ದೊಡ್ಡಬಳ್ಳಾಪುರ: ಸೇವೆಯಲ್ಲಿರುವ ಅರ್ಹ ಪದವೀಧರ ಶಿಕ್ಷಕರನ್ನು 6 ಮತ್ತು 8 ನೇ ತರಗತಿಗೆ ಪರಿಗಣಿಸಿ ಮುಂಬಡ್ತಿ ನೀಡಬೇಕು. ಇಲ್ಲವಾದಲ್ಲಿ 6 ಮತ್ತು 8ನೇ ತರಗತಿಗಳನ್ನು ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ವಿ.ಧನಂಜಯ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ದೊಡ್ಡಬಳ್ಳಾಪುರ ತಾಲೂಕು ಘಟಕದಿಂದ ಶನಿವಾರ ಸಾಂಕೇತಿಕ ಧರಣಿ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪ ರೆಡ್ಡಿಯವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
2005 ರಿಂದ 8ನೇತರಗತಿ ಆರಂಭಿಸಿದಾಗ 1ರಿಂದ 7ನೇ ತರಗತಿಗೆ ನೇಮಕವಾದ ಶಿಕ್ಷಕರನ್ನು ಪದವಿ ಪಡೆದ ಅನುಭವಿ ಶಿಕ್ಷಕರೆಂಬ ಅಧಾರದ ಮೇಲೆ 6ರಿಂದ 8ನೇ ತರಗತಿಗಳನ್ನು ಬೋಧಸಲು ನೇಮಿಸಿತ್ತು. ಆದರೆ ಸತತ 14 ವರ್ಷಗಳಿಂದ ಬೋಧನೆ ನಡೆಸುತ್ತಿದ್ದರು. ಅವರನ್ನು ಮುಂಬಡ್ತಿಗೆ ಪರಿಗಣಿಸದೆ 6ರಿಂದ 8ನೇ ತರಗತಿಗೆಂದು ಪ್ರಾಥಮಿಕ ಶಾಲಾ ಪದವಿಧೀಧರ ಶಿಕ್ಷಕರನ್ನು ಎರಡು ಬಾರಿ ನೇಮಕ ಮಾಡಿತ್ತು. ಈ ವರ್ಷವೂ ಮತ್ತೆ ಮೂರನೇ ಸಾರಿ ನೇಮಕಾತಿ ಮಾಡುತ್ತಿದೆ. ಈ ಕುರಿತಂತೆ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ನ್ಯಾಯ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್.ಎ.ಶ್ರೀನಿವಾಸಮೂರ್ತಿ ಮಾತನಾಡಿ, ಸೇವೆಯಲ್ಲಿರುವ ಅರ್ಹ ಪದವೀಧರ ಶಿಕ್ಷಕರನ್ನು 6 ಮತ್ತು 8 ನೇ ತರಗತಿಗೆ ಪರಿಗಣಿಸಬೇಕು. ಇಲ್ಲವಾದಲ್ಲಿ ಜು.1ರಿಂದ ನಿಯಮದಂತೆ 1 ರಿಂದ 5ನೇ ತರಗತಿಗೆ ಮಾತ್ರ ಪಾಠ ಮಾಡಿ, 6 ಮತ್ತು 8ನೇ ತರಗತಿಗಳನ್ನು ಬಹಿಷ್ಕರಿಸಲು ಶಿಕ್ಷಕರು ತೀರ್ಮಾನಿಸಿದ್ದಾರೆ. ಜೂನ್1ರಂದು ಸಾಂಕೇತಿಕ ಧರಣಿ ಸತ್ಯಾಗ್ರವನ್ನು ಮಾಡಲಾಗಿದೆ. ಈ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರಸಲ್ಲಿಸಿದ್ದು, ನಮ್ಮ ನ್ಯಾಯಯುತ ಬೇಡಿಕೆಯನ್ನು ಪುರಸ್ಕರಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀಧರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮೇಗೌಡ, ತಾಲೂಕು ಸಂಘಟನಾ ಕಾರ್ಯದರ್ಶಿ ಚಿತ್ತೇಗೌಡ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.