ರಾಯಬಾಗ: ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ರಾಯಬಾಗ ಸಾರಿಗೆ ಘಟಕದಲ್ಲಿ ಪ್ರತಿಭಟನೆ ನಡೆಸಿ ಘಟಕ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಸುಟ್ಟಟ್ಟಿ ಮಾರ್ಗವಾಗಿ ಬರುವ ಸಿದ್ದಾಪುರ-ರಾಯಬಾಗ ಬಸ್ ಸರಿಯಾದ ಸಮಯಕ್ಕೆ ಬಾರದೇ ಇರುವುದರಿಂದ ಸುಟ್ಟಟ್ಟಿಮತ್ತು ಚಿಂಚಲಿ ರೈಲ್ವೆ ಸ್ಟೇಷನ್‌ದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಕಾಲೇಜ್‌ಗೆ ಬರಲು ಸಾಧ್ಯವಾಗದೆ ಸಮಸ್ಯೆಯಾಗುತ್ತಿದೆ. ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿಸಲ ಪ್ರತಿಭಟನೆ ನಡೆಸಿದಾಗ ಮತ್ತು ಮನವಿ ಕೊಟ್ಟಾಗ ಇನ್ನು ಮುಂದೆ ಸರಿಯಾದ ವೇಳೆಗೆ ನಿತ್ಯ ಬಸ್ ಬಿಡುವುದಾಗಿ ಹೇಳಿ ಅಧಿಕಾರಿಗಳು ನುಣಚಿಕೊಳ್ಳುತ್ತಿದ್ದಾರೆ. ಈಗ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗಳು ಪ್ರಾರಂಭವಾಗಿದ್ದು, ಸರಿಯಾದ ವೇಳೆಗೆ ಬಸ್ ಬರದೇ ಇರುವುದರಿಂದ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಶೀಘ್ರವೇ ಬಸ್ ಸೌಲಭ್ಯ ಕಲ್ಪಿಸದಿದ್ದರೆ ರಾಯಬಾಗ ಸಾರಿಗೆ ಘಟಕದ ವ್ಯವಸ್ಥಾಪಕರ ವಿರುದ್ಧ ಸ್ಥಳೀಯ ಶಾಸಕರ ಮತ್ತು ಸಾರಿಗೆ ಸಚಿವರ ಗಮನಕ್ಕೆ ತರಲಾಗುವುದು.ಅಷ್ಟೇ ಅಲ್ಲದೇ ಸುಟ್ಟಟ್ಟಿ ಮತ್ತು ಚಿಂಚಲಿ ರೈಲ್ವೆ ಸ್ಟೇಷನ್ ಹತ್ತಿರ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿದ್ದು ಒಡೆಯರ, ಅಕ್ಷಯ ಚಿಂಚಲಿ, ಪರಶುರಾಮ ಹೆಗಡೆ, ದೀಪಕ ನಾಯಿಕ, ಮಾಲಾ ಒಡೆಯರ, ಕೋಮಲ ಪಾಟೀಲ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.