Advertisement

ಪರಿಶಿಷ್ಟರ ಮೇಲಿನ ದೌರ್ಜನ್ಯದ ಮಾಹಿತಿ ನೀಡಿ

03:50 PM Sep 30, 2022 | Team Udayavani |

ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಲಾಗಿದೆಯೇ?, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿಲಾಗಿದೆಯೇ ಹಾಗೂ ಕೊಲೆ, ಅತ್ಯಾಚಾರ, ಗಂಭೀರ ಸ್ವರೂಪದ ಅಪರಾಧಗಳ ಪ್ರಕರಣಗಳ ತನಿಖೆ ಯಾವ ಹಂತದಲ್ಲಿವೆ ಎಂಬ ಖಚಿತ ಮಾಹಿತಿಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ್‌ ಅವರಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಜನಾಂಗದ ಮೇಲೆ ದೌರ್ಜನ್ಯವೆಸಗಿದವರ ಮೇಲೆ ದಾಖಲಿಸಲಾದ ಪ್ರಕರಣಗಳ ಕುರಿತು ಸ್ಪಷ್ಟ ನಿಖರ ಮಾಹಿತಿ ನೀಡಬೇಕು. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ, ಚಾರ್ಜ್‌ಶೀಟ್‌ ಸಲ್ಲಿಸದೇ ಬಾಕಿಯಿರುವ ಘಟನೆಗಳ ಕುರಿತು ಹಾಗೂ ಇಂತಹ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಜಿಲ್ಲಾ ಮಟ್ಟದ ಸಮಿತಿಯ ಸಭೆಗೆ ಬರುವ ಪೂರ್ವದಲ್ಲಿಯೇ ತಿಳಿಸಬೇಕು. ಅಗತ್ಯ ಮಾಹಿತಿ ಲಭ್ಯವಿದ್ದಾಗ ಮಾತ್ರ ದೌರ್ಜನ್ಯದಿಂದ ಪೀಡಿತರಾದವರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.

ಜಾತಿ ನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಖಚಿತ ಮಾಹಿತಿ ಒದಗಿಸಬೇಕು. ಪ್ರತಿ ತಿಂಗಳಲ್ಲಿ ಒಂದು ದಿನ ಸ್ಥಳೀಯ ಮಟ್ಟದಲ್ಲಿ ಕುಂದು ಕೊರತೆ ಸಭೆ ಏರ್ಪಡಿಸಿ ನೊಂದವರಿಗೆ ಕಾನೂನಿನ ನೆರವು ಸದಾ ಇರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಮೂಲಕ ಸ್ಥಳೀಯವಾಗಿ ಯೋಜನೆಯ ರೂಪುರೇಷೆ ತಯಾರಿಸಿ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು. ಇಲಾಖೆಯ ಸುತ್ತೋಲೆಗೆ ತಿದ್ದುಪಡಿ ತಂದು ಸರಕಾರಿ ಜಾಗೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳ ಮೂಲಕ ಬೇರೆ ಬೇರೆ ಯೋಜನೆ ರೂಪಿಸಿ ಪರಿಶಿಷ್ಟ ಜಾತಿ, ವರ್ಗದ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜನವರಿಯಿಂದ ಆಗಸ್ಟ್‌ ಅಂತ್ಯದವರೆಗೆ ನಗರಸಭೆಯಿಂದ ಕೈಗೊಳ್ಳಲಾದ ಕಾಮಗಾರಿಗಳು ಪೂರ್ಣಗೊಂಡರೂ ಸಹ ಪರಿಶಿಷ್ಟ ವರ್ಗದ ಗುತ್ತಿಗೆ ದಾರರಿಗೆ ಬಿಲ್‌ ಪಾವತಿಯಾಗದೇ ಇರುವುದರಿಂದ ಗುತ್ತಿಗೆದಾರರಿಗೆ ಅನಾನುಕೂಲವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಪೆನ್ನೇಕರ್‌, ಡಿಎಸ್‌ಎಸ್‌ ಜಿಲ್ಲಾಧ್ಯಕ್ಷ ಹಾಗೂ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯ ದೀಪಕ್‌ ಕುಡಾಳ್‌ಕರ್‌, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next