತಿಗೆ ಜಿಎಲ್ಬಿಸಿ, ಜಿಆರ್‌ಬಿಸಿ ಕಾಲುವೆಗಳಿಗೆ ನಮ್ಮ ಪಾಲಿನ ನೀರು ಎಷ್ಟು ಸ್ಪಷ್ಟಪಡಿಸಬೇಕು. ನೀರು ಪೂರೈಸದಿದ್ದಲ್ಲಿ ನೋಟಿಪೈಡ್‌ ಏರಿಯಾ ರದ್ದುಪಡಿಸಿ. ರಿಪಬ್ಲಿಕ್‌ ಆಫ್‌ ಹಿಡಕಲ್ ಡ್ಯಾಂ ಎಂಬ ಭಾವನೆ ಹೋಗಲಾಡಿಸಿ ಎಂದರು. ಈ ಕುರಿತು ಜು. 23ರಂದು ಬೆಳಗ್ಗೆ 11ಕ್ಕೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ನಗರದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದೆಂದು ರೈತ ಮುಖಂಡರು ತಿಳಿಸಿದರು.

ತಹಶೀಲ್ದಾರ್‌ ಉದಯ ಕುಂಬಾರ ಮನವಿ ಸ್ವೀಕರಿಸಿ ಮಾತನಾಡಿ, ಸಣ್ಣ ನೀರಾವರಿ ಅಕಾರಿಗಳನ್ನು ಕೂಡಲೆ ಸಭೆ ಕರೆದು ಈ ಕುರಿತು ಚರ್ಚಿಸುವ ಮೂಲಕ ನೀರಾವರಿ ಯೋಜನೆಗೆ ಪರಿಹಾರ ಕಂಡುಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಕಿರಣ ಬಾಳಾಗೋಳ, ರೈತರಾದ ಮಧು ಅನಗವಾಡಿ, ಶೇಖರ ಕಾಖಂಡಕಿ, ಡಿ.ಎಂ.ನದಾಫ, ಮಲ್ಲು ಮುರಕಾಚಿಟ್ಟಿ, ವಿರುಪಾಕ್ಷಯ್ಯ ಹಿರೇಮಠ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next