ಶಿರಸಿ: ಇಲ್ಲಿನ ಸರಕಾರಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಹಾಗೂ ಇನ್ನೊಂದು ಪಾರ್ಶ್ವದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರ ಕ್ಯೂ ಇದ್ದು, ಇದರಿಂದ ನಿರೋಗಿಗಳಿಗೂ ಸೋಂಕು ತಗುಲುವ ಆತಂಕ ನಿರ್ಮಾಣ ಆಗಿದೆ.
ಈ ಮೊದಲು ಕೋವಿಡ್ ತಾಪಸಣೆ ಮಾಡಿಸಿಕೊಳ್ಳುವವರ ಹಾಗೂ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕೂಡ ಕಡಿಮೆ ಇತ್ತು. ಆದರೆ, ಈಗ ಸೋಂಕು ದ್ವಿಗುಣ ಆಗುತ್ತಿರುವುದರಿಂದ ತಪಾಸಣೆ ಹಾಗೂ ಲಸಿಕೆ ಹಾಕಿಸಿಕೊಳ್ಳುವರರ ಸಂಖ್ಯೆ ಅಧಿ ಕವಾಗುತ್ತಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ಹಾಕಲಾಗುತ್ತದೆ. ಎರಡನೇ ಅವಧಿಗೂ ಲಸಿಕೆ ಹಾಕಿಸಿಕೊಳ್ಳಲು ಬರುವವರೂ ಇದ್ದಾರೆ. ಇದರಿಂದ ಆಸ್ಪತ್ರೆ ಮುಂಭಾಗದಲ್ಲಿ ಸಹಜ ಒತ್ತಡ ನಿರ್ಮಾಣ ಆಗುತ್ತಿದೆ. ಸಹಜ ಒತ್ತಡದ ಕಾರಣದಿಂದ, ವಯಸ್ಸಾದವರೂ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬರುವುದರಿಂದ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಕಠಿಣವಾಗುತ್ತಿದೆ. ಹಾಗಾಗಿ ಕೋವಿಡ್ ಸೋಂಕು ಹೆಚ್ಚೋ ಭೀತಿ ಉಂಟಾಗಿದೆ.
ಗುರುವಾರ ಕೂಡ ಸಾಕಷ್ಟು ಜನ ಸರತಿಯಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದು ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ. ಈ ಮಧ್ಯೆ ಸರಕಾರಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲೇ ಇರುವ ಸರಕಾರಿ ರಾಯಪ್ಪ ಹುಲೇಕಲ್ ಶಾಲೆಯನ್ನೂ ಬಳಸಿ ಲಸಿಕೆ ಹಾಕಬಹುದು ಎಂಬುದು ನಾಗರಿಕರ ಒತ್ತಾಯವಾಗಿದೆ. ಮೇ 1ರಿಂದ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕೂಡ ದ್ವಿಗುಣ ಆಗುವುದರಿಂದ ಸಹಜ ಒತ್ತಡ ಕೂಡ ನಿರ್ಮಾಣ ಆಗಲಿದೆ. ಇದನ್ನು ತಪ್ಪಿಸಲು ತಾಲೂಕು ಆಡಳಿತ ತಾಲೂಕು ಆಸ್ಪತ್ರೆಯಲ್ಲಿನ ವ್ಯವಸ್ಥೆ ಬದಲಾಯಿಸಬೇಕು ಎಂದು ಆಗ್ರಹಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಕೇಳಲು ತಾಲೂಕು ಆಸ್ಪತ್ರೆ ವೈದ್ಯಾಧಿ ಕಾರಿ ಡಾ| ಗಜಾನನ ಭಟ್ಟ ಫೋನ್ ಸ್ವೀಕರಿಸಲಿಲ್ಲ. ನೋಟಿಸ್ ನೀಡಿದ್ದೇವೆ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಕೋವಿಡ್ ಸೋಂಕಿತನ ತಲೆಯಿಂದ ರಕ್ತ ಸೋರುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ತಾಲೂಕು ದಂಡಾಧಿಕಾರಿ ಎಂ.ಆರ್. ಕುಲಕರ್ಣಿ ಆಸ್ಪತ್ರೆ ವೈದ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಈ ವಿಷಯ ದೃಢಪಡಿಸಿದ ತಹಶೀಲ್ದಾರರು, ಆಸ್ಪತ್ರೆ ವೈದ್ಯಾಧಿ ಕಾರಿಗಳ ಪ್ರತಿಕ್ರಿಯೆ ಬಳಿಕ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಮಂಜು ದ್ಯಾವ ಪಟಗಾರ ಎಂಬವರು ಮೃತರಾಗಿದ್ದು, ಅವರು ಕೋವಿಡ್ ಸೋಂಕಿತರಾಗಿದ್ದರು. ಆದರೆ, ಅವರ ಕಳೇಬರಹ ಸುಡುವ ವೇಳೆ ತಲೆಯಿಂದ ರಕ್ತ ಕಂಡು ಪಿಪಿಕಿಟ್ ತೆರೆದಾಗ ಗಾಯವಾಗಿದ್ದು ಕಂಡು ಬಂದ ವೀಡಿಯೋ ವೈರಲ್ ಆಗಿತ್ತು. ಆಸ್ಪತ್ರೆಯ ಮೂಲ ಬಾತರೂಮಿನಲ್ಲಿ ಕಾಲು ಜಾರಿ ಬಿದ್ದಿದ್ದರು ಅವರು ಎಂದು ಹೇಳಿಕೆ ನೀಡಿತ್ತು.