ಮುದ್ದೇಬಿಹಾಳ: ಸೂರ್ಯವಂಶ ಕ್ಷತ್ರೀಯ ಕಲಾಲ್ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಸಲುವಾಗಿ ಕುಲಶಾಸ್ತ್ರದ ಅಧ್ಯಯನ ಮಾಡಿರುವ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಎಂ.ಗುರುಲಿಂಗಯ್ಯ ಅವರ ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಸೂರ್ಯವಂಶ ಕ್ಷತ್ರೀಯ ಕಲಾಲ್ ಖಾಟಿಕ್ ಸಮಾಜದ ನೂರಾರು ಸದಸ್ಯರು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.
ಈ ಸಮುದಾಯವನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಸೂರ್ಯವಂಶ ಕ್ಷತ್ರೀಯ, ಕಲಾಲ್, ಖಾಟಿಕ್, ಶೇರೆಗಾರ ಮುಂತಾದ ಹೆಸರುಗಳಿಮದ ಗುರ್ತಿಸಲಾಗುತ್ತದೆ. ಈ ಸಮುದಾಯದವರು ಉಪ ಜೀವನಕ್ಕಾಗಿ ಕುರಿ, ಮೇಕೆ ಹಲಾಲ್ ಮಾಡಿಸಿ ಸ್ವತ್ಛಗೊಳಿಸಿ, ಅದರ ಮಾಂಸ ಮಾರಾಟ ಮಾಡುವುದನ್ನು ಕುಲಕಸುಬಾಗಿಸಿಕೊಂಡಿದೆ. ಈ ಕಸುಬು ಪೂರ್ವಜರಿಂದಲೂ ಮುಂದುವರಿದಿದೆ. ಇದೇ ಕಾರಣಕ್ಕಾಗಿ ಈ ಸಮುದಾಯ ಅಶುಚಿತ್ವದ, ಅಸ್ಪರ್ಶದ ಬದುಕು ಸಾಗಿಸುತ್ತ ಅತಿ ಹಿಂದುಳಿದ ಸಮುದಾಯ ಎನ್ನಿಸಿಕೊಂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಉತ್ತರಭಾರತದ ಒಂದು ಕೇಂದ್ರಾದಳಿತ ಪ್ರದೇಶ ಸೇರಿ ಮಹಾರಾಷ್ಟ್ರ, ಛಂಡೀಗಢ, ದೆಹಲಿ, ಹಿಮಾಚಲಪ್ರದೇಶ, ಪಂಜಾಬ, ರಾಜಸ್ಥಾನ, ಉತ್ತರಾಂಚಲ, ಛತ್ತೀಸಗಡ, ಉತ್ತರಪ್ರದೇಶ, ಪಶ್ಚಿಮಬಂಗಾಳ ಸೇರಿ 13 ರಾಜ್ಯಗಳಲ್ಲಿ ಈ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನೀಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಈವರೆಗೂ ಸೇರ್ಪಡೆ ಮಾಡಿಲ್ಲ ಎಂದು ತಿಳಿಸಲಾಗಿದೆ. ಈ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಮೀಸಲಾತಿ ಕಲ್ಪಿಸುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.
ಈ ಮನವಿಗಳನ್ನು ಪರಿಗಣಿಸಿ ಸರ್ಕಾರವು 2012ರಲ್ಲಿ ಈ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಕುವೆಂಪು ವಿವಿಯ ಡಾ| ಬಿ.ಆರ್. ಅಂಬೇಡ್ಕರ್ ಸಂಶೋಧನಾ ವಿಭಾಗದ ಎಂ.ಗುರುಲಿಂಗಯ್ಯ ಅವರನ್ನು ನೇಮಿಸಿ ವರದಿಯನ್ನೂ ಪಡೆದುಕೊಂಡಿದೆ. ಆದರೆ ಈವರೆಗೂ ವರದಿಯನ್ನು ಕೇಂದ್ರಕ್ಕೆ ಕಳಿಸಿಲ್ಲ. ಇದು ಸಾಕಷ್ಟು ವಿಳಂಬಕ್ಕೆ ಅವಕಾಶ ಮಾಡಿಕೊಟ್ಟು ಈ ಸಮುದಾಯಕ್ಕೆ ಸಿಗಬೇಕಾದ ನ್ಯಾಯ ಸಿಗದಂತೆ ಮಾಡಲಾಗುತ್ತಿದೆ. ಈಗಲಾದರೂ ಮುಖ್ಯಮಂತ್ರಿಗಳು ಹೆಚ್ಚು ಕಾಳಜಿ ವಹಿಸಿ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಸಚಿವ ಸಂಪುುಟದಲ್ಲಿ ಪುರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಈ ಸಮುದಾಯಕ್ಕೆ ಸಿಗಬೇಕಾದ ಸಂವಿಧಾನಬದ್ಧ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಸಮಾಜದ ಅಧ್ಯಕ್ಷ ಚಂದ್ರಶೇಖರ ಕಲಾಲ್, ಪ್ರಮುಖ ಪದಾ ಧಿಕಾರಿಗಳಾದ ಯಶವಂತ ಕಲಾಲ್, ಸುರೇಶ ಕಲಾಲ್, ಗೋಪಾಲ ಕಲಾಲ್, ಪ್ರಶಾಂತ ಕಲಾಲ್, ತುಕಾರಾಮ ಕಲಾಲ್, ಹನುಮಂತ ಪ್ರಭುಕರ, ನಾಗೇಶ ಪ್ರಭುಕರ, ಬಸವರಾಜ ತೋರಲೇಕರ, ಹೀರಾಲಾಲ್ ಕಲಾಲ್, ದೀಪಕ ಕಲಾಲ್, ಗಣೇಶ ಕಲ್ಯಾಣಕರ ಸೇರಿದಂತೆ ಹಲವರು ಇದ್ದರು.