Advertisement

SEP: ಫೆಬ್ರವರಿಯಲ್ಲಿ ವರದಿ: ಪ್ರೊ| ಸುಖದೇವ್‌

11:11 PM Nov 03, 2023 | Team Udayavani |

ಬೆಂಗಳೂರು: ಈ ವರೆಗಿನ ಶಿಕ್ಷಣ ನೀತಿಗಳನ್ನು ಪರಾಮರ್ಶಿಸಿ ಮಾಜಿ ರಾಷ್ಟ್ರಪತಿ ಎಸ್‌. ರಾಧಾಕೃಷ್ಣನ್‌ (1948) ಮತ್ತು ಕೊಠಾರಿ ಕಮಿಷನ್‌ (1966) ಮಾದರಿಯ ವರದಿಯನ್ನು ನೀಡುವುದಾಗಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರಚನಾ ಆಯೋಗದ ಅಧ್ಯಕ್ಷ ಪ್ರೊ| ಸುಖದೇವ್‌ ಥೊರಾಟ್‌ ಹೇಳಿದ್ದಾರೆ.

Advertisement

ಎಸ್‌ಇಪಿ ರಚನೆಯ ಪ್ರಾಥಮಿಕ ಅಂಶಗಳ ಬಗ್ಗೆ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಸಮಿತಿ ಸದಸ್ಯರ ಜತೆ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಾವು ವಾಸ್ತವಾಂಶ ಮತ್ತು ದತ್ತಾಂಶಗಳ ಆಧಾರದಲ್ಲಿ ಕಾಲಮಿತಿಯೊಳಗೆ ವರದಿ ತಯಾರಿಸಲು ಪ್ರಯತ್ನಿಸುತ್ತೇವೆ. ತುರ್ತಾ ಗಿರುವ ಅಂಶಗಳ ಜತೆಗೆ, ಅಲ್ಪಕಾಲೀನ, ಮಧ್ಯಕಾಲೀನ ಮತ್ತು ದೀರ್ಘ‌ಕಾಲೀನ ಅಗತ್ಯಗಳನ್ನು ಗಮನಿಸಿ ಸಮಗ್ರ ವರದಿಯನ್ನು ನೀಡುತ್ತೇವೆ. ಆಯೋಗವು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಮಗ್ರ ಪರಿಶೀಲನೆ, ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಶೈಕ್ಷಣಿಕ ದಾಖಲಾತಿ ಕುರಿತು ಮಾಹಿತಿ ಸಂಗ್ರಹ ಹಾಗೂ ಪರಿಶೀಲನೆ, ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಶಿಕ್ಷಣದ ಗುಣಮಟ್ಟ, ಶಾಲೆಗೆ ಪ್ರವೇಶಾವಕಾಶ, ದೂರ ಮತ್ತು ಆನ್‌ಲೈನ್‌ ಶಿಕ್ಷಣ, ಶಿಕ್ಷಣ ಸಂಸ್ಥೆಗಳ ಹಣಕಾಸು ಮತ್ತು ಆಡಳಿತ ಮತ್ತು ನೈತಿಕ ಶಿಕ್ಷಣ ಮುಂತಾದ ಅಂಶಗಳನ್ನು ಪರಿಶೀಲಿಸಿ ತನ್ನ ವರದಿಯನ್ನು ನೀಡಲಿದೆ ಎಂದು ಪ್ರೊ| ಥೊರಾಟ್‌ ತಿಳಿಸಿದರು.
ಪ್ರಸ್ತುತ ಇರುವ ಮತ್ತು ಹಳೆಯ ಪಾಲಿಸಿಗಳ ಮಿತಿ, ಸಮಸ್ಯೆಗಳ ಜತೆಗೆ ಮುಂದೆ ಬರಬಹುದಾದ ವಿಷಯಗಳ ಬಗ್ಗೆ ಆಳವಾದ ಸಂಶೋಧನೆ, ಅಧ್ಯಯನ ನಡೆಸಿ ನಾವು ವರದಿ ರೂಪಿಸುತ್ತೇವೆ. ಹಾಗೆಯೇ ನಮ್ಮ ಶಾಲೆ ಮತ್ತು ಕಾಲೇಜು ಶಿಕ್ಷಣದಲ್ಲಿರುವ ಉತ್ತಮ ಅಂಶಗಳನ್ನೂ ಗಮನಿಸುತ್ತೇವೆ ಎಂದು ಪ್ರೊ| ಥೊರಾಟ್‌ ಹೇಳಿದರು.

ರಾಜ್ಯದ ನಾಲ್ಕು ಕಡೆಗೆ ತೆರಳಿ ನಾವು ನಿವೃತ್ತ ಕುಲಪತಿ, ಹಾಲಿ ಕುಲಪತಿ, ಸರಕಾರೇತರ ಸಂಘಸಂಸ್ಥೆಗಳು, ನಾಗರಿಕ ಸಮಾಜ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಸಹಿತ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲ ವರ್ಗದ ಜನರ ಅಭಿಪ್ರಾಯ ಸಂಗ್ರಹಿಸಿ ಫೆ. 28 ರೊಳಗೆ ವರದಿ ನೀಡಲು ಪ್ರಯತ್ನಿಸುತ್ತೇವೆ. ವರದಿ ತಯಾರಿಗಾಗಿ 9 ಉಪ ಸಮಿತಿಗಳನ್ನು ರಚಿಸುತ್ತೇವೆ. ಆಡಳಿತ, ಗುಣಮಟ್ಟ ಶಿಕ್ಷಣ, ಸಿಬಂದಿ, ಹಣಕಾಸು, ನಿಧಿ ಇತ್ಯಾದಿಗಳ ಕುರಿತು ಉಪಸಮಿತಿಗಳು ನೀಡುವ ಮಾಹಿತಿ ಆಧಾರದಲ್ಲಿ ಚರ್ಚೆ ನಡೆಸಿ ವರದಿ ತಯಾರಿಸುವುದಾಗಿ ಅವರು ಮಾಹಿತಿ ನೀಡಿದರು.

ವರದಿ ಜಾರಿ ಸರಕಾರದ ನಿರ್ಧಾರ
ಮುಂದಿನ ವರ್ಷದಿಂದಲೇ ಈ ವರದಿ ಜಾರಿ ಯಾಗುತ್ತದೆಯೇ, ಇಲ್ಲವೇ ಎಂದು ನಾವು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಸರಕಾರ ತೀರ್ಮಾನಿಸಲಿದೆ ಎಂದು ಹೇಳಿದರು.

Advertisement

ಎಲ್ಲ ಶಾಲೆಗಳಿಗೂ ಅನ್ವಯ
ರಾಜ್ಯ ಶಿಕ್ಷಣ ನೀತಿಯು ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗೂ ಅನ್ವಯಿಸಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ರಾಜ್ಯದ ಶಾಲೆಗಳಿಗೂ ಅನ್ವಯಿಸಲಿದೆ ಎಂದು ಉತ್ತರಿಸಿದರು.
ಸಮಿತಿ ಸದಸ್ಯರಾದ ಪ್ರೊ| ಸುಧಾಂಶು ಭೂಷಣ್‌, ಪ್ರೊ| ಎಸ್‌. ಜಾಫೆಟ್‌, ಪ್ರೊ| ರಾಜೇಂದ್ರ ಚೆನ್ನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next