Advertisement

ಅಪಘಾತ ವಲಯಕ್ಕೆ ಮುಕ್ತಿ ನೀಡಲು ಆಗ್ರಹ

10:46 AM May 24, 2022 | Team Udayavani |

ಬೆಳ್ಮಣ್‌: ಇಲ್ಲಿನ ಬೆಳ್ಮಣ್‌-ಜಂತ್ರ ರಸ್ತೆ ಡಾಮರು ಕಾಮಗಾರಿ ಬಳಿಕ ಸುಂದರಗೊಂಡಿದ್ದು ಆದರೆ ಇದೀಗ ಹಲವಾರು ಕಾರಣಗಳಿಂದ ಮತ್ತೆ ಅಪಘಾತ ವಲಯವಾಗಿ ಗುರುತಿಸಲ್ಪಟ್ಟಿದೆ.

Advertisement

ತಿರುವು ಜತೆಗೆ ಇಳಿಜಾರಿನಿಂದ ಕೂಡಿದ್ದು ನಿತ್ಯ ವಾಹನ ಸವಾರರಿಗೆ ಸಂಕಟವನ್ನು ತಂದೊಡ್ಡಿದ್ದು ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ.

ಬೆಳ್ಮಣ್‌ನಿಂದ ಶಿರ್ವಕ್ಕೆ ಸಾಗುವ ರಸ್ತೆ ಇದಾಗಿದ್ದು ಜಂತ್ರ ಎಂಬಲ್ಲಿ ವಾಹನ ಸವಾರರು ಸ್ವಲ್ಪ ಎಡವಿದರೂ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿಯಾಗಿದೆ. ಅಪಘಾತ ವಲಯದ ಹೆದ್ದಾರಿಯನ್ನು ಸರಿಪಡಿಸುವಲ್ಲಿ ಲೋಕೋಪಯೋಗಿ ಇಲಾಖೆ ಮಾತ್ರ ವಿಫಲವಾಗಿದೆ. ಬೆಳ್ಮಣ್‌ ಪೇಟೆಯಿಂದ ಅನತಿ ದೂರದಲ್ಲಿರುವ ಜಂತ್ರದ ಹೆದ್ದಾರಿಯು ಅಪಾಯಕಾರಿ ತಿರುವಿನ ಜತೆಗೆ ಆಳಕ್ಕೆ ಸಾಗಿರುವ ರಸ್ತೆಯಾಗಿದ್ದು ತುಂಬಾ ಡೇಂಜರ್‌ ಸ್ಪಾಟ್‌ ಆಗಿ ಪರಿಣಮಿಸಿದೆ.

ಶಿರ್ವದಿಂದ ಬೆಳ್ಮಣ್‌ಗೆ ಸಾಗುವ ವೇಳೆ ರಸ್ತೆಯೂ ತಿರುವು ಹಾಗೂ ಇಳಿಜಾರಿನಿಂದ ಕೂಡಿದ್ದು ಬರುವ ವಾಹನಗಳು ಅತೀ ವೇಗವಾಗಿ ಬಂದು ಬೆಳ್ಮಣ್‌ ಕಡೆಯಿಂದ ಮೇಲೇರಿ ಹೋಗುವ ವಾಹನಗಳ ಗಮನಕ್ಕೆ ಬಾರದೇ ಭಾರೀ ಪ್ರಮಾಣದಲ್ಲಿ ಅಪಘಾತಗಳು ನಡೆದಿದ್ದು ಜೀವಹಾನಿಯ ಜತೆ ಮಾರಣಾಂತಿಕ ಗಾಯಗಳಾದ ಪ್ರಕರಣಗಳೂ ಹಲವಾರು ಘಟಿಸಿವೆ.

ಸರಣಿ ಅಪಘಾತಗಳು

Advertisement

ಜಂತ್ರದ ಇಳಿಜಾರಿನಿಂದ ಕೂಡಿದ ಈ ರಸ್ತೆಯಲ್ಲಿ ಈಗಾಗಲೇ ಭಾರೀ ಸಂಖ್ಯೆಯ ಅಪಘಾತಗಳು ನಡೆದಿದ್ದು ಐದು ವರ್ಷಗಳ ಹಿಂದೆ ಬಸ್ಸೊಂದು ಅಪಘಾತಕ್ಕೀಡಾಗಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು. ಅಲ್ಲದೆ ಬೈಕ್‌ನಲ್ಲಿದ್ದ ಪೊಲೀಸ್‌ ಪೇದೆಯೊಬ್ಬರ ಸಹೋದರ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತ ಪಟ್ಟ ಘಟನೆಯೂ ಇಲ್ಲೇ ನಡೆದಿತ್ತು. 2019ರ ಫೆಬ್ರವರಿ 23ರಂದು ನಡೆದ ಖಾಸಗಿ ಬಸ್‌ ಹಾಗೂ ಟಿಪ್ಪರ್‌ ಮುಖಾಮುಖೀಯಾಗಿ ಢಿಕ್ಕಿ ಹೊಡೆದು ಯುವತಿಯೊಬ್ಬಳು ಸ್ಥಳದಲ್ಲೇ ಮೃತ ಪಟ್ಟಿದ್ದು, ಸಂಕಲಕರಿಯದ ಎರಡು ಪುಟ್ಟ ಹೆಮ್ಮಕ್ಕಳು ತಾಯಿಯ ಸಮೇತ ಗಂಭೀರವಾಗಿ ಗಾಯಗೊಂಡಿದ್ದರು. ಹಲವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಅಪಘಾತದಲ್ಲಿ ಬಸ್‌ಚಾಲಕ ರವಿ ಅವರು ಕಾಲು ಕಳೆದುಕೊಂಡಿದ್ದರು.

2019ರ ಮೇ 28ರಂದು ಬೈಕ್‌ಗಳೆರಡರ ಮುಖಾಮುಖಿ ಅಪಘಾತದಲ್ಲಿ ಬೈಕ್‌ ಸವಾರ ರಸ್ತೆಗೆ ಎಸೆಯಲ್ಪಟ್ಟು ಬಸ್‌ನಡಿಗೆ ಬಿದ್ದು ಪಳ್ಳಿ ಅಡಪಾಡಿಯ ದಿನೇಶ್‌ ಆಚಾರ್‌ ಮೃತಪಟ್ಟಿದ್ದರು. ಬೈಕ್‌ಗಳ ಅಪಘಾತ, ಟಿಪ್ಪರ್‌ ಟಿಪ್ಪರ್‌ ಮುಖಾಮುಖಿ ಢಿಕ್ಕಿ ಹೀಗೆ ನಿರಂತರ ಭೀಕರ ಅಪಘಾತಗಳಲ್ಲದೆ ಪ್ರತೀ ನಿತ್ಯ ತಿರುವಿನ ಬಗ್ಗೆ ತಿಳಿಯದೆ ಅಸಂಖ್ಯಾತ ಅಪಘಾತಗಳು ನಡೆಯುತ್ತಲೇ ಇವೆ.

ರಸ್ತೆಯ ಇಳಿಜಾರು ತೆಗೆಯಲು ಆಗ್ರಹ

ರಸ್ತೆಯು ಇಳಿಜಾರಿನಿಂದ ಕೂಡಿದ ಪರಿಣಾಮ ಶಿರ್ವದಿಂದ ಬರುವ ವಾಹನಗಳಿಗೆ ಬೆಳ್ಮಣ್‌ ಕಡೆಯಿಂದ ಬರುವ ವಾಹನಗಳ ಅರಿವಿಲ್ಲದೆ ಪದೇ ಪದೇ ಅಪಘಾತಗಳು ನಡೆಯುತ್ತಿದೆ. ಹೀಗಾಗಿ ರಸ್ತೆಯ ಇಳಿಜಾರನ್ನು ತೆಗೆದು ರಸ್ತೆಯನ್ನು ವಿಸ್ತರಿಸಿ ಶಿರ್ವ ಹಾಗೂ ಬೆಳ್ಮಣ್‌ ಕಡೆಗಳಲ್ಲಿ ರಸ್ತೆಗೆ ಹಂಪ್ಸ್‌ ಅಳವಡಿಸಬೇಕೆಂಬ ಸಲಹೆಯೂ ಕೇಳಿ ಬರುತ್ತಿದ್ದು ಲೋಕೋಪಯೋಗಿ ಇಲಾಖೆ ಈ ಬಗ್ಗೆ ಯೋಚಿಸಿ ಕ್ರಮ ಕೈಗೊಂಡರೆ ಅಪಘಾತ ತಪ್ಪಿಸಬಹುದಾಗಿದೆ. ಈ ಮೂಲಕ ಎರಡೂ ಕಡೆಗಳಿಂದ ಬರುವ ವಾಹನಗಳ ವೇಗಕ್ಕೆ ಬ್ರೇಕ್‌ ಬಿದ್ದು ಸಂಭವಿಸಬಹುದಾದ ದುರಂತ ತಪ್ಪಿಸಬಹುದಾಗಿದೆ ಎಂದು ಗ್ರಾಮಸ್ಥರ ಅಭಿಪ್ರಾಯ.

ಈ ಬಗ್ಗೆ ಹಲವು ಬಾರಿ ತಜ್ಞರು, ಪೊಲೀಸ್‌ ಇಲಾಖೆಯವರು, ವಾಹನ ಮಾಲಕರು ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆಯನ್ನು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಮುನ್ನ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ.

ರ‌ಸ್ತೆ ವಿಸ್ತರಿಸಿ

ರಸ್ತೆಯನ್ನು ವಿಸ್ತರಿಸಿ ತಿರುವು ತೆಗೆದು ಇಳಿಜಾರು ಮುಕ್ತವನ್ನಾಗಿಸಿದರೆ ಅಪಘಾತದ ಸಂಖ್ಯೆಯನ್ನು ತಡೆಯಬಹುದಾಗಿದೆ. –ರಘುನಾಥ ನಾಯಕ್‌ ಪುನಾರು, ಸಾಮಾಜಿಕ ಕಾರ್ಯಕರ್ತ

ಕಾಮಗಾರಿ ನಡೆದಿಲ್ಲ

ಈ ರಸ್ತೆಯನ್ನು ವಿಸ್ತರಿಸಬೇಕೆಂದು ಪೊಲೀಸ್‌ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ವಿಸ್ತರಿಸುವ ಬಗ್ಗೆ ಭರವಸೆಯೂ ದೊರಕಿತ್ತು. ಆದರೆ ಬೇರೆಡೆ ಎಲ್ಲ ವಿಸ್ತರಣೆ ನಡೆದರೂ ಇಳಿಜಾರು ಜಂತ್ರ ರಸ್ತೆಯಲ್ಲಿ ಮಾತ್ರ ಯಾವುದೇ ಕಾಮಗಾರಿ ನಡೆದಿಲ್ಲ. -ಸತೀಶ್‌ ಪಿಲಾರ್‌, ರಿಕ್ಷಾ ಚಾಲಕ

ಶೀಘ್ರ ಅಗತ್ಯ ಕ್ರಮ

ಈ ರಸ್ತೆಯ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದ್ದು ಕೂಡಲೇ ಎಚ್ಚರಿಕೆ ಫ‌ಲಕ ಅಳವಡಿಕೆ ಸಹಿತ ಇತರ ಕ್ರಮಗಳನ್ನು ಕೈಗೊಳ್ಳಲಾಗುವುದು. -ಮಿಥುನ್‌, ಲೋಕೋಪಯೋಗಿ ಎಂಜಿನಿಯರ್‌

-ಶರತ್‌ ಶೆಟ್ಟಿ ಮುಂಡ್ಕೂರು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next