ನೆಲಮಂಗಲ: ನಕಲಿ ದಾಖಲೆ ಸೃಷ್ಟಿಸಿ ಶುದ್ಧಕ್ರಯ ಮಾಡಿಕೊಂಡು ನಮ್ಮ ಕುಟುಂಬಕ್ಕೆ ಮೋಸ ಮಾಡಿ ದ್ದು, ಯಾವುದೇ ಅಧಿಕಾರಿಗಳಿಂದ ನ್ಯಾಯ ಸಿಗುತ್ತಿಲ್ಲ ಎಂದು ಎರಡು ಕುಟುಂಬದ 26 ಜನರು ದಯಾಮರಣಕ್ಕೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.
ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿದ ತಾಲೂಕಿನ ತ್ಯಾಮಗೊಂಡ್ಲು ಹೋಗಳಿಯ ತಡಸಿಘಟ್ಟದ ಕುಟುಂಬ ಸದಸ್ಯರು, ಸರ್ವೆ ನಂ.73ರ 3 ಎಕರೆ 22 ಕುಂಟೆ ಜಾಗವನ್ನು ನಮ್ಮ ಪೂರ್ವಜರು, 3 ವರ್ಷಕ್ಕೆ ರಾಜಗೋಪಾಲಯ್ಯ ಎಂಬುವವರಿಗೆ ಕ್ರಯ ಮಾಡಿದ್ದಾರೆ. ಆದರೆ, ಅದನ್ನು ಶುದ್ಧ ಕ್ರಯ ಎಂದು ನಕಲಿ ಸಹಿಗಳನ್ನು ಬಳಸಿ ಮೋಸ ಮಾಡಿದ್ದು, ಇದರ ಬಗ್ಗೆ ತನಿಖೆಗೆ ಪೊಲೀಸ್ ಠಾಣೆ, ಕಂದಾಯ ಅಧಿಕಾರಿಗಳು ಮುಂದಾಗುತ್ತಿಲ್ಲ, ನಕಲಿ ದಾಖಲೆ ಸೃಷ್ಟಿಸಿಕೊಂಡಿರುವ ರಾಜಗೋಪಾಲಯ್ಯ ಬಿಬಿಎಂಪಿಯಲ್ಲಿ ಕಂದಾಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದು, ಹಣದಲ್ಲಿ ಶ್ರೀಮಂತನಾಗಿದ್ದಾನೆ. ನಮ್ಮಂತಹ ಬಡ ಜನರನ್ನು ಅವನ ಹಣದಿಂದ ತುಳಿಯುವ ಕೆಲಸ ಮಾಡುತ್ತಿದ್ದು, ಅಧಿಕಾರಿಗಳಿಂದ ನ್ಯಾಯ ಸಿಗದ ಪರಿಣಾಮ ನಮಗೆ ದಯಾಮರಣ ನೀಡಲು ಮನವಿ ಮಾಡಿದ್ದೇವೆ ಎಂದು ಕುಟುಂಬದ ಮುಖ್ಯಸ್ಥ ಸಿದ್ದರಾಜು ಹೇಳಿದರು.
ಕಾಲಿಗೆ ಬಿದ್ದು ಕಣ್ಣೀರು: ತಹಶೀಲ್ದಾರ್ ಕೆ.ಮಂಜು ನಾಥ್ ದಾಖಲಾತಿ ಪರಿಶೀಲನೆ ಮಾಡಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ದಯಾಮರಣದ ಅರ್ಜಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ದಯಾಮರಣದ ಅರ್ಜಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಸ್ಥಳದಲ್ಲಿಯೇ ಜಮೀನು ದಾಖಲಾತಿಗಳನ್ನು ಸ್ವೀಕರಿಸಿದ ತಹಶೀಲ್ದಾರ್, ಶೀಘ್ರದಲ್ಲಿ ಪರಿಶೀಲನೆ ಮಾಡಿ, ಕುಟುಂಬಕ್ಕೆ ನ್ಯಾಯ ನೀಡುವ ಭರವಸೆ ನೀಡಿದರು. ಕುಟುಂಬದ ಸದಸ್ಯರು ತಹಶೀಲ್ದಾರ್ ಕಾಲಿಗೆ ಬಿದ್ದ ಕಣ್ಣೀರು ಹಾಕಿ ಮನವಿ ಮಾಡಿದರು.
ನ್ಯಾಯ ಕಲ್ಪಿಸಿ: ನಕಲಿ ದಾಖಲೆ ಸೃಷ್ಟಿಸಿಕೊಂಡಿರುವವರ ಬಗ್ಗೆ ತನಿಖೆ ಮಾಡಿ, ನಮಗೆ ನ್ಯಾಯ ಕಲ್ಪಿಸಲು ಅಧಿಕಾರಿಗಳು ವಿಫಲವಾಗಿದ್ದು, ನಮ್ಮ ಜೀವನಾಧಾರವಾಗಿದ್ದ ಜಮೀನು ಕಳೆದುಕೊಂಡು ನಾವು ಬದುಕಿದ್ದು ಸತ್ತಂತೆ. ಆದ್ದರಿಂದ ರಾಷ್ಟ್ರಪತಿಗಳು, ರಾಜ್ಯಪಾಲರು ನಮಗೆ ದಯಾಮರಣ ನೀಡಲು ಮನವಿ ಮಾಡುತ್ತಿ ದ್ದೇವೆ ಎಂದು ಕುಟುಂಬದ ಮುಖ್ಯಸ್ಥೆ ಗಂಗಹನುಮಕ್ಕ, ನಾರಾಯಣಪ್ಪ ಸೇರಿದಂತೆ ಮಕ್ಕಳು, ಮಹಿಳೆ ಯರು ಸೇರಿದಂತೆ 26 ಜನರು ಅರ್ಜಿ ಸಲ್ಲಿಸಿದ್ದಾರೆ.
ತಹಶೀಲ್ದಾರ್ ಸ್ವೀಕರಿಸಿದ ಹಿನ್ನಲೆ ಅಂಚೆ ಮೂಲಕ ಕಳುಹಿಸಲಾಗುತ್ತದೆ ಎಂದು ಕುಟುಂಬದ ಸದಸ್ಯರು ತಿಳಿಸಿದರು.
ತಡಸೀಘಟ್ಟದ ಒಂದು ಕುಟುಂಬ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದರು. ಅವರಿಗೆ ನ್ಯಾಯ ನೀಡುವ ಭರವಸೆ ನೀಡಿ, ಅರ್ಜಿ ವಾಪಸ್ ನೀಡಿ ಆ ಕುಟುಂಬಕ್ಕೆ ಧೈರ್ಯ ಹೇಳಲಾಗಿದೆ. ಈಗಾಗಲೇ ದಾಖಲಾತಿ ಪರಿಶೀಲನೆಗೆ ಸೂಚನೆ ನೀಡಿದ್ದೇನೆ.
– ಕೆ.ಮಂಜುನಾಥ್, ತಹಶೀಲ್ದಾರ್