ಮಂಜೇಶ್ವರ: ಕೇರಳ ಸರಕಾರದ ಕಡ್ಡಾಯ ಮಲೆಯಾಳ ಅಧ್ಯಾದೇಶದಿಂದ ಕಾಸರಗೋಡಿನ ಕನ್ನಡಿಗರು ಅನ್ಯಾಯಕ್ಕೊಳಗಾಗುತ್ತಿದ್ದು, ಪ್ರಸ್ತುತ ಅಧ್ಯಾದೇಶದಿಂದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಲು ಕೇರಳ ಸರಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿ ಕಾಸರಗೋಡು ಜಿ. ಪಂ.ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿಯನ್ನು ಸಲ್ಲಿಸಿದರು.
Advertisement
ಶುಕ್ರವಾರ ಮಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಅತಿಥಿ ಗೃಹದಲ್ಲಿ ಭೇಟಿ ಮಾಡಿದ ಅವರು ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸವಾಲು ಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಅಭಯಚಂದ್ರ ಜೈನ್, ಮೇಯರ್ ಕವಿತಾ ಸನಿಲ್, ಟಿ.ಎಂ. ಶಹೀದ್ ಮುಂತಾದವರು ಉಪಸ್ಥಿತರಿದ್ದರು.ಪ್ರಜಾಸತ್ತಾತ್ಮಕ ರಾಷ್ಟ್ರವಾದ ಸ್ವತಂತ್ರ ಭಾರತದಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡನೆ ಸಂದರ್ಭದಲ್ಲಿ ಕಾಸರಗೋಡು ಪ್ರದೇಶ ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಂಡಿತು. ಆ ಬಳಿಕ ಕನ್ನಡಿಗರು ನಿರಂತರ ಶೋಷಣೆ ಗೊಳಗಾಗುತ್ತಿದ್ದಾರೆ. ಇದೀಗ ಕೇರಳ ಸರಕಾರ ಕಡ್ಡಾಯ ಮಲಯಾಳ ಅಧ್ಯಾದೇಶವನ್ನು ಜ್ಯಾರಿಗೆ ತರುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರ ಮೇಲೆ ತೂಗುಗತ್ತಿಯನ್ನಿರಿಸಿದೆ. ಆ ಮೂಲಕ ಭಾಷಾ ಅಲ್ಪಸಂಖ್ಯಾಕರ ಸಾಂವಿಧಾನಿಕ ಹಕ್ಕು ಸವಲತ್ತುಗಳನ್ನು ಕಸಿಯತೊಡಗಿದೆ. ಕೇರಳ ಸರಕಾರ ಜಾರಿಗೆ ತಂದ ಭಾಷಾ ಮಸೂದೆ ಹಾಗೂ ಮಲಯಾಳ ಕಡ್ಡಾಯ ಅಧ್ಯಾದೇಶದಿಂದಾಗಿ ಇಲ್ಲಿನ ಕನ್ನಡ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಲೆಯಾಳಂ ಕಲಿಯಲೇ ಬೇಕಾದ ಅನಿವಾರ್ಯ ಸೃಷ್ಟಿಗೊಂಡಿದೆ.
Related Articles
Advertisement
2012-13ನೇ ಶೆ„ಕ್ಷಣಿಕ ವರ್ಷ ದಲ್ಲಿ ಕಾಸರಗೋಡು ಜಿಲ್ಲೆಯ ಹೊಸದುರ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿಭಾಗ ಸಮಾಜಶಾಸ್ತ್ರ ವಿಷಯವನ್ನು ಬೋಧಿಸಲು ಕನ್ನಡ ಭಾಷೆಯ ಗಂಧಗಾಳಿಯೇ ಇಲ್ಲದ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿತ್ತು. ಭಾಷಾ ಅಲ್ಪಸಂಖ್ಯಾಕರಿಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು ಎಂಬ ಸಂವಿಧಾನದ ಕಲಂ 350 (ಎ) ಸ್ಪಷ್ಟ ಉಲ್ಲಂಘನೆ. ಇದರ ವಿರುದ್ಧ ಕನ್ನಡಿಗರು ಧ್ವನಿ ಎತ್ತಿದ್ದಾರೆ. ಕನ್ನಡ ಭಾಷಾ ಜ್ಞಾನವನ್ನು ಸಂದರ್ಶನ ಸಮಯದಲ್ಲಿ ಪರೀಕ್ಷಿಸುವಾಗ ರಾಜಕೀಯ ಪ್ರಭಾವದಿಂದಲೋ, ಮೀಸಲಾತಿ ಕಾರಣದಿಂದಲೋ ಕನ್ನಡ ಜ್ಞಾನ ಇಲ್ಲದವರೂ ‘ಕನ್ನಡ ತಿಳಿದಿದೆ’ ಎಂದು ನೇಮಕಗೊಳ್ಳುತ್ತಾರೆ. ಇದು ವಂಚನೆ ಯಾಗಿದೆ. ಈ ವಂಚನೆ ನಿರಂತರವಾಗಿದೆ.
ಕಾಸರಗೋಡಿನ ಕನ್ನಡಿಗರ ಮೇಲಿನ ಮಲತಾಯಿ ಧೋರಣೆ ವಿರುದ್ಧ ಕನ್ನಡಿಗರ ಹೋರಾಟಕ್ಕೆ ತಾವು ಬೆಂಬಲ ಸೂಚಿಸುವಂತೆಯೂ ಇಲ್ಲಿನ ಕನ್ನಡಿಗರ ಹಿತರಕ್ಷಣೆಗಾಗಿ ಪ್ರಯತ್ನಿಸಿ, ಶತಮಾನಗಳಿಂದ ಜನ ಜೀವನದಲ್ಲಿ ವ್ಯಾವಹಾರಿಕವಾಗಿ ಹರಿದು ಬಂದಿರುವ ಕನ್ನಡ ಭಾಷೆ, ಸಂಸ್ಕೃತಿ ಕಲೆ, ಸಂಪ್ರದಾಯಗಳನ್ನು ಸಂರಕ್ಷಿಸುವಂ ತೆಯೂ. ಸರಕಾರದಿಂದ ಹೇರಲಾದ ಕಡ್ಡಾಯ ಮಲಯಾಳ ಕಲಿಕೆಯಿಂದ ಕಾಸರಗೋಡಿನ ಕನ್ನಡಿಗರನ್ನು ಹೊರತು ಪಡಿಸುವ ಆದೇಶವನ್ನು ಹೊರಡಿಸಲು ಕೇರಳ ಸರಕಾರಕ್ಕೆ ತೀವ್ರ ಒತ್ತಡ ಹೇರುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.