Advertisement

ಅನುದಾನ ರದ್ದು ಮಾಡದಂತೆ ಆಗ್ರಹ

11:32 AM May 21, 2017 | Team Udayavani |

ಬೆಂಗಳೂರು: ಹಲವಾರು ವರ್ಷದಿಂದ ಸರ್ಕಾರದ ಅನುದಾನ ಪಡಯುತ್ತಿದ್ದ ಕಾಲೇಜುಗಳು ಏಕಾಏಕಿ ಅನುದಾನ ನಿಲ್ಲಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಬರೆದಿರುವ ಪತ್ರವನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು. ಅನುದಾನ ನಿಲ್ಲಿಸಿದರೆ, ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಆರೋಪಿಸಿದೆ.

Advertisement

ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆಯವರ ನೇತೃತ್ವದ ನಿಯೋಗ ಶನಿವಾರ ಪಿಯು ಇಲಾಖೆಯ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಗರದ ಶೇಷಾದ್ರಿಪುರಂ ಪಿಯು ಕಾಲೇಜು, ವಿದ್ಯಾವರ್ಧಕ ಸಂಘದ ಪಿಯು ಕಾಲೇಜು, ಆರ್‌ಬಿಎಎನ್‌ಎಂಎಸ್‌ ಪಿಯು ಕಾಲೇಜು, ಎಪಿಎಸ್‌ ಪಿಯು ಕಾಲೇಜು, ಬಿಎನ್‌ಇಎಸ್‌ ಕಾಲೇಜು, ವಿಜಯ ಪಿಯು ಕಾಲೇಜು, ಪಿಇಎಸ್‌ ಪಿಯು ಕಾಲೇಜು ಸೇರಿ ಅನೇಕ ಪಿಯು ಕಾಲೇಜುಗಳು ಕಳೆದ 30-40 ವರ್ಷದಿಂದ ಸರ್ಕಾರದ ಅನುದಾನ ಪಡೆದು ಅಭಿವೃದ್ಧಿ ಹೊಂದಿವೆ.

ಈಗ ಏಕಾಏಕಿ ಎಲ್ಲಾ ಕಾಲೇಜುಗಳು ತಮ್ಮ ಸ್ವಂತ ಹಣದಲ್ಲೇ ಕಾಲೇಜು ನಿರ್ವಹಣೆ ಮಾಡುವುದಾಗಿ ಹೇಳುತ್ತಿವೆ. ಇದರಿಂದ  ಆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 300ಕ್ಕೂ ಅಧಿಕ ಅನುದಾನಿತ ಉಪನ್ಯಾ ಸಕರು ಬೀದಿಗೆ ಬರಲಿದ್ದಾರೆ. ಅಲ್ಲದೇ ಬಡ ವಿದ್ಯಾರ್ಥಿಗಳು ದುಬಾರಿ ಶುಲ್ಕ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.

ಅನುದಾನಿತ ಪಿಯು ಕಾಲೇಜಿನಲ್ಲಿ ಅನುದಾನ ರಹಿತ ವಿಭಾಗವನ್ನು ತೆರೆದು ಈ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸುತ್ತಿರುವುದರಿಂದಲೇ ಈ ಎಲ್ಲಾ ಸಮಸ್ಯೆ ಉದ್ಭವಿಸಿದೆ. ಅನುದಾನಿತ ವಿಭಾಗ ಮುಚ್ಚಿದರೆ ಬಡ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಅನ್ಯಾಯವಾಗಲಿದೆ. ಕಾಲೇಜು ಆಡಳಿತ ಮಂಡಳಿ ಪರವಾಗಿ ಇಲಾಖೆ ನಿರ್ಧಾರ ತೆಗೆದುಕೊಂಡಲ್ಲಿ, ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next