Advertisement

ಮಹಿಳಾ ನೌಕರರಿಗೆ ಮೂಲಸೌಲಭ್ಯಕ್ಕೆ ಮನವಿ

04:07 PM Jul 20, 2022 | Team Udayavani |

ಧಾರವಾಡ: ಸರಕಾರಿ ನೌಕರರ ಕುಂದು-ಕೊರತೆಗಳ ನಿವಾರಣೆಗಾಗಿ ರಚನೆಗೊಂಡಿರುವ ಜಿಲ್ಲಾಮಟ್ಟದ ಜಂಟಿ ಸಮಾಲೋಚನಾ ಸಭೆಯು ಡಿಸಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿತು.

Advertisement

ವಿವಿಧ ಇಲಾಖೆಗಳಲ್ಲಿನ ನೌಕರರ ವೈಯಕ್ತಿಕ ಹಾಗೂ ಸಾಮೂಹಿಕ ಸಮಸ್ಯೆಗಳ ಕುರಿತು ಮಾತನಾಡಿದ ನೌಕರರ ಸಂಘದ ಜಿಲ್ಲಾಧ್ಯಕ್ಷ  ಎಸ್‌.ಎಫ್‌. ಸಿದ್ದನಗೌಡರ, ಅವಳಿನಗರದಲ್ಲಿ ಜಾರಿಯಲ್ಲಿರುವ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸರಕಾರಿ ಕಚೇರಿಗಳನ್ನು ಸೇರಿಸಿ ಸ್ಮಾರ್ಟ್‌ ಕಚೇರಿ ಮಾಡಲು ಕ್ರಮವಹಿಸಬೇಕು. ಮಹಿಳಾ ನೌಕರರಿಗೆ ಕಚೇರಿಯಲ್ಲಿ ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸರಕಾರಿ ನೌಕರರ ವಸತಿ ಗೃಹಗಳ ದುರಸ್ತಿಗೆ ನಿರ್ದೇಶನ ನೀಡಬೇಕು. ಲಕಮನಹಳ್ಳಿ ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಸರಕಾರಿ ನೌಕರರ ಕುಂದು-ಕೊರತೆಗಳನ್ನು ತಾಲೂಕು ಮಟ್ಟದಲ್ಲಿ ಆಲಿಸಿ, ಪರಿಹರಿಸಲು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಬಗೆಹರಿಸಲು ಜಂಟಿ ಸಮಾಲೋಚನ ಸಭೆ ಆಯೋಜಿಸಲು ನಿರ್ದೇಶನ ನೀಡಬೇಕು. ಸರಕಾರಿ ನೌಕರ ಸಂಘದ ಹುಬ್ಬಳ್ಳಿ ತಾಲೂಕು ಘಟಕಕ್ಕೆ ಹುಬ್ಬಳ್ಳಿ ಮಿನಿ ವಿಧಾನಸೌಧದಲ್ಲಿ ಸ್ಥಳಾವಕಾಶ ನೀಡಬೇಕು. ಧಾರವಾಡ ಮಿನಿ ವಿಧಾನಸೌಧದಲ್ಲಿ ಸ್ವತ್ಛತಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲು ವಿನಂತಿಸಿದರು.

ನೌಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌ .ಜಿ. ಸುಬ್ಟಾಪುರಮಠ ಮಾತನಾಡಿ, ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡದಲ್ಲಿ ಅಧಿಕಾರಿ, ಸಿಬ್ಬಂದಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಬೇಕು ಎಂದರು. ಜಿಪಂ ಸಿಇಒ ಡಾ| ಸುರೇಶ ಇಟ್ನಾಳ ಮಾತನಾಡಿ, ಜಿಪಂ ಹಂತದಲ್ಲಿ ನೌಕರರ ಎಲ್ಲ ಬೇಡಿಕೆ ಈಡೇರಿಸಲಾಗುವುದು. ನೌಕರರ ವಸತಿಗೃಹ ರಿಪೇರಿ ಕಾರ್ಯವನ್ನು ಜಿಪಂ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದೆ. ಡಿಎಚ್‌ಒ ಸೇರಿದಂತೆ ಇಲಾಖೆ ಅ ಧಿಕಾರಿಗಳು ಈ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಬಿ.ಸಿ. ಕರಿಗೌಡರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಶಿವಕುಮಾರ ಮಾನಕರ, ಉಪ ಪೊಲೀಸ್‌ ಅಧೀಕ್ಷಕ ಚಂದ್ರಕಾಂತ ಪೂಜಾರಿ, ಎಸಿಪಿ ವಿಜಯಕುಮಾರ ತಳವಾರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್‌.ಆರ್‌.ಪುರುಷೋತ್ತಮ ಇನ್ನಿತರರಿದ್ದರು.

ನೌಕರರ ಕುಂದು-ಕೊರತೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುವುದು. ಕೆಲವು ಬೇಡಿಕೆಗಳನ್ನು ಜಿಲ್ಲಾ ಹಂತದಲ್ಲಿ ಪರಿಹರಿಸಲಾಗುವುದು ಮತ್ತು ಉಳಿದವುಗಳನ್ನು ರಾಜ್ಯಮಟ್ಟಕ್ಕೆ ಪ್ರಸ್ತಾವನೆ ಕಳಿಸಲಾಗುವುದು. ನೌಕರರಿಗೆ ಕುಂದು ಕೊರತೆ ಉಂಟಾಗದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖಾ ಮಟ್ಟದಲ್ಲಿ ಕ್ರಮವಹಿಸಬೇಕು. ನೌಕರರು ಕಚೇರಿ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಸರಕಾರದ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು.
*ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

Advertisement

ಅನಧಿಕೃತ ವ್ಯಕ್ತಿಗಳು ಸರಕಾರಿ ಕಚೇರಿಗೆ ಕೆಲಸದ ವೇಳೆಯಲ್ಲಿ ಆಗಮಿಸಿ, ಕಚೇರಿ ಕರ್ತವ್ಯ ನಿರ್ವಹಣೆಗೆ ತೊಂದರೆ ಕೊಡುತ್ತಿದ್ದಾರೆ. ಈ ಕುರಿತು ಈಗಾಗಲೇ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ, ನೌಕರರು ನಿರ್ಭೀತಿಯಿಂದ ಕೆಲಸ ಮಾಡಲು ಸೂಕ್ತ ರಕ್ಷಣೆ ನೀಡಬೇಕು. ಅನೇಕರು ಅನಗತ್ಯವಾಗಿ ಆರ್‌ಟಿಐ ದುರ್ಬಳಕೆ ಮಾಡಿಕೊಂಡು ನೌಕರರು ಕರ್ತವ್ಯ ನಿರ್ವಹಿಸಲು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಆರ್‌ಟಿಐ ದುರ್ಬಳಕೆಯನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
*ಎಸ್‌.ಎಫ್‌. ಸಿದ್ದನಗೌಡರ,
ನೌಕರರ ಸಂಘದ ಜಿಲ್ಲಾಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next