Advertisement

2000 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ

06:45 AM Aug 31, 2018 | Team Udayavani |

ಬೆಂಗಳೂರು: ಭಾರೀ ಮಳೆ ಮತ್ತು ಪ್ರವಾಹದಿಂದ ಕೊಡಗು ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು 3435.80
ಕೋಟಿ ರೂ. ಹಾನಿಯಾಗಿದ್ದು, ತಕ್ಷಣದ ಪರಿಹಾರವಾಗಿ 2000 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ
ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಅಲ್ಲದೆ, ಸಚಿವರ ತಂಡವೊಂದವನ್ನು ಸಮೀಕ್ಷೆಗೆ ಕಳುಹಿಸಿಕೊಡುವಂತೆ ಕೋರಲಾಗಿದೆ.

Advertisement

ದೆಹಲಿಯಲ್ಲಿ ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ಭೇಟಿಯಾದ ಡಿಸಿಎಂ ಡಾ.ಜಿ.ಪರಮೇಶ್ವರ್‌, ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಮತ್ತಿತರರ ನಿಯೋಗ ರಾಜ್ಯದಲ್ಲಿ ಮಳೆಹಾನಿ ಕುರಿತು ವಿಸ್ತೃತ ಪ್ರಸ್ತಾವನೆ ಸಲ್ಲಿಸಿ, ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ಕೋರಿತು. ಒಂದೆಡೆ ಮಳೆಹಾನಿಯಿಂದ ಸಾವಿರಾರು ಕೋಟಿ ರೂ.ನಷ್ಟ ಸಂಭವಿಸಿದರೆ 12 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿ ಬರ ಪರಿಸ್ಥಿತಿ ಇದೆ. ಹೀಗಾಗಿ ಈ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಘೋಷಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕೂ ಅನುದಾನ ನೀಡಬೇಕೆಂಬ ಕೋರಿಕೆ ಸಲ್ಲಿಸಲಾಗಿದೆ.

ರಾಜ್ಯ ಸರ್ಕಾರದ ಮನವಿಗೆ ಪೂರಕವಾಗಿ ಸ್ಪಂದಿಸಿದ ಗೃಹ ಸಚಿವ ರಾಜನಾಥ್‌ ಸಿಂಗ್‌, ವಿದೇಶ ಪ್ರವಾಸದಲ್ಲಿರುವ
ಪ್ರಧಾನಿ ನರೇಂದ್ರ ಮೋದಿ ಅವರು ಹಿಂತಿರುಗಿದ ಕೂಡಲೇ ಅವರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯಕ್ಕೆ ಅಗತ್ಯ
ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ರಾಜ್ಯದ ಬಗ್ಗೆ ಕೇಂದ್ರದ ಮೆಚ್ಚುಗೆ: ಈ ಮಧ್ಯೆ, ಕೊಡಗು ಸೇರಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉದ್ಭವಿಸಿದ
ಪ್ರವಾಹ ಪರಿಸ್ಥಿತಿ, ಗುಡ್ಡ ಕುಸಿತ ಮುಂತಾದ ಪ್ರಕೃತಿ ವಿಕೋಪ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ವಿಕೋಪ ಸಂಭವಿಸಿದ ತಕ್ಷಣ ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ. ನಿರಾಶ್ರಿತರ ಶಿಬಿರಗಳನ್ನು ಆರಂಭಿಸಿ
ಸಾವಿರಾರು ಮಂದಿಗೆ ಪರಿಹಾರ ಒದಗಿಸಿದೆ ಎಂದು ಶ್ಲಾ ಸಿದ ಕೇಂದ್ರ ಸಚಿವರು, ಸಂತ್ರಸ್ತರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು ಎಂದು ತಿಳಿದು ಬಂದಿದೆ.

Advertisement

ಶೀಘ್ರ ಕೇಂದ್ರ ತಂಡ: ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ,ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟ ಪರಿಶೀಲನೆಗೆ ಶೀಘ್ರದಲ್ಲೇಕೇಂದ್ರದಿಂದ ಅಧಿಕಾರಿಗಳ ತಂಡ ರಾಜ್ಯಕ್ಕೆ  ಭೇಟಿ ನೀಡಲಿದೆ. ಪ್ರವಾಹದಿಂದಆಗಿರುವ ಹಾನಿಗೆ ಪರಿಹಾರ ಕೋರಿ ಮನವಿ ಸಲ್ಲಿಸಿದ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಹಾನಿ ಬಗ್ಗೆ ಪರಿಶೀಲನೆಗೆ ಅಧಿಕಾರಿಗಳ ತಂಡ ಕಳುಹಿಸಿಕೊಡಲಾಗುವುದು. ಅಧಿಕಾರಿಗಳ ತಂಡ ಪರಿಶೀಲಿಸಿ ವರದಿ ಸಲ್ಲಿಸಿದ ಬಳಿಕ ಅಗತ್ಯ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಕರಾವಳಿ ಭದ್ರತೆ ಪೊಲಿಸ್‌ ಆಧುನೀಕರಣಕ್ಕೆ ಅನುದಾನ ಒದಗಿಸುವಂತೆ ರಾಜನಾಥ್‌ ಸಿಂಗ್‌ಗೆ ಮುಖ್ಯಮಂತ್ರಿ ಮನವಿ ಮಾಡಿದರು. ಕರಾವಳಿ ಭದ್ರತೆಯನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಈ ಮನವಿ ಮಾಡಿಕೊಳ್ಳಲಾಗಿದ್ದು, ಕೇಂದ್ರ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಪರಮೇಶ್ವರ್‌ ಮಾತನಾಡಿ, ಕರಾವಳಿ ಭಾಗದಲ್ಲಿ ರಕ್ಷಣಾ ತಂಡಗಳಿಗೆ ಅಗತ್ಯ ವಸ್ತುಗಳ ಖರೀದಿಗಾಗಿ 84 ಕೋಟಿ ರೂ. ಅನುದಾನದ ಅಗತ್ಯವಿದ್ದು, ಈ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next