Advertisement

ಸರ್ಕಾರಿ ಆಸ್ಪತ್ರೆಗೆ ವೈದ್ಯರ ನೇಮಿಸಲು ಮನವಿ

02:17 PM Jan 24, 2020 | Suhan S |

ಮದ್ದೂರು: ಪಟ್ಟಣದ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ನೀಗಿಸುವಂತೆ ಪುರಸಭೆ ಸದಸ್ಯೆ ಪ್ರಿಯಾಂಕ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

Advertisement

ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಪಟ್ಟಣದ ಪುರಸಭೆ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ನಿವಾಸಕ್ಕೆ ತೆರಳಿ ಉಪಾಹಾರ ಸೇವಿಸಿದ ಬಳಿಕ ಆಸ್ಪತ್ರೆ ಅವ್ಯವಸ್ಥೆ ಸಂಬಂಧ ಮನವಿ ಪತ್ರ ಸಲ್ಲಿಸಿದರು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ವೈದ್ಯರ ಕೊರತೆ ನೀಗಿಸುವ ಜತೆಗೆ ಸಿಬ್ಬಂದಿ ನಿಯೋಜಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು ಫಿಜಿಷಿಯನ್‌ ಹಾಗೂ ಅಗತ್ಯ ವೈದ್ಯರಿಲ್ಲದೆ ಪರದಾಡುವಂತಾಗಿದೆ. ಕರ್ತವ್ಯ ನಿರತ ವೈದ್ಯರು ವಾರದ ಮೂರು ದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿಕೆ ದಿನಗಳಲ್ಲಿ ರೋಗಿಗಳಿಗೆ ಅನನುಕೂಲವಾಗಿದ್ದು, ಕಾಯಂ ಫಿಜಿಷಿಯನ್‌ ವೈದ್ಯರ ನೇಮಕ ಮಾಡುವ ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಈ ವ್ಯಾಪ್ತಿಯ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಡಿಎಚ್‌ಒ ಅಧಿಕಾರಿಗಳಿಂದ ಮಾಹಿತಿ ಪಡೆದು, ಈ ಬಗ್ಗೆ ಪರಿಶೀಲಿಸಿ ವೈದ್ಯರ ನೇಮಕ ಮಾಡಲು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಪ್ಪುಗೌಡ, ಶಶಿಗೌಡ, ರವಿಕುಮಾರ್‌, ರಾಜೇಶ್‌, ಮಧು, ಪುನೀತ್‌ ಹಾಗೂ ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next