ಆಳಂದ: ಶಾಸಕ, ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ರಾಜ್ಯದ ಸಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ದಲಿತ ಸೇನೆ ಹಾಗೂ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣ ಎದುರು ಸೋಮವಾರ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸೇನೆಯ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆತಡೆ ಕೈಗೊಂಡು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಯಿತು.
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪ್ರಚಾರ ಕೈಗೊಳ್ಳಲು ಕ್ಷೇತ್ರಕ್ಕೆ ಹೋಗುವ ಬದಲು ಮಾಜಿ ಸಿಎಂ ಸಿದ್ದರಾಮಯ್ಯನವರ ಗೆಲುವಿಗೆ ಶ್ರಮಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಬಕಾರಿ ಮತ್ತು ಕೈಗಾರಿಗೆ ಎರಡು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಂಥ ಜನ ನಾಯಕರನ್ನು ಇಂದಿನ ಸಚಿವ ಸಂಪುಟದಲ್ಲಿ ಖಾತೆ ಒದಗಿಸುವ ಮೂಲಕ ನಾಡಿನ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಘಟನಾ ಸ್ಥಳಕ್ಕೆ ಗ್ರೇಡ್-2 ತಹಸೀಲ್ದಾರ್ ಬಿ.ಜಿ. ಕುದರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಬಳಿಕ ರಸ್ತೆ ತಡೆ ಕೈಬಿಡಲಾಯಿತು. ಮುಖಂಡರಾದ ಶರಣು ಕವಲಗಾ, ದತ್ತಾತ್ರೆಯ ಕಡಗಂಚಿ, ಜೈಭೀಮ ಮಟಕಿ, ದೀಲಿಪ ಕಾಳೆ,
ಗೌತಮ ಸಾಲೇಗಾಂವ, ಧರ್ಮಾ ಬಂಗರಗಾ, ಮಹೇಶ ಕೊಚ್ಚಿನ ಶಿವಲಿಂಗಪ್ಪ ಚನ್ನಗುಂಡ ಇದ್ದರು.