ಹೊಸಪೇಟೆ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ತರಾತುರಿಯಲ್ಲಿ ಸಿದ್ಧಪಡಿಸಲಾಗಿದ್ದು, ಪೂರ್ವಗ್ರಹಪೀಡಿತವಾಗಿದೆ. ಇದನ್ನು ಸರ್ಕಾರ ತಿರಸ್ಕರಿಸದೆ ಹೋದಲ್ಲಿ ಮುಂಬರುವ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಬೆಂಗಳೂರಿನ ಹೈಕೋರ್ಟ್ ವಕೀಲ ಶಂಕ್ರಪ್ಪ ಎಚ್ಚರಿಸಿದರು.
ಸ್ಥಳೀಯ ಅಖೀಲ ಕರ್ನಾಟಕ ಭೋವಿ( ವಡ್ಡರ ) ಯವ ವೇದಿಕೆ(ಕ್ರಾಂತಿ) ಹಾಗೂ ನ್ಯಾ.ಸದಾಶಿವ ಆಯೋಗ ವರದಿ ವಿರೋಧಿ ಒಕ್ಕೂಟದ ಸಂಯುಕ್ತಾಶ್ರದಲ್ಲಿ ಹಂಪಿಯ ಶಿವರಾಮ ಅವಧೂತ ಆಶ್ರಮದಲ್ಲಿ ಗುರುವಾರ ನಡೆದ ಸಂವಿಧಾನ ಮೀಸಲಾತಿ ಮತ್ತು ಸವಾಲುಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸುವ ಮೂಲಕ ಅದನ್ನು ಮೂಲೆಗೊಂಪು ಮಾಡಬೇಕಿದೆ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಪರಿಶಿಷ್ಟ ಜಾತಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಲು ರಚಿಸಲಾಗಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಮೊದಲ ಐದು ವರ್ಷ ಯಾವುದೇ ಕೆಲಸ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ 11.12 ಕೋಟಿ ರೂ. ಮಂಜೂರು ಮಾಡಿತ್ತು. ನಂತರ ಒಂದೇ ವರ್ಷದಲ್ಲಿ ತರಾತುರಿಯಲ್ಲಿ ವರದಿ ಸಿದ್ಧಪಡಿಸಲಾಯಿತು. ಇದು ಪೂರ್ವಗ್ರಹಪೀಡಿತ ವರದಿಯಾಗಿದ್ದು ಪಟ್ಟಭದ್ರ ಹಿತಾಸಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತಿವೆ. ವರದಿಯಲ್ಲಿ ಅವೈಜ್ಞಾನಿಕ, ಅಸಾಂವಿಧಾನಿಕ ಹಾಗೂ ರಾಜಕೀಯ ಪ್ರೇರಿತ ಅಂಶಗಳಿವೆ.
ಪರಿಶಿಷ್ಟ ಜಾತಿಯಲ್ಲಿ ಒಡಕು ಉಂಟು ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಪರಿಶಿಷ್ಟ ಜಾತಿಯವರನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಸ್ಪೃಶ್ಯರು ಹಾಗೂ ಅಸ್ಪೃಶ್ಯರು ಎಂಬ ಅಸಾಂವಿಧಾನಿಕ ಪದಗಳನ್ನು ಬಳಸಲಾಗಿದೆ. ಇದು ಖಂಡನೀಯ ಎಂದು ದೂರಿದರು.
ಆಯೋಗ ತನ್ನ ಅಧಿಕಾರದ ವ್ಯಾಪ್ತಿ ಮೀರಿ ಸಂವಿಧಾನದ ಪ್ರಕಾರ ಲಭ್ಯವಾಗಿರುವ ಮೀಸಲಾತಿಯನ್ನು ಮರುವಿಂಗಡಣೆ ಮಾಡುವಂತೆ ಶಿಫಾರಸು ಮಾಡಿದೆ. ಇದರಿಂದ ಪರಿಶಿಷ್ಟ ಜಾತಿಯ ಮುಂದಿನ ಪೀಳಿಗೆಯ ಜನರು ಬೀದಿಗೆ ಬೀಳುವ ಸಾಧ್ಯತೆ ಇದೆ. ಒಳಮೀಸಲಾತಿ ಎಂದರೆ ಪರಿಶಿಷ್ಟ ಜಾತಿಯ ಎರಡು ಸಮುದಾಯಗಳಿಗೆ ಮಾತ್ರ ಸಂಬಂಧಪಟ್ಟದ್ದು ಎಂದು ಆಯೋಗ ತಿಳಿದುಕೊಂಡಂತಿದೆ.
ಈ ಅಭಿಪ್ರಾಯದಿಂದಾಗಿ ತೀರ ಕೆಳಮಟ್ಟದ ಜೀವನ ನಡೆಸುವ ವಿಭಾಗಗಳು ಸಂಕಷ್ಟಕ್ಕೆ ಸಿಲುಕಲಿವೆ. ಇಂಥ ವರದಿ ಜಾರಿಯಾದರೆ ಪರಿಶಿಷ್ಟ ಜಾತಿಯ 99 ಜಾತಿಯ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗಲಾರದು. ಹೀಗಾಗಿ ವರದಿಯನ್ನು ತಿರಸ್ಕರಿಸಬೇಕು. ಈ ವರದಿಯನ್ನು ಮುಂದುವರಿದರೆ, ಒಕ್ಕೂಟದಿಂದ ಹಾಗೂ ಎಲ್ಲಾ ಸಮಾಜ ಮುಖಂಡರೊಂದಿಗೆ ಹಳ್ಳಿ ಹಳ್ಳಿಗೆ ಹೋಗಿ ನಮ್ಮ ಮೇಲಾಗಿರುವ ದಬ್ಟಾಳಿಕೆಯನ್ನು ಮನದಟ್ಟುವಂತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.
ದಾವಣಗೆರೆಯ ಒಕ್ಕೂಟದ ರಾಜ್ಯಕಾರ್ಯಧ್ಯಕ್ಷ ರಾಘವೇಂದ್ರನಾಯ್ಕ, ವಕೀಲ ಜಯದೇವನಾಯ್ಕ, ಯುವ ವೇದಿಕೆಯ ರಾಜ್ಯಾಧ್ಯಕ್ಷ ವೈ.ಕೊಟ್ರೇಶ್, ಮುಖಂಡರಾದ ವಿ.ತಿಮ್ಮಯ್ಯ, ವಿ.ಎನ್.ಹುಲುಗಪ್ಪ, ನಾಗರಾಜ್, ವಿ.ವಿರೂಪಾಕ್ಷಿ, ಲಕ್ಷ್ಮೀ, ತುಳಸಿ, ಸುಶಿಲ ಇತರರಿದ್ದರು.