Advertisement

ಸಂಸದ ಹೆಗಡೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಕಾಂಗ್ರೆಸ್‌

12:57 AM Feb 05, 2020 | Team Udayavani |

ಮಂಗಳೂರು: ಮಹಾತ್ಮಾ ಗಾಂಧಿ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಸಂಸದ ಅನಂತ ಕುಮಾರ್‌ ಹೆಗಡೆ ಅವರು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಒತ್ತಾಯಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಹಾಗೂ ಸಂಸತ್‌ ಸದಸ್ಯತ್ವ ರದ್ದುಗೊಳಿಸಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ಈ ಹಿಂದೆ ವೈದ್ಯರ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಅವರ ಮೇಲಿದೆ. ಸಂವಿಧಾನ ಬದಲಾವಣೆ ಬಗ್ಗೆಯೂ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಅವರಿಗೆ ಬಿಜೆಪಿ ಎರಡನೇ ಬಾರಿ ಸ್ಪರ್ಧಿಸಲು ಅವಕಾಶ ನೀಡಬಾರದಿತ್ತು ಎಂದರು.

ಪಂಪ್‌ವೆಲ್‌ ಫ್ಲೈ ಓವರ್‌ 10 ವರ್ಷಗಳ ಅನಂತರ ಉದ್ಘಾಟನೆಯಾಯಿತು. ಅದಕ್ಕೆ ಕಾಂಗ್ರೆಸ್‌ ವಿಳಂಬ ಎಂಬ ಸಂಸದರು ಹೇಳಿಕೆ ನೀಡಿರುವುದು ಸರಿಯಲ್ಲ. ಅಡ್ಡಹೊಳೆ-ಬಿ.ಸಿ.ರೋಡ್‌ ಹೆದ್ದಾರಿ ಕಾಮಗಾರಿ ಕೂಡ ವಿಳಂಬ ಆಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಇದರ ವಿರುದ್ಧ ಈಗಾಗಲೇ ಕಾಂಗ್ರೆಸ್‌ ಪಾದಯಾತ್ರೆ ನಡೆಸಿತ್ತು. ಕಾಂಗ್ರೆಸ್‌ ಆಡಳಿತವಾಧಿಯಲ್ಲಿ ಅನುಮೋದನೆ ಪಡೆದ ಕಾಮಗಾರಿಗಳು ಮಾತ್ರ ನಡೆಯುತ್ತಿವೆ. ಹಾಗಾದರೆ ಬಿಜೆಪಿಯವರ ಕೊಡುಗೆ ಏನು ಎಂಬುದನ್ನು ತಿಳಿಸಲಿ. ಕಾಂಗ್ರೆಸ್‌ ಆಡಳಿತವಿದ್ದಾಗ ಎತ್ತಿನಹೊಳೆ ಯೋಜನೆಯನ್ನು ಬಿಜೆಪಿ ಸಂಸದರು ವಿರೋಧಿಸಿದ್ದರು. ಈಗ ಅವರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಮಂಗಳೂರು ಸಂಸದರು ಕಳೆದ ಬಾರಿಯೂ ಬಜೆಟ್‌ ಅಧಿವೇಶನಕ್ಕೆ ಹೋಗಿಲ್ಲ. ಈ ಬಾರಿಯೂ ಹೋಗಿಲ್ಲ ಎಂದವರು ಟೀಕಿಸಿದರು.

ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮುಖಂಡರಾದ ಶಾಹುಲ್‌ ಹಮೀದ್‌, ಟಿ.ಕೆ. ಸುಧೀರ್‌, ಸಿ.ಎಂ. ಮುಸ್ತಫಾ, ಶುಭೋದಯ ಆಳ್ವ, ಪೃಥ್ವಿರಾಜ್‌, ನೀರಜ್‌ ಪಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next