Advertisement

ನೀರು ದುರ್ಬಳಕೆ ವಿರುದ್ಧ ಕ್ರಮಕ್ಕೆ ಆಗ್ರಹ

08:43 PM Jul 16, 2019 | mahesh |

ಬಜಪೆ: ಮಳವೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಂಟಿ ಸಮಿತಿ ಸಭೆಯು ಜೋಕಟ್ಟೆ ಗ್ರಾ. ಪಂ. ಅಧ್ಯಕ್ಷೆ ಹಾಗೂ ಜಂಟಿ ಸಮಿತಿಯ ಅಧ್ಯಕ್ಷೆ ಪ್ರಸಿಲ್ಲಾ ಮೊಂತೇರೋ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಳವೂರು ಗ್ರಾ.ಪಂ. ಸಭಾಭವನದಲ್ಲಿ ಜರಗಿತು.

Advertisement

ಪ್ರದೇಶದಲ್ಲಿ ಈಗಾಗಲೇ ಮಳೆ ಬಂದರೂ ಕೂಡ ವೆಂಟೆಡ್‌ ಡ್ಯಾಂನ ನೀರಿನ ಬಳಕೆ ಕಡಿಮೆಯಾಗಿಲ್ಲ. ಕೆಲವೆಡೆ ವೆಂಟೆಡ್‌ ಡ್ಯಾಂನ ನೀರನ್ನು ಬಾವಿಗೆ ಬಿಡಲಾಗುತ್ತಿದ್ದು ಇದರಿಂದ ಅನಾವಶ್ಯಕವಾಗಿ ಪೋಲಾಗುತ್ತಿದೆ. ಇಂತಹ ನೀರು ದುರ್ಬಳಕೆಯ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಂಟಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ವಿದ್ಯುತ್‌ ಬಿಲ್‌ ಬಾಕಿ ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 14 ಗ್ರಾಮಗಳನ್ನೊಳಗೊಂಡ 9 ಗ್ರಾಮ ಪಂಚಾಯತ್‌ಗಳು ಮೂರುವರೆ ವರ್ಷಗಳಲ್ಲಿ ಒಟ್ಟು 19ಲಕ್ಷರೂ. ವಿದ್ಯುತ್‌ ಬಿಲ್‌ನ್ನು ಮಾತ್ರ ಕಟ್ಟಿವೆ. ಆದರೆ ಸದ್ಯ 65 ಲಕ್ಷ ರೂ. ಬಾಕಿ ಇದೆ. ಅದಷ್ಟು ಬೇಗ ಗ್ರಾಮ ಪಂಚಾಯತ್‌ಗಳು ಬಿಲ್‌ನ್ನು ಕಟ್ಟಬೇಕು ಎಂದು ಕಾವೂರು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮನೋಹರ್‌ ಶೆಟ್ಟಿ ಸಭೆಯಲ್ಲಿ ತಿಳಿಸಿದರು.

ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬಳಕೆಯಾದ ವಿದ್ಯುತ್‌ನ ಒಟ್ಟು ಯೂನಿಟ್‌ ಹಾಗೂ ಮೊತ್ತದ ಬಿಲ್‌ನ್ನು ಎಲ್ಲ ಗ್ರಾಮ ಪಂಚಾಯತ್‌ಗೆ ಕೊಡಬೇಕು ಎಂದು ಸಭೆಯಲ್ಲಿ ಅಗ್ರಹಿಸಲಾಯಿತು. ಒಂದು ಕೊಳವೆಬಾವಿಯ ಪಂಪ್‌ಗೆ ವಿದ್ಯುತ್‌ ಬಿಲ್‌ ಒಂದು ತಿಂಗಳಿಗೆ 2.25ಲಕ್ಷ ರೂ. ಬಂದಿದೆ. ಈ ಸಮಸ್ಯೆಯ ಪರಿಹಾರಕ್ಕೆ ಬಗ್ಗೆ ಮೆಸ್ಕಾಂ ಸಭೆಯಲ್ಲಿ ಮನವಿ ಮಾಡಲಾಯಿತು.

ನೀರಿನ ಬೇಡಿಕೆಯಿದೆ
ಬಳಕೆಯಾಗದ ಕೊಳವೆ ಬಾವಿಯ ಬಗ್ಗೆ ಮೆಸ್ಕಾಂಗೆ ತಿಳಿಸಬೇಕು. ಇಲ್ಲದಿದ್ದಲ್ಲಿ ಮೆಸ್ಕಾಂನ ಕನಿಷ್ಟ ಬಿಲ್‌ ಬರುತ್ತದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವ್ಯಾಪ್ತಿಯ 4 ಎಸ್‌ಇಝಡ್‌ ಕಾಲನಿಗೂ ನೀರು ನೀಡಬೇಕಾಗಿದೆ. ವಿಮಾನ ನಿಲ್ದಾಣ ದಿನಕ್ಕೆ 2ಲಕ್ಷ ಲೀ. ನೀರಿನ ಬೇಡಿಕೆ ಇದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯವಾಹಕ ಎಂಜಿನಿಯರ್‌ ಪ್ರಭಾಕರ ಸಭೆಯಲ್ಲಿ ತಿಳಿಸಿದರು.

Advertisement

ಸಭೆಗೆ ಕೆಲವು ಪಂಚಾಯತ್‌ಗಳ ಅಧ್ಯಕ್ಷರು, ಪಿಡಿಒಗಳು ಸಭೆಗೆ ಬಾರದ ಕಾರಣ ಅವರಿಗೆ ಮಾಹಿತಿ ನೀಡಲು ವಾಟ್ಸಾಪ್‌ ಗ್ರೂಫ್ ತೆರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಪೆರ್ಮುದೆ ಗ್ರಾ.ಪಂ. ಅಧ್ಯಕ್ಷೆ ಸರೋಜಾ, ಮಳವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್‌ ಅರ್ಬಿ, ತಾ.ಪಂ. ಸದಸ್ಯ ಬಶೀರ್‌ ಆಹಮದ್‌, ಬಜಪೆ ಗ್ರಾ.ಪಂ. ಅಧ್ಯಕ್ಷೆ ರೋಜಿ ಮಥಾಯಸ್‌, ಪಿಡಿಒ ಸಾಯೀಶ್‌ ಚೌಟ, ಪೆರ್ಮುದೆ ಗ್ರಾ.ಪಂ. ಪಿಡಿಒ ಶೈಲಜಾ, ಎಕ್ಕಾರು ಗ್ರಾ. ಪಂ. ಅಧ್ಯಕ್ಷ ಸುರೇಶ್‌ ಶೆಟ್ಟಿ, ಪಿಡಿಒ ದೀಪಿಕಾ, ಜೋಕಟ್ಟೆ ಪಿಡಿಒ ಅಸಫ್‌ ಮಹಮದ್‌, ಬಾಳ ಗ್ರಾ.ಪಂ.ಅಧ್ಯಕ್ಷ ಆದಂ, ನೀರಿನ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಪಿಡಿಒ ವೆಂಕಟರಮಣ ಪ್ರಕಾಶ್‌ ಸಭೆ ನಿರ್ವಹಿಸಿದರು..

ವಿದ್ಯುತ್‌ ಬಿಲ್‌ ಕಟ್ಟಲು ಖಾತೆ ತೆರೆಯಲು ನಿರ್ಧಾರ
ಕೆಲವು ಪಂಚಾಯತ್‌ಗಳು ವಿದ್ಯುತ್‌ ಬಿಲ್‌ ಕಟ್ಟಿದ್ದಾರೆ. ಈ ಬಗ್ಗೆ ಮೆಸ್ಕಾಂಗೆ ತಿಳಿದಿಲ್ಲ. ಪಂಚಾಯತ್‌ಗಳು ವಿದ್ಯುತ್‌ ಬಿಲ್‌ ಕಟ್ಟಲು ಸಿದ್ಧವಿದ್ದು ಪ್ರಥಮವಾಗಿ ಮೆಸ್ಕಾಂ ಇಲಾಖೆಯು ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಂಟಿ ಸಮಿತಿಯ ಹೆಸರಲ್ಲಿ ಖಾತೆ ತೆರೆಯಬೇಕು. ಪಂಚಾಯತ್‌ನ 14ನೇ ಹಣಕಾಸು ಯೋಜನೆಯ ಖಾತೆಯೊಂದಿಗೆ ಇಂಗಿತ (ಫ್ರೀಜ್‌)ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಬಗ್ಗೆ ಕಾರ್ಯನಿರ್ವಾಹಕ ಎಂಜಿನಿಯರ್‌ ಮನೋಹರ್‌ ಶೆಟ್ಟಿ ಸಮ್ಮತಿಸಿದ್ದು ಅದಷ್ಟು ಬೇಗ ಖಾತೆ ತೆರೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next