ಮುಳಬಾಗಿಲು : ತಾಲೂಕಿನಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಕೂಡಲೇ ಅಭಿವೃದ್ಧಿ ಪಡಿಸಬೇಕು ಮತ್ತು ಎನ್. ಯಲುವಹಳ್ಳಿ ಶಾಲೆಯ ಕಟ್ಟಡವನ್ನು ಪೂರ್ಣಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ನಗರದ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಿಇಒ ಕೆಂಪರಾಮು ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಮಲತಾಯಿ ಧೋರಣೆ: ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸಮಾಜದ ಕಟ್ಟಕಡೆಯ ಪ್ರಜೆಗೂ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು, ಸ್ವಾವಲಂಬಿ ಜೀವನ ನಡೆಸಬೇಕು ಹಾಗೂ ಏಕ
ರೂಪದ ಶಿಕ್ಷಣ ಜಾರಿಯಾಗಬೇಕೆಂದು ಕನಸು ಕಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸು ಕನಸಾಗಿಯೇ ಉಳಿದಿದೆ, ಸರ್ಕಾರಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಗುಲಾಮರಾಗಿರುವುದರಿಂದ ಇಂದು ಶಿಕ್ಷಣವನ್ನು ವ್ಯಾಪಾರದ ದಂಧೆಯಾಗಿ ಮಾರ್ಪಟ್ಟಿರುವುದು ಇಡೀ ಸಮಾಜ ಅನಕ್ಷರಸ್ಥರಾಗಿ ಉಳಿಯುವುದಕ್ಕೆ ಸರ್ಕಾರಗಳ ಮಲತಾಯಿ ಧೋರಣೆಯೇ ಕಾರಣವಾಗಿದೆ ಎಂದು ಆರೋಪಿಸಿದರು.
ಸುಳ್ಳು ದಾಖಲೆ ಸೃಷ್ಟಿಸಿ ಅನುದಾನಕ್ಕೆ ಕನ್ನ: ಒಂದು ಕಡೆ ಸರ್ಕಾರಿ ಶಾಲೆಗಳನ್ನು ಉಳಿಸಲು ನೆಪಮಾತ್ರಕ್ಕೆ ನಾನಾ ಯೋಜನೆಗಳನ್ನು ಸರ್ಕಾರಗಳು ಜಾರಿ ಮಾಡುತ್ತಿದ್ದರೆ, ಸರ್ಕಾರಿ ಉದ್ಯೋಗದಲ್ಲಿರುವ ಉಪಾಧ್ಯಾಯರು ರಾಜಕೀಯ ಸಂಘಟನೆ, ಬಡ್ಡಿ ವ್ಯವಹಾರಗಳಲ್ಲಿ ತೊಡಗಿರುವುದು ಬಡವನ ವಿದ್ಯಾಭ್ಯಾಸದ ತೀವ್ರ ಪರಿಣಾಮ ಬೀರಿದೆ. ಮತ್ತೂಂದೆಡೆ ಸರ್ಕಾರದಿಂದ ಶಿಥಿಲಗೊಂಡಿರುವ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕೋಟ್ಯಂತರ ರೂ. ಬಿಡುಗಡೆಯಾಗುತ್ತಿದ್ದರೆ, ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಶಾಲೆಯ ಹಣವನ್ನು ನುಂಗಿ ನೀರು ಕುಡಿಯುತ್ತಿರುವ ಮುಖ್ಯೋಪಾಧ್ಯಾಯರೇ ಭ್ರಷ್ಟಾಚಾರಿಗಳಾದರೆ, ಇನ್ನು ವಿದ್ಯೆ ಕಲಿಸುವ ಗುರು ಯಾರು ? ಎಂದು ಕಿಡಿಕಾರಿದರು.
ಖಾಸಗಿ ಶಾಲೆಗೆ ಅವಕಾಶ: ಇದಕ್ಕೆ ಉದಾಹರಣೆ 2010ರಲ್ಲಿ ಎನ್.ಯಲುವಳ್ಳಿ ಶಾಲೆಯ ಕಟ್ಟಡಕ್ಕೆ ಮಂಜೂರಾಗಿದ್ದ ಹಣವನ್ನು ಅಲ್ಲಿನ ಮುಖ್ಯಶಿಕ್ಷಕರೇ ದುರುಪಯೋಪಡಿಸಿಕೊಂಡಿದ್ದಾರೆ, ಅಲ್ಲದೇ ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳು ಶಿಥಿಲಾವ್ಯಸ್ಥೆಗೆ ತಲುಪಿದ್ದು, ಮಕ್ಕಳು ತಮ್ಮ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ, ನಿಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತೇವೆ, ಹಾಗೂ ಉತ್ತಮ ಪ್ರಜೆ ಮಾಡುತ್ತೇವೆ ಎನ್ನುವ ಸರ್ಕಾರ ಗಲ್ಲಿಗೊಂದರಂತೆ ಖಾಸಗಿ ಶಾಲಾ ಕಾಲೇಜುಗಳು ತೆರೆಯಲು ಅವಕಾಶ ನೀಡಿ ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ನಶಿಸಿ ಹೋಗುವಂತೆ ಶಿಕ್ಷಣ ಕ್ಷೇತ್ರದ ಅಧಿಕಾರಿಗಳೇ ತೆರೆ ಮರೆಯಲ್ಲಿ ಕಸರತ್ತು ನಡೆಸಿ ಹಣಕ್ಕಾಗಿ ಬಡವರ ಶಿಕ್ಷಣವನ್ನು ಮಾರಾಟ ಮಾಡುತ್ತಿದ್ದಾರೆಂದು ಶಿಕ್ಷಣ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಬಿಇಒ ಕೆಂಪರಾಮು ಅವರಿಗೆ ಮನವಿ ಸಲ್ಲಿಸಿದರು.
ಹಣದ ದಂಧೆಗೆ ಕಡಿವಾಣ: ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪರಾಮು, ಕೂಡಲೇ ತಾಲೂಕಿನಾದ್ಯಂತ ಶಿಥಿಲ ಗೊಂಡಿರುವ ಶಾಲೆಗಳ ಪಟ್ಟಿಯನ್ನು ಮಾಡಿ, ಮೇಲಾಧಿಕಾರಿಗಳಿಗೆ ಕಳುಹಿಸುವುದರ ಜೊತೆಗೆ ಎನ್.ಯಲವಳ್ಳಿಯ ಶಾಲೆಯ ಕಟ್ಟಡ ಪೂರ್ಣಗೊಳಿಸಿ, ಮಕ್ಕಳಿಗೆ ಅನುಕೂಲ ಮಾಡಿಕೊಟ್ಟು ಖಾಸಗಿ ಶಿಕ್ಷಣಗಳ ಹಣದ ದಂಧೆಗೆ ಕಡಿವಾಣ ಹಾಕಲು ಪ್ರಯತ್ನ ಪಡುತ್ತೇವೆಂದು ಭರವಸೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಪಾರುಖ್ ಪಾಷ, ಹಸಿರು ಸೇನೆ ತಾಲೂಕು ಅಧ್ಯಕ್ಷ ಯಲವಹಳ್ಳಿ ಪ್ರಭಾಕರ್, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಪ್ರಧಾಣ ಕಾರ್ಯದರ್ಶಿ ವಿಜಯಪಾಲ್, ಗೌರವಾಧ್ಯಕ್ಷ ಮೇಲಾಗಾಣಿ ದೇವರಾಜ್, ಅಣ್ಣೆಹಳ್ಳಿ ವೆಂಕಟರವಣಪ್ಪ, ಅಣ್ಣೆಹಳ್ಳಿ ಶ್ರೀನಿವಾಸ್, ಅಣ್ಣೆಹಳ್ಳಿ ನಾಗರಾಜ, ನಂಗಲಿ ರೆಡ್ಡಿ, ಯುವ ಮುಖಂಡ ನಂಗಲಿ ಕಿಶೋರ್ ಕುಮಾರ್, ರಂಜಿತ್, ಸಾಗರ್, ಭರತ್, ಸುರೇಶ್, ಕಾವೇರಿ ಸುರೇಶ್, ಸುಪ್ರಿಂ ಚಲ, ಶಿವ, ಪುಲಕೇಶಿ ಹಳೇಕುಪ್ಪ ಗಜ, ಅಂಬ್ಲಿಕಲ್ ಮಂಜುನಾಥ, ಯಲವಹಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ, ಕೊಮ್ಮನಹಳ್ಳಿ ನವೀನ್,
ಪುತ್ತೇರಿ ನಾರಾಯಣಸ್ವಾಮಿ, ಪುತ್ತೇರಿ ರಾಜು, ಜುಬೇರ್‌ಪಾಷ, ಕಿರಣ್‌ಕುಮಾರ್, ಪ್ರಸನ್ನ,, ಈಕಾಂಬಳ್ಳಿ ಮಂಜು, ಕೋರಗಂಡಹಳ್ಳಿ ಮಂಜು, ನರಸಾಪುರ ಪುರುಶೋತ್ತಮ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.