ವಿಜಯಪುರ: ಬಡ್ತಿ ಮೀಸಲಾತಿಯಲ್ಲಿ ಎಸ್‌ಸಿ ಹಾಗೂ ಎಸ್‌ಟಿ ನೌಕರರ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ವಿಶೇಷ ನಿಯಮಾವಳಿ ರೂಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮತ ಪ್ರದರ್ಶನ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಸಮಿತಿ ಜಿಲ್ಲಾಧ್ಯಕ್ಷ ಬಿ.ಎಚ್. ನಾಡಗೇರಿ ಮಾತನಾಡಿ, ಬಡ್ತಿ ಮೀಸಲಾತಿ ರದ್ದತಿಯಿಂದಾಗಿ ಎಸ್‌ಸಿ ಹಾಗೂ ಎಸ್‌ಟಿ ನೌಕರರಿಗೆ ತೀವ್ರ ಅನ್ಯಾಯವಾಗಿದೆ.
ಈ ಅನ್ಯಾಯ ಸರಿಪಡಿಸಬೇಕಾದ ಅವಶ್ಯಕತೆ ಇದೆ. ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿದ ಆದೇಶದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ನೌಕರರ ಹಿತ ಕಡೆಗಣಿಸಲಾಗಿದೆ. ಈ ಸುಪ್ರಿಂ ಕೋರ್ಟ್ ಆದೇಶವನ್ನು ನಮ್ಮ ರಾಜ್ಯದ ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಮನಸ್ಸಿಗೆ ಬಂದ ಹಾಗೆ ವ್ಯತಿರಿಕ್ತವಾಗಿ ಅನುಷ್ಠಾನಗೊಳಿಸುತ್ತಿವೆ.
ನ್ಯಾಯಯುತವಾಗಿ ಆದೇಶವನ್ನು ಅನುಷ್ಠಾನಗೊಳಿಸುತ್ತಿಲ್ಲ. ಇದರಿಂದಾಗಿ ಎಸ್‌ಸಿ ಹಾಗೂ ಎಸ್‌ಟಿ ನೌಕರರಿಗೆ ಸಾಕಷ್ಟು ಅನ್ಯಾಯವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈ ಅನ್ಯಾಯ ತಪ್ಪಿಸಬೇಕಾದ ಅವಶ್ಯಕತೆ ಇದೆ. ಬಡ್ತಿ ಮೀಸಲಾತಿಯಲ್ಲಿ ಎಸ್‌ಸಿ ಹಾಗೂ ಎಸ್‌ಟಿ ನೊಂದ ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ವಿಶೇಷ ನಿಯಮಾವಳಿ ರೂಪಿಸಬೇಕು ಎಂದು ಆಗ್ರಹಿಸಿದರು.
ಎಸ್‌ಸಿ ಹಾಗೂ ಎಸ್‌ಟಿ ನೌಕರರ ನ್ಯಾಯಯುತವಾಗಿರುವ ಬೇಡಿಕೆಗೆ ಸ್ಪಂದನೆ ದೊರಕದೇ ಇದ್ದಲ್ಲಿ ರಾಜ್ಯದಾದ್ಯಂತ
ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು. ಪ್ರಕಾಶ ಕಟ್ಟಿಮನಿ, ಅಡಿವೆಪ್ಪ ಸಾಲಗಲ್, ಬಸವಂತ ಗುಣದಾಳ, ಅಮರಪ್ಪ ಚಲವಾದಿ, ಬಿ.ಟಿ. ವಾಗೊರೆ ಇದ್ದರು.