Advertisement

ಅಮೈ ಮಡಿಯಾರು ಶಾಲೆಯಲ್ಲಿ ಉಬ್ಬು ಶಿಲ್ಪದಲ್ಲಿ ಚಿತ್ರಣ

01:29 PM Aug 14, 2022 | Team Udayavani |

ಸುಳ್ಯ: 1837ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟ ಅಮರ ಸುಳ್ಯ ಕ್ರಾಂತಿಯ ಕುರಿತಾದ ಚರಿತ್ರೆಯನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಅಂದಿನ ಘಟನಾವಳಿಗಳ ಉಬ್ಬು ಶಿಲ್ಪವನ್ನು ಶಾಲೆಯ ಆವರಣ ಗೋಡೆಯಲ್ಲಿ ಚಿತ್ರಿಸಿಸಲಾಗಿದೆ. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗಬೇಕು ಎಂಬ ನೆಲೆಯಲ್ಲಿ ಈ ಇತಿಹಾಸದ ಸಾಲುಗಳನ್ನು ಉಬ್ಬು ಶಿಲ್ಪದ ಮೂಲಕ ದಾಖಲಿಸಲಾಗಿದೆ.

Advertisement

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರು ಸರಕಾರಿ ಶಾಲಾ ಆವರಣ ಗೋಡೆಯಲ್ಲಿ ಜ್ಞಾನಧಾಮ ಚಾರಿಟೆಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಊರವರ ಹಾಗೂ ದಾನಿಗಳ ಸಹಕಾರದೊಂದಿಗೆ ಶಿಲ್ಪದ ಕಾರ್ಯ ನಡೆಸಲಾಗಿದೆ. ಉಬರಡ್ಕ ಮಿತ್ತೂರಿನ ಮದುವೆಗದ್ದೆ ದಾಮೋದರ ಗೌಡರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಜ್ಞಾನಧಾಮ ಚಾರಿಟೆಬಲ್‌ ಟ್ರಸ್ಟ್‌ ಊರ ಜನರ ಸಹಕಾರದಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ನಡೆಸುತಿದೆ. ಅದರ ಭಾಗವಾಗಿ ಶಾಲೆಗೆ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ದ್ವಾರ ನಿರ್ಮಿಸಲಾಗಿದೆ. ಇನ್ನು ಅಭಿವೃದ್ಧಿ ನಡೆಸಲಾಗುತ್ತಿದ್ದು ಇಲ್ಲಿ ಇನ್ನಷ್ಟು ಆಕರ್ಷಕವಾಗಬೇಕು ಎಂಬ ನೆಲೆಯಲ್ಲಿ ಶಾಲೆಯ ಆವರಣ ಗೋಡೆಯಲ್ಲಿ ಸಿಮೆಂಟಿನ ಉಬ್ಬು ಚಿತ್ರಗಳನ್ನು ರಚಿಸಲಾಗಿದೆ.

ಅಮರ ಸುಳ್ಯ ದಂಗೆಯ ರುವಾರಿ ಕೆದಂಬಾಡಿ ರಾಮಯ್ಯ ಗೌಡ ಅವರ ಊರು ಉಬರಡ್ಕ ಮಿತ್ತೂರು ಗ್ರಾಮ. ಸಾಹಿತಿ ಕೆ. ಆರ್‌. ವಿದ್ಯಾಧರ ಕುಡೆಕಲ್ಲು ಅವರ ಅಮರ ಸುಳ್ಯ 1837 ಸಶಸ್ತ್ರ ಹೋರಾಟ ಕೃತಿಯನ್ನಾಧರಿಸಿ ಹಿರಿಯ ಸಾಹಿತಿ, ಚಿತ್ರಕಾರ ಎ.ಕೆ. ಹಿಮಕರ ರಚಿಸಿದ ರೇಖಾಚಿತ್ರದ ಆಧಾರದಲ್ಲಿ ಉಬ್ಬುಶಿಲ್ಪ ಕಲಾವಿದ ಕಾಸರಗೋಡು ಜಿಲ್ಲೆಯ ಮಹೇಶ ಬಾಯಾರು ನೇತೃತ್ವದ ತಂಡ ಸಿಮೆಂಟಿನಲ್ಲಿ ಉಬ್ಬು ಶಿಲ್ಪಗಳನ್ನು ರಚಿಸಿದ್ದಾರೆ.

10 ಶಿಲ್ಪಗಳು

Advertisement

ಅತ್ಯಂತ ಸರಳವಾಗಿ ಈ ಘಟನೆಯ ಕುರಿತು ಬೆಳಕು ಚೆಲ್ಲುವ 10 ಶಿಲ್ಪಗಳು ರಚನೆಯಾಗಿದೆ. ಮಡಿಕೇರಿಯ ಅರಮನೆಯಿಂದ ಬ್ರಿಟಿಷರ ಕೊನೆಯ ಅರಸನನ್ನು ಹೊರಗಟ್ಟುವ ದೃಶ್ಯ, ಕೆದಂಬಾಡಿಗೆ ಪುಟ್ಟಬಸಪ್ಪನನ್ನು ಕರೆತರುವ, ಆಶ್ರಮ ಕಟ್ಟಿ ಪುಟ್ಟಬಸಪ್ಪನನ್ನು ಕಲ್ಯಾಣ ಸ್ವಾಮಿಯಾಗಿ ಮಾರ್ಪಾಡು ಮಾಡುವ, ಮದುವೆ ಗದ್ದೆಯಿಂದ ದಂಡು ಹೊರ ಡುವ, ಸೈನಿ ಕರ ಜಮಾವಣೆ, ಬೆಳ್ಳಾರೆ ಕೋಟೆ ಸ್ವಾಧೀನ ಪಡಿಸುವ, ಅಟೂÉರು ರಾಮಪ್ಪಯ್ಯನಿಗೆ ಮರಣ ದಂಡನೆ ವಿಧಿಸುವ, ಮಂಗಳೂರು ಕೋಟೆ ಸ್ವಾಧೀನಪಡಿಸಿ ಧ್ವಜಾರೋಹಣ ಮಾಡುವ, ಕಲ್ಯಾಣ ಸ್ವಾಮಿ ಮತ್ತಿತರರನ್ನು ಗಲ್ಲಿಗೇರಿಸುವ, ಹೋರಾಟಗಾರರನ್ನು ಹಡಗಿನಲ್ಲಿ ತುಂಬಿ ವಿದೇಶಕ್ಕೆ ಗಡಿ ಪಾರು ಮಾಡುವ ಹೀಗೆ ಅಮರ ಸುಳ್ಯ ದಂಗೆಯ ಪ್ರಮುಖ ಘಟನೆಗಳು ಶಿಲ್ಪದ ರೂಪದಲ್ಲಿ ಮೂಡಿ ಬಂದಿದೆ. ಆ ಮೂಲಕ ಅಮರ ಸುಳ್ಯ ಕ್ರಾಂತಿಯ ಇತಿಹಾಸವನ್ನು ತಿಳಿಸುವ ಪ್ರಯತ್ನ ಇಲ್ಲಿ ನಡೆಸಲಾಗಿದೆ.

ಚಿತ್ರದ ಮೇಲ್ಭಾಗದಲ್ಲಿ ವಿವರಣೆ

ಅಮರ ಸುಳ್ಯ ಕ್ರಾಂತಿ ಬಗ್ಗೆ ಜನತೆಗೆ ತಿಳಿಸುವ ಉದ್ದೇಶದಿಂದ ಸಿಮೆಂಟ್‌ ಉಬ್ಬು ಶಿಲ್ಪ ರಚಿಸಿ, ಅದಕ್ಕೆ ಬಣ್ಣ ಬಳಿಯಲಾಗಿದೆ. ಚಿತ್ರದ ಬಗ್ಗೆ ಜನತೆಗೆ ತಿಳಿಯಲು ಚಿತ್ರದ ಮೇಲ್ಭಾಗದಲ್ಲಿ ವಿವರಣೆಯನ್ನು ದಾಖಲಿಸಲಾಗಿದೆ. ಚಿತ್ರಗಳನ್ನು ನೋಡುವಾಗಲೇ ಘಟನೆಯು ಕಣ್ಣುಮುಂದೆ ಬರುವ ರೀತಿಯಲ್ಲಿ ಉಬ್ಬು ಶಿಲ್ಪಗಳು ಕಲಾವಿದರ ಕೈಚಳಕದಲ್ಲಿ ಮೂಡಿ ಬಂದಿದೆ.

ಪಠ್ಯದಲ್ಲಿ ಸೇರಿಸಲಿ: ಜ್ಞಾನಧಾಮ ಟ್ರಸ್ಟ್‌ ಮೂಲಕ ಉಬರಡ್ಕ ಮಿತ್ತೂರು ಗ್ರಾಮದ ಅಮೈಮಡಿಯಾರು ಶಾಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ನಡೆದ ಅಮರ ಕ್ರಾಂತಿಯ ಹೋರಾಟದ ಚರಿತ್ರೆಯನ್ನು ಶಾಲಾ ಆವರಣದ ಗೋಡೆಯಲ್ಲಿ ಅರಳಿಸುವ ಕೆಲಸ ನಡೆಸಲಾಗಿದೆ. ಚರಿತ್ರೆಯನ್ನು ಹೇಳಲು ಇದೊಂದು ವಿಶೇಷ ಪ್ರಯತ್ನ. ಸರಕಾರ ಅಮರ ಸುಳ್ಯ ದಂಗೆಯ ಕುರಿತಾದ ವಿಷಯವನ್ನು ಪಠ್ಯದಲ್ಲಿ ಸೇರಿಸಿದಲ್ಲಿ ಉಪಯುಕ್ತವಾಗಲಿದೆ. –ದಾಮೋದರ ಗೌಡ ಮದುವೆಗದ್ದೆ, ಅಧ್ಯಕ್ಷರು, ಜ್ಞಾನಧಾಮ ಚಾರಿಟೆಬಲ್‌ ಟ್ರಸ್ಟ್‌.

Advertisement

Udayavani is now on Telegram. Click here to join our channel and stay updated with the latest news.

Next