Advertisement

ಅನಧಿಕೃತ ಹೋಮ್‌ ಸ್ಟೇಗಳಿಗೆ ಕಡಿವಾಣ ಹಾಕಲು ಆಗ್ರಹ

11:37 PM Jan 20, 2021 | Team Udayavani |

ಬೆಳ್ತಂಗಡಿ: ಪ್ರವಾಸಿ ತಾಣಗಳ ಹೆಸರಲ್ಲಿ ಮೋಜು ಮಸ್ತಿ ಮಾಡುತ್ತಾ ಗ್ರಾಮೀಣ ಭಾಗದ ಮಂದಿಗೆ ತೊಂದರೆ ಉಂಟುಮಾಡಲಾಗುತ್ತಿದೆ. ಮಲವಂತಿಗೆ, ಮಿತ್ತಬಾಗಿಲು ಪ್ರದೇಶ ಸೂಕ್ಷ್ಮ ವಲಯ ಎಂದು ಗುರುತಿಸಿದರೂ ಆ ಭಾಗದಲ್ಲಿ ಅಕ್ರಮ ಚಟುವಟಿಕೆ, ಅನಧಿಕೃತ ಹೋಮ್‌ ಸ್ಟೇ ಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆ ಮೌನವಹಿಸಿದೆ ಎಂಬ ವಿಚಾರ ಬೆಳ್ತಂಗಡಿ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದೆ.

Advertisement

ಬೆಳ್ತ‌ಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಕಾರಣವಾಯಿತು.

ಅಕ್ರಮ ಹೋಮ್‌ ಸ್ಟೇ ವಿಚಾರವಾಗಿ ಸ್ಥಳೀಯರು ಪ್ರಶ್ನಿಸಿದರೆ ಬೆದರಿಕೆ ಒಡ್ಡಲಾಗುತ್ತಿದೆ. ಅರಣ್ಯ ಇಲಾಖೆ ಮೌನವಹಿಸಿದೆ ಎಂದು ತಾ.ಪಂ. ಸದಸ್ಯ ಜಯರಾಮ್‌ ಆರೋಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧ‌ರ್‌ ಪ್ರತಿಕ್ರಿಯಿಸಿ ಈ ಬಗ್ಗೆ ಸ್ಥಳೀಯ ಪಂಚಾಯತ್‌ಗೆ ಸೂಚನೆ ನೀಡಲಾಗಿದೆ ಎಂದರು.

ತೆರವಾಗದ ಅಕ್ರಮ ಕಟ್ಟಡ :

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸ್ಥಳದಲ್ಲಿ ಅಕ್ರಮ ಕಟ್ಟಡವಿದ್ದು ಅದನ್ನು ತೆರವುಗೊಳಿಸಲು ತಾ.ಪಂ.ಸಭೆಯಲ್ಲಿ ಆಗ್ರಹಿಸಿದ್ದು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮತ್ತೆ ಲೋಕೋಪಯೋಗಿ ಇಲಾಖೆ, ಮೇಲಾಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿ ಎಂದು ಆದೇಶಿಸಿರುವುದು ಹಾಸ್ಯಾಸ್ಪದ. ತಾ.ಪಂ. ಸಭೆಯ ನಿರ್ಣಯಕ್ಕೆ ಬೆಲೆಯೇ ಇಲ್ಲ ಎಂದು ತಾ.ಪಂ. ಸದಸ್ಯ ವಿಜಯ ಗೌಡ ಆರೋಪಿಸಿದರು.

Advertisement

ಇದಕ್ಕೆ ಸಂಬಂಧಪಟ್ಟ ಅಧಿಕಾರಿ ತೌಸಿಫ್‌ ಉತ್ತರಿಸಿ ಈ ಬಗ್ಗೆ ಪರಿಶೀಲನೆ ನಡೆಸಲಾ ಗುವುದು ಎಂದಾಗ ಆಕ್ರೋಶಗೊಂಡ ಸದಸ್ಯ ವಿಜಯ ಗೌಡ ಎರಡು ದಿನದಲ್ಲಿ ತೆರವುಗೊಳಿಸದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಧರಣಿ ಕುಳಿತು ಕೊಳ್ಳಲಾಗುವುದು ಎಂದರು.

ಬಿಲ್‌ ಬಾಕಿ; ನೀರಿಲ್ಲ :

ಕೆಲವು ಗ್ರಾ.ಪಂಗಳಲ್ಲಿ ವಿದ್ಯುತ್‌ ಬಿಲ್‌ ಬಾಕಿ ಇರುವ ಕಾರಣ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ ಇದರಿಂದ ಜನರಿಗೆ ಅನ್ಯಾಯವಾಗುತ್ತಿದೆ, ತತ್‌ಕ್ಷಣ ಸಂಪರ್ಕ ನೀಡಬೇಕೆಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಶಂಕರ್‌ ಉತ್ತರಿಸಿ ಹಣ ಪಾವತಿ ಮಾಡದಿದ್ದರೆ ಸಂಪರ್ಕ ನೀಡಲು ಸಾಧ್ಯವಿಲ್ಲ. ಮೇಲಾಧಿಕಾರಿಗಳು ಲಿಖೀತ ಆದೇಶ ನೀಡಿದರೆ ಮಾತ್ರ ಸಂಪರ್ಕ ನೀಡಬಹುದು ಎಂದು ಹೇಳಿದರು.

ಡಿಸಿ ಮನ್ನಾ ಭೂಮಿಯಲ್ಲಿ ಮನೆ ಮಾಡಿ ಕುಳಿತವರಿಗೆ ಹಕ್ಕುಪತ್ರ ಇನ್ನೂ ನೀಡಿಲ್ಲ ಇದರಿಂದ ಅವರಿಗೆ ಅನ್ಯಾಯವಾಗುತ್ತಿದೆ ಎಂದು ಸದಸ್ಯ ಸುಧೀರ್‌ ಸುವರ್ಣ, ಶಶಿಧರ್‌ ಕಲ್ಮಂಜ, ಸುಧಾಕರ್‌, ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉಪತಹಶೀಲ್ದಾರ್‌ ರವಿ ಉತ್ತರಿಸಿ ಈಗಾಗಲೇ ಹಕ್ಕುಪತ್ರ ನೀಡಲು ಸಿದ್ಧತೆಯಾಗುತ್ತಿದೆ ಎಂದಾಗ ಅಳತೆ ಮಾಡದೆ ಹಕ್ಕುಪತ್ರ ಸಿದ್ಧತೆ ಹೇಗೆ ಎಂದು ಪ್ರಶ್ನಿಸಿದರು. ಸರಿಯಾಗಿ ವರದಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.

ತಾ.ಪಂ. ಸದಸ್ಯರ ಅನುದಾನದಲ್ಲಿ ಕಾಮಗಾರಿ ನಡೆದರೂ ಬಿಲ್ಲು ಪಾವತಿ ಯಾಗದ    ಬಗ್ಗೆ ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಇದಕ್ಕೆ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಉತ್ತರಿಸಿ ಕೆಲವೊಂದು ತಾಂತ್ರಿಕ ಅಡೆತಡೆಗಳಿಂದ ವಿಳಂಬವಾಗಿದ್ದು ಈ ತಿಂಗಳ ಕೊನೆಯ ವೇಳೆ ಇದ್ದ ಅನುದಾನದ ಬಿಲ್ಲನ್ನು ಪಾವತಿಸಲಾಗುವುದು ಎಂದರು.

15ನೇ ಹಣಕಾಸು ಯೋಜನೆಯ ಮಾಹಿತಿಯನ್ನು ತಾ.ಪಂ ಮ್ಯಾನೇಜರ್‌ ಗಣೇಶ್‌ ಮಂಡಿಸಿದರು.

ತಾ.ಪಂ ಉಪಾಧ್ಯಕ್ಷೆ ವೇದಾವತಿ, ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಉಪಸ್ಥಿತರಿದ್ದರು. ತಾ.ಪಂ. ಸಂಯೋಜಕ ಜಯನಂದ್‌ ಲಾೖಲ ಸಹಕರಿಸಿದರು.

ನೀರಿನ ಘಟಕ ವ್ಯರ್ಥ :

ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಉಪ ಯೋಗಕ್ಕೆ ಬರುತ್ತಿಲ್ಲ. ಸರಕಾರದ ಹಣ ಪೋಲಾಗುತ್ತಿದೆ ಎಂದು ಸದಸ್ಯರಾದ ವಿಜಯ ಗೌಡ, ಗೋಪಿನಾಥ್‌ ನಾಯಕ್‌, ಸುಧಾಕರ್‌ ಮತ್ತಿತರ ಸದಸ್ಯರು ಆರೋಪಿಸಿದರು. ಇದಕ್ಕೆ ಅಧಿಕಾರಿ ಕುಸಮಾಧರ್‌ ಉತ್ತರಿಸಲು ಮುಂದಾದಾಗ ಸರಿಯಾದ ಮಾಹಿತಿ ಇಲ್ಲದ ಉತ್ತರ ಬೇಡ ಈ ಬಗ್ಗೆ ತಾ.ಪಂ. ಅಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು ಈ ಘಟಕಗಳನ್ನು ಪರಿಶಿಲಿಸಿ ಉಪಯೋಗವಾಗುವಂತೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ವಿಜ್ಞಾನಿಗಳಿಗೆ ಅಭಿನಂದನೆ :

ಸಭೆ ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಸುಧೀರ್‌ ಸುವರ್ಣ ಅಧ್ಯಕ್ಷರ ಅನುಮತಿ ಪಡೆದು, ಕೊರೊನಾ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳನ್ನು ಪ್ರಧಾನಿಯನ್ನು ಅಭಿನಂದಿಸಿದರು. ಮತ್ತೂಂದೆಡೆ ಉಜಿರೆಯಲ್ಲಿ ನಮ್ಮ ದೇಶದಲ್ಲೇ ಇದ್ದುಕೊಂಡು ಪಾಕ್‌ ಪರ ಘೋಷಣೆ ಕೂಗಿದ್ದನ್ನು ಖಂಡಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next