ಗಣರಾಜ್ಯೋತ್ಸವ ಎಂದರೆ ನಮ್ಮ ರಾಷ್ಟ್ರದ ಮೂಲ ದಾಖಲೆ ಎನಿಸಿದ ಭಾರತ ಸಂವಿಧಾನವನ್ನು ಲೋಕಾ ರ್ಪಣೆಗೊಳಿಸಿದ ದಿನ. 1950ರಿಂದ ನಿರಂತರವಾಗಿ ಜನವರಿ 26ರಂದು ಗಣರಾಜ್ಯೋತ್ಸವ ದಿನವಾಗಿ ಸಂಭ್ರಮಿಸುತ್ತೇವೆ.
ರಾಷ್ಟ್ರದ ಜನತೆಯ ಸಾಮೂಹಿಕ ಸ್ವಯಂ ಆಡಳಿತ ಎಂಬ ತತ್ತ ಹಾಗೂ ಸತ್ವವನ್ನು ಬೀರುವ ಪರ್ವ ದಿನವೇ ಗಣರಾಜ್ಯ ಉತ್ಸವ. ಈ ದಿನವನ್ನೇ ಭಾರತ ಸಂವಿಧಾನ ಉದ್ಘಾಟನೆಗೆ ಆರಿಸಿಕೊಂಡ ಬಗೆಗೂ ಒಂದು ಭಾವನಾತ್ಮಕ ಹಿನ್ನೆಲೆಯಿದೆ. 1930ರಲ್ಲಿ ಅಂದಿನ ಅಖಿಲ ಭಾರತ ಕಾಂಗ್ರೆಸ್ ಪೂರ್ಣ ಸ್ವರಾಜ್ಯವೇ ನಮ್ಮ ಗುರಿ ಎಂಬುದಾಗಿ ಲಾಹೋರ್ ಅಧಿವೇಶನದಲ್ಲಿ ಘಂಟಾಘೋಷವಾಗಿ ಸಾರಿದ ದಿನವೇ ಜನವರಿ 26. ಇದನ್ನು ಪುನರ್ ಮನನ ಮಾಡಿ ಈ ದೇಶದ ಭವಿಷ್ಯದ ರೂವಾರಿಗಳು ಸ್ವಯಂ ಪ್ರಜೆಗಳೇ ಎಂಬುದನ್ನು ಶ್ರುತ ಪಡಿಸುವುದೇ ಈ ಉತ್ಸವದ ಮೂಲ ಚಿಂತನೆ. ವಿಶ್ವ ಸಮುದಾಯದಲ್ಲಿ ಭಾರತ ಒಂದು ಜಾಗೃತ ಹಾಗೂ ಪ್ರಗತಿಶೀಲ ರಾಷ್ಟ್ರವಾಗಬೇಕೆಂಬ ಸಾಮೂಹಿಕ ಆಶಯಕ್ಕೆ ಈ ಉತ್ಸವ ಮೂರ್ತ ಸ್ವರೂಪ ನೀಡಬೇಕಾಗಿದೆ. ನಮ್ಮ ರಾಷ್ಟ್ರೀಯ ಚೇತನ ಹಾಗೂ ಶಕ್ತಿಯ ದ್ಯೋತಕವಾಗಿ ಹೊಸದಿಲ್ಲಿಯಿಂದ ಹಿಡಿದು ರಾಜ್ಯ ರಾಜಧಾನಿ, ಜಿಲ್ಲಾ ಕೇಂದ್ರ ಹಾಗೂ ಗ್ರಾಮ ಮಟ್ಟದ ವರೆಗೆ ಜನತೆಯ ಸುಪ್ತ ರಾಷ್ಟ್ರ ಭಕ್ತಿಯನ್ನು ಬಡಿದೆಬ್ಬಿ ಸುವ ಆಶಯವೇ ಈ ಉತ್ಸವದ ಮೂಲಬಿಂದು.
ವ್ಯಕ್ತಿಗತ ಬದುಕಿನ ಪರಿಧಿಯಿಂದ ಹಿಡಿದು ಕೌಟುಂಬಿಕ, ಗ್ರಾಮ, ನಗರ, ರಾಜ್ಯ ಹಾಗೂ ರಾಷ್ಟ್ರದ ವರೆಗಿನ ವಿಶಾಲ ತಳಹದಿಯ ಪರಿವರ್ತನೆ ಹಾಗೂ ಸಶಕ್ತಿಯ ಉದ್ದೀಪನೆಗೆ ಗಣರಾಜ್ಯೋತ್ಸವ ಪ್ರೇರೇಪಣೆ ನೀಡುವಂತಹದು. ಸಂವಿಧಾನದತ್ತವಾಗಿ ಈ ನೆಲದಲ್ಲಿ ನೆಮ್ಮದಿಯ ಬದುಕು ಹೊಂದುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇದನ್ನು ಸಂವಿಧಾನಾತ್ಮಕವಾಗಿ ನಮಗೆ ನಾವೇ ನೀಡಿದ್ದೇವೆ. ನಮ್ಮ ರಾಜ್ಯಾಂಗ ಘಟನೆಯ ಪ್ರಸ್ತಾವನೆಯೇ ಪ್ರಚುರ ಪಡಿಸುವಂತೆ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ವ್ಯಕ್ತಿ ಗೌರವ ಹಾಗೂ ರಾಷ್ಟ್ರೀಯ ಏಕತೆಗಾಗಿ ನಾವು ಈ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುತ್ತೇವೆ. ಜನತಂತ್ರ ಪದ್ಧತಿ, ಸಮಾಜವಾದ, ಸರ್ವಧರ್ಮ ಸಮಭಾವದೊಂದಿಗೆ ಈ ರಾಷ್ಟ್ರವನ್ನು “ಗಣರಾಜ್ಯ’ ಎಂದು ಘೋಷಿಸಿದ್ದೇವೆ.
ನಮ್ಮ ಮೂಲಭೂತ ದಾಖಲೆ ಸಂವಿಧಾನವೇ ಸ್ಪಷ್ಟವಾಗಿ ಧ್ವನಿಸುವಂತೆ ನಮ್ಮದು ಕೇವಲ ಕಾನೂನು ರೀತಿಯ ಕಟ್ಟುನಿಟ್ಟಿನ “ಪೊಲೀಸ್ ರಾಷ್ಟ್ರ ವ್ಯವಸ್ಥೆ’ಯಷ್ಟೇ ಖಂಡಿತಾ ಅಲ್ಲ. ಬದಲಾಗಿ, ಕಲ್ಯಾಣ ರಾಜ್ಯ, ಸುಖೀ ರಾಜ್ಯ, ರಾಮರಾಜ್ಯ ಅಥವಾ ಇದರ ಅರ್ಥವನ್ನು ಹೀರಿನಿಂತ ವ್ಯವಸ್ಥೆ ನಮ್ಮದು. ಇದನ್ನು ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳ 3ನೇ ವಿಭಾಗದಲ್ಲಿ ಅಂತೆಯೇ ರಾಜ್ಯ ನಿರ್ದೇಶಕ ತಣ್ತೀಗಳನ್ನು ತುಂಬಿನಿಂತ 4ನೇ ವಿಭಾಗದಲ್ಲಿ ಸ್ಪಷ್ಟವಾಗಿ ವಿವರಿಸುತ್ತದೆ. “ಪ್ರಜೆಗಳು ಇರುವುದು ಸರಕಾರಕ್ಕಾಗಿ ಅಲ್ಲ; ಬದಲಾಗಿ ಸರಕಾರ ಇರುವುದು ಜನತೆಯ ಕಲ್ಯಾಣಕ್ಕಾಗಿ’ ಎಂಬುದು ಗಣತಂತ್ರದ ಮುಖ್ಯ ವಿಚಾರಧಾರೆ. ಇಲ್ಲಿ ನಿರಂಕುಶ ತಣ್ತೀಕ್ಕೆ ಒಂದೆಡೆ ಪ್ರಜಾತಂತ್ರ ವ್ಯವಸ್ಥೆ ಹಾಗೂ ಇನ್ನೊಂದೆಡೆ ಗಣರಾಜ್ಯ ಪದ್ಧತಿ ಅಂಕುಶ ಹಾಕಿದೆ.
Related Articles
ನಮ್ಮ ಗಣತಂತ್ರ ಪದ್ಧತಿಯನ್ನು ಆಧರಿಸಿಯೇ ನಮ್ಮ ಹಕ್ಕುಗಳನ್ನು ಇತಿಮಿತಿಯೊಂದಿಗೆ ಬಳಸಬೇಕು. ಅದೇ ರೀತಿ 51 ಎ ವಿಭಾಗದಲ್ಲಿ ನಮೂದಿಸಿದ 11 ಮೂಲಭೂತ ಕರ್ತವ್ಯಗಳ ಧಾರೆಯಲ್ಲಿ ನಮ್ಮ ಸಾಮೂಹಿಕ ಜವಾಬ್ದಾರಿ ಒದಗಿ ನಿಲ್ಲಲಿ ಎಂಬುದು ಗಣರಾಜ್ಯದ ಉತ್ಸವದ ಉತ್ಸಾಹ ಬಿಂದುಗಳು.
ನಿಗದಿತ ಸಮಯ ಅಥವಾ ಕಾಲಮಿತಿಯ ಅಧಿಕಾರ ಜನಪ್ರತಿನಿಧಿಗಳಿಗೆ ಅನ್ವಯಿಸುವಂತಹದು ಎಂಬುದನ್ನು ಜನತಂತ್ರ ಪದ್ಧತಿ ಹಾಗೂ ಗಣರಾಜ್ಯ ವ್ಯವಸ್ಥೆ ಏಕಕಾಲದಲ್ಲಿ ಉಸಿರುತ್ತದೆ. ಜತೆಜತೆಗೇ ಜನತೆಗೆ ಸಹಕರಿಸುವ, ಅವರ ಬದುಕನ್ನು ಹಸನು ಗೊಳಿಸುವ ಕಾಯಕ ಜನಪ್ರತಿನಿಧಿಗಳಿಂದ ಸದಾಕಾಲ ಒದಗಿ ಬರಲಿ ಎಂಬ ಸದಾಶಯ ಗಣರಾಜ್ಯ ಉತ್ಸವದ ಪರೇಡ್‌ನ ಲಯಬದ್ಧ ಒಳಧ್ವನಿ. ವಿಶ್ವಮಟ್ಟದ ಪ್ರಗತಿಶೀಲತೆಯಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂಬ ರಾಷ್ಟ್ರೀಯ ತೃಪ್ತಿಯನ್ನು ಈ ದಿನಗಳಲ್ಲಿ ಮೆಲುಕು ಹಾಕಬಲ್ಲೆವು. ಇಲ್ಲಿ ನಾಯಕತ್ವ ಹಾಗೂ ಜನತೆಯ ಪೂರಕ ಚಿಂತನೆ ಹಾಗೂ ಕಾರ್ಯಕ್ಷಮತೆಯೇ ಮೂಲ ಇಂಧನ.
“ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು’ ಎಂಬ ಕವಿವಾಣಿಗೆ ಕಾವು ನೀಡುವಲ್ಲಿ, ನಮ್ಮ ರಾಷ್ಟ್ರದ ಯುವಶಕ್ತಿ ಪ್ರಧಾನ ಭೂಮಿಕೆ ತಮ್ಮದಾಗಿಸಿಕೊಳ್ಳಬೇಕಾಗಿದೆ. ಹಳೆ ಬೇರು, ಹೊಸ ಚಿಗುರಿನ ಸಂಭ್ರಮ, ಕಳೆದ ನಿನ್ನೆಗಳು ಬರುವ ನಾಳೆಗಳನ್ನು ತೆರೆದ ಹೃದಯದಿಂದ ಸ್ವಾಗತಿಸಿ ಮುನ್ನಡೆಸುವ ಪ್ರೇರಕ ಶಕ್ತಿ ಇವೆಲ್ಲವೂ ಗಣ ರಾಜ್ಯೋತ್ಸವದ ಅಮೃತ ತುಲ್ಯ ಸಿಂಚನದ ಬಿಂದು ಗಳು. ಇತಿಹಾಸದಲ್ಲೂ ಗಣರಾಜ್ಯದ ಕಲ್ಪನೆ ನಮ್ಮಲ್ಲಿತ್ತು. ಈಗ ರಾಷ್ಟ್ರವ್ಯಾಪಿಯಾಗಿ ನಾವು ಸಾಂವಿಧಾನಿಕ ಭದ್ರ ಪಂಚಾಂಗದೊಂದಿಗೆ ಗಣರಾಜ್ಯ ವ್ಯವಸ್ಥೆಗೆ ರೂಪು ನೀಡಿದ್ದೇವೆ. ಒಟ್ಟಿನಲ್ಲಿ ಇಲ್ಲಿ ಜನಪರ ಚಿಂತನೆ, ಕಾರ್ಯಕ್ಷಮತೆ, ನೆಮ್ಮದಿಯ ವ್ಯಕ್ತಿಗತ ಬದುಕು ಹಾಗೂ ರಾಷ್ಟ್ರೀಯ ಪುನರುತ್ಥಾನ ಇವೆಲ್ಲ ಕಾರ್ಯ ಪರಿಧಿಯ ಸ್ವರ್ಣ ರೇಖೆಗಳು. ಗಣರಾಜ್ಯದ ಉತ್ಸವ ಎಂದೂ ಬತ್ತದ ರಾಷ್ಟ್ರೀಯ ಪ್ರಜ್ಞೆ ಹಾಗೂ ಉತ್ಸಾಹಕ್ಕೆ ಪೂರಕ ಹಾಗೂ ಪ್ರೇರಕ ಇಂಧನ ಸದಾ ಒದಗಿಸಲಿ ಎಂಬ ಶುಭ ಹಾರೈಕೆ ನಮ್ಮೆಲ್ಲರದಾಗಲಿ.
– ಡಾ| ಪಿ.ಅನಂತಕೃಷ್ಣ ಭಟ್
ಮಂಗಳೂರು