ಶಹಾಬಾದ: ಜಿಲ್ಲೆಯಲ್ಲಿಯೇ ದೊಡ್ಡ ನಗರವಾಗಿರುವ ಶಹಾಬಾದ ನಗರವನ್ನು ನೂತನ ತಾಲೂಕು ಕೇಂದ್ರವೆಂದು ಘೋಷಿಸಿದ್ದು, ಈ ತಾಲೂಕಿನ ವ್ಯಾಪ್ತಿಗೆ ಸುಮಾರು 65 ಹಳ್ಳಿಗಳನ್ನು ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮಡು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹೋಬಳಿಯಾಗಿದ್ದಾಗ 23 ಹಳ್ಳಿಗಳು ಶಹಾಬಾದ ನಗರಕ್ಕೆ ಒಳಪಟ್ಟಿತ್ತು. ನೂತನ ಶಹಾಬಾದ ತಾಲೂಕಾದ ನಂತರ ಕೇವಲ 12 ಗ್ರಾಮಗಳನ್ನು ಮಾತ್ರ ನೀಡಿ, ಇಲ್ಲಿನ ಜನರಿಗೆ ಅನ್ಯಾಯ ಮಾಡಿದಂತಾಗಿದೆ. ಕೇವಲ 12 ಹಳ್ಳಿಗಳು ಇರುವುದರಿಂದ ತಾಲೂಕಿನ ವ್ಯಾಪ್ತಿ ಚಿಕ್ಕದಾಗಿದೆ.
ಇದರಿಂದ ಇಲ್ಲಿ ಯಾವ ರೀತಿ ಆಡಳಿತ ನಡೆಸಬೇಕೆಂಬುದೇ ದೊಡ್ಡ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಈ ಕುರಿತಂತೆ ಸಂಘ, ಸಂಸ್ಥೆ ಹಾಗೂ ಸಂಘಟನೆಯವರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಅಲ್ಲದೇ ಕೇವಲ ನಗರದಿಂದ ಮೂರು ಕಿಮೀ ದೂರದ ಗ್ರಾಮಗಳು ಚಿತ್ತಾಪುರ ತಾಲೂಕಿಗೆ ಸೇರ್ಪಡೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಹಾಬಾದ ನಗರದ ಸುತ್ತಲಿನ 10 ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಸಾಕಷ್ಟು ಹಳ್ಳಿಗಳು ಬರುತ್ತವೆ. ಆದ್ದರಿಂದ ನಗರಕ್ಕೆ ಅತ್ಯಂತ ಸಮೀಪದ ಇರುವ ಸುಮಾರು 65 ಗ್ರಾಮಗಳನ್ನು ಶಹಾಬಾದ ತಾಲೂಕು ವ್ಯಾಪ್ತಿಗೆ ಸೇರಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಕಂದಾಯ ಸಚಿವ ಆರ್. ಅಶೋಕ ಸ್ಪಂದಿಸಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವದು ಎಂದು ಆಶ್ವಾಸನೆ ನೀಡಿದ್ದಾರೆ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಇನ್ನಷ್ಟು ಗ್ರಾಮಗಳು ಶಹಾಬಾದ ತಾಲೂಕಿಗೆ ಸೇರ್ಪಡೆಗೊಳ್ಳುವ ಆಶಾಭಾವನೆಯಿದೆ ಎಂದು ಶಾಸಕ ಮತ್ತಿಮಡು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.