ಕಲಬುರಗಿ: ಕೋವಿಡ್ ರೋಗಿಗಳು ಬೇಗ ಚೇತರಿಸಿಕೊಳ್ಳಲು ಕೋವಿಡ್-19 ಪಾಸಿಟಿವ್ ಬಂದು ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಲು ಮುಂದಾಗುವಂತೆ ಅರಿವು ಮೂಡಿಸಲು ನಗರದಲ್ಲಿ ಜಾಗೃತಿ ನಡಿಗೆ ಹಮ್ಮಿಕೊಳ್ಳಲಾಗಿತ್ತು.
ಜಿ-99 ಸಂಘಟನೆ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಬಳಿಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಗೃತಿ ನಡಿಗೆ ನಡೆಸಲಾಯಿತು.
ಜಾಥಾದ ಮಾರ್ಗದುದ್ದಕ್ಕೂ ಕರಪತ್ರಗಳ ಪ್ರದರ್ಶನ, ಜಾಗೃತಿ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು, ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಲು ಸಿದ್ಧರಿದ್ದಾರೆ. ಕಲಬುರಗಿಯಲ್ಲೂ ಪ್ಲಾಸ್ಮಾ ಚಿಕಿತ್ಸೆ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರು-ಹುಬ್ಬಳ್ಳಿಯಂತೆ ನಮ್ಮಲ್ಲೂ ಪ್ಲಾಸ್ಮಾ ಥೆರಪಿ ಆರಂಭಿಸಬೇಕು. ಪ್ಲಾಸ್ಮಾ ಡೋನರ್ ಕೇಂದ್ರ ಸ್ಥಾಪಿಸಬೇಕು. ಪ್ಲಾಸ್ಮಾ ದಾನಿಗಳು ಸೊಲ್ಲಾಪುರ, ಹೈದರಾಬಾದ್‌ಗೆ ಹೋಗಿ ನೀಡಿ ಬರುತ್ತಿದ್ದಾರೆ. ಇದರ ಲಾಭ ಜಿಲ್ಲೆಯ ಸೋಂಕಿತರಿಗೆ ಸಿಗುವಂತೆ ಆಗಬೇಕೆಂದು ಜಿ-99 ಮುಖ್ಯಸ್ಥ ಶರಣು ಪಪ್ಪಾ ಮತ್ತು ನಮ್ಮ ಸಂಕಲ್ಪ ತಂಡದ ಲಕ್ಷ್ಮೀಕಾಂತ ಜೋಳದ ಹೇಳಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಾಗೃತಿ ತಂಡದ ಡಾ| ವಿನೋದಕುಮಾರ ಬಿ., ಆನಂದ ಚವ್ಹಾಣ, ಸಿದ್ದರಾಜ ಬಿರಾದಾರ, ಮೋಹನ ರಾಠೊಡ, ಅಶ್ವಿನಕುಮಾರ ಯಲ್ಲಾಲಿಂಗ, ಮಾಲಾ ಡಿ., ಸಂಗೀತಾ, ಮಂಜುನಾಥ ಅಂಕಲಗಿ, ಸಂತೋಷ ಪಾಟೀಲ, ಪರಮೇಶ್ವರ, ರಾಘು ಬಳ್ಳಾ, ವೀರೇಶ ಪಾಟೀಲ, ಶ್ರೀನಿವಾಸ ಬೋಸ್ಲೆ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.