Advertisement

ಶಾಲಾ ಮಕ್ಕಳಿಗೆ ತ್ವರಿತ ಪಠ್ಯ ಪೂರೈಕೆಗೆ ಆಗ್ರಹ

05:42 PM Jun 23, 2022 | Shwetha M |

ವಿಜಯಪುರ: ಸರ್ಕಾರ ಅನಗತ್ಯವಾಗಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಕೈ ಹಾಕಿ ಅಗತ್ಯವಿರುವ ಪಠ್ಯವನ್ನು ತೆಗೆದು ಹಾಕಿ ವಿವಾದ ಹುಟ್ಟುವಂತೆ ಮಾಡಿದೆ. ಇದರಿಂದ ಮಕ್ಕಳ ಓದಿಗೆ ಪುಸ್ತಕಗಳು ದೊರೆಯದಂತಾಗಿದೆ. ತ್ವರಿತ ಗತಿಯಲ್ಲಿ ಕನ್ನಡ ಶಾಲೆಗಳಿಗೆ ಪುಸ್ತಕಗಳು ವಿತರಣೆಯಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಿಸಿ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಕರವೇ ಜಿಲ್ಲಾಧ್ಯಕ್ಷ ಶೇಷರಾವ್‌ ಮಾನೆ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ನೂತನ ಸಮಿತಿಯನ್ನು ರಚಿಸಿ ಹಳೆಯ ಸಮಿತಿಗೆ ಬೆಲೆ ಇಲ್ಲದಂತೆ ಮಾಡಿ ಅಗತ್ಯವಿರುವ ವಿಷಯಗಳನ್ನು ಪಠ್ಯದಿಂದ ಕೈ ಬಿಡಲಾಗಿದೆ. ಅನಗತ್ಯ ವಿಷಯಗಳನ್ನು ಪಠ್ಯದಲ್ಲಿ ಸೇರಿಸುವ ಕೆಲಸಕ್ಕೆ ಮುಂದಾದ ಸರ್ಕಾರದ ಕ್ರಮ ಸರಿಯಲ್ಲ ಎಂದು ಹರಿಹಾಯ್ದರು.

ಪಠ್ಯದಲ್ಲಿ ಪುತ್ರಕಾಮಿಷ್ಟಿಯಾಗ ಹಾಗೂ ಅಶ್ವಮೇಧಯಾಗ ಯಜ್ಞ ಯಾಗಗಳು ಈ ದೇಶದ ಅಸ್ಮಿತೆಯೆಂದು ತಪ್ಪಾಗಿ ಹೇಳಲಾಗಿದೆ. ಆ ಮೂಲಕ ಶೈಕ್ಷಣಿಕ ದಾರಿ ತಪ್ಪಿಸುವ ಹುನ್ನಾರ ಸಮಿತಿ ಮಾಡಿರುವುದು ಗಂಭೀರ ವಿಷಯ. ಈ ಬಗ್ಗೆ ಜ್ಞಾನಿಗಳು ಅನಿಷ್ಟ ಪದ್ಧತಿಗಳೆಂದು ಹೇಳಿದ್ದಾರೆ. ಹಾಗಾಗಿ ಅವುಗಳನ್ನು ಪಠ್ಯದಿಂದ ತೆಗೆದು ಹಾಕಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬರಗೂರು ಸಮಿತಿಯ ಪಠ್ಯ ಪುಸ್ತಕದಲ್ಲಿ ದೋಷಗಳೆಂದು ಹೇಳುತ್ತಿರುವುದು ರೋಹಿತ್‌ ಚಕ್ರತೀರ್ಥ ಅವರ ಬೌದ್ದಿಕ ಅಜ್ಞಾನದ ಪ್ರತೀಕವಾಗಿದ್ದು, ರಾಷ್ಟ್ರಕವಿ ಕುವೆಂಪು ಅವರನ್ನು ಕಡೆಗಣಿಸಿರುವ ಕ್ರಮ ಖಂಡನಾರ್ಹ ಎಂದು ವಾಗ್ಧಾಳಿ ನಡೆಸಿದರು.

ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು, ಸಾಹಿತಿಗಳು, ದೇಶಕ್ಕಾಗಿ ಮಡಿದ ವೀರಗಾಥೆಯರ ಇತಿಹಾಸವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ಕೆಲವರ ಹೆಸರುಗಳನ್ನು ಪತ್ರಿಕೆಯಲ್ಲಿ ತೋರಿಸಿ ನೂತನ ಪಠ್ಯ ಪುಸ್ತಕ ಪರಿಷ್ಕರಣೆ ಅತ್ಯಂತ ಪರಿಣಾಮಕಾರಿ ಎಂದು ಸುಳ್ಳು ಹೇಳಿ ಸಮಿತಿಯಲ್ಲಿ ತಾವೇ ಉಳಿಯಬೇಕೆಂಬ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಪರಶುರಾಮ ಚಲವಾದಿ, ಸೋಮಶೇಖರ ವಾಲೀಕಾರ, ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಉಷಾ ಭಾಸ್ಕರ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜಯಶ್ರೀ ನಂದಿಕೋಲಮಠ, ರಮೇಶ ಪಾಟೀಲ, ಅಶೋಕ ನಂದಿಹಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next