Advertisement

ಕಾರಾಗೃಹ ತೊರೆದ ಹಕ್ಕಿಗಳದ್ದು ವ್ಯಥೆಯಲ್ಲ ಪಶ್ಚಾತ್ತಾಪ..

11:20 PM Oct 21, 2019 | Team Udayavani |

ಬೆಂಗಳೂರು: “ಯಾರೋ ಮಾಡಿದ ತಪ್ಪಿಗೆ ಒಂದೇ ಕುಟುಂಬದ ಆರು ಮಂದಿ ಸೇರಿ 10 ಜನ 15 ವರ್ಷ ಶಿಕ್ಷೆ ಅನುಭವಿಸಿದೆವು. ಇದೀಗ ಸನ್ನಡತೆ ಆಧಾರದ ಮೇಲೆ ಎಲ್ಲರೂ ಬಿಡುಗಡೆಯಾ ಗುತ್ತಿದ್ದೇವೆ. ಇದಕ್ಕಿಂತ ಸಂತೋಷ ಮತ್ತೊಂದಿಲ್ಲ’. ಹೀಗೆಂದು ಹೇಳುವಾಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಂಕಾಪುರ ಗ್ರಾಮದ ಓಂಕಾರಪ್ಪ ಮತ್ತು ಶೇಖರಪ್ಪ ಅವರ ಕಣ್ಣಾಲಿ ತೇವಗೊಡವು.

Advertisement

15 ವರ್ಷಗಳ ಹಿಂದೆ ಮದುವೆ ಮನೆಯಲ್ಲಿ ನಡೆದ ಜಗಳ ಸಂಬಂಧ ಇಬ್ಬರು ಗ್ರಾಮಸ್ಥರ ಕೊಲೆಯಾಗಿತ್ತು. ಆ ಕೊಲೆ ನಾವು ಮಾಡಿರಲಿಲ್ಲ. ಆದರೆ, ಕೆಲವರು ಆರು ಮಂದಿ ಸಹೋದರು ಸೇರಿ 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಾಕ್ಷಿಗಳು ಕೂಡ ನಮ್ಮ ವಿರುದ್ಧವೇ ಇದ್ದವು. ಕೆಲ ವರ್ಷಗಳ ಹಿಂದೆ ಐದು ಮಂದಿಯನ್ನು ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಮಾಡಿತ್ತು. ಆದರೆ, ನಾವು ಹತ್ತು ಮಂದಿ 15 ವರ್ಷಗಳಿಂದ ಜೈಲು ಶಿಕ್ಷೆ ಅನುಭಸಿದೆವು ಎಂದರು.

“ನಾನು(ಓಂಕಾರಪ್ಪ) ಜೈಲಿನಲ್ಲಿ ಮುದ್ರಣ ಕೆಲಸ ಮಾಡಿಕೊಂಡಿದ್ದೆ, ಶೇಖರಪ್ಪ ರಾತ್ರಿ ಕಾವಲು ಗಾರ ಕೆಲಸ ಮಾಡಿಕೊಂಡಿದ್ದ. ಇನ್ನುಳಿದವರು ಬೇರೆ ಕೆಲಸಗಳನ್ನು ಮಾಡಿಕೊಂಡು, ಜೈಲಿನ ಒಳಗಡೆ ರೂಪಾಂತರ ಕಾರ್ಯಕ್ರಮದಡಿ ಕಲಿಸುವ ಪಾಠಗಳನ್ನು ಶ್ರದ್ಧೆಯಿಂದ ಕೇಳಿ, ಇದೀಗ ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಂಡು, ಸನ್ನಡತೆ ಆಧಾರದ ಮೇಲೆ ಬಿಡುಗಡೆ ಆಗುತ್ತಿದ್ದೇವೆ’ ಎಂದು ಓಂಕಾರಪ್ಪ ಮತ್ತು ಶೇಖರಪ್ಪ ಭಾವುಕರಾದರು.

ಮನೆಯವರು ಬಂದಿಲ್ಲ: ಸನ್ನಡತೆ ಆಧಾರದ ಮೇಲೆ ನಾವು ಬಿಡುಗಡೆಯಾಗುತ್ತಿರುವುದು ಮನೆಯವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮನ್ನು ಕರೆದೊಯ್ಯಲು ಸ್ನೇಹಿತರು ಬಂದಿದ್ದಾರೆ. ಅವರೊಂದಿಗೆ ಇಂದೇ ಊರು ಸೇರಿಕೊಳ್ಳುತ್ತೇವೆ. ಮೊದಲು ಮನೆ, ಮಕ್ಕಳನ್ನು ನೋಡಬೇಕು. ನಮಗೆಲ್ಲ ಮಕ್ಕಳೇ ಆಸ್ತಿ ಎಂದು ಇಬ್ಬರೂ ಕಣ್ಣೀರು ಸುರಿಸಿದರು.

ಸ್ವಾರ್ಥಕ್ಕೆ ಬಲಿಯಾದೆ: “ಈ ಸಮಾಜ ಸರಿ ಇಲ್ಲ ಸರ್‌. ಯಾರದ್ದೊ ಸ್ವಾರ್ಥಕ್ಕೆ 14 ವರ್ಷ ಶಿಕ್ಷೆ ಅನುಭವಿಸಬೇಕಾಯಿತು. ಕೆೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಈಗ ಜೈಲು ಶಿಕ್ಷೆ ಅನುಭವಿಸಿದ ಮೇಲೆ ಎಲ್ಲವೂ ಅರಿವಿಗೆ ಬಂತು’ ಎಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮಾರಪ್ಪ ಅಳಲು ತೋಡಿಕೊಂಡರು.

Advertisement

ನಮ್ಮ ಗ್ರಾಮದಲ್ಲಿ ಯುವತಿಯೊಬ್ಬಳಿಗೆ ಪಕ್ಕದ ಊರಿನ ಯುವಕ ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದ ಎಂದು ಸ್ನೇಹಿತರು ತನ್ನ ಬಳಿ ಹೇಳಿ ಕೊಂಡಿದ್ದರು. ಆದರೆ, ಅಂತಹ ಯಾವುದೇ ಘಟನೆ ನಡೆದಿರಲಿಲ್ಲ. ಅದನ್ನು ತಿಳಿಯದೆ ಕೋಪ ದಲ್ಲಿ ಆ ಯುವಕನನ್ನು ಹತ್ಯೆಗೈದೆ. ಅನಂತರ ಗೊತ್ತಾಯಿತು. ಕೆಲವರ ಸ್ವಾರ್ಥಕ್ಕೆ ನಾನು ಬಲಿಯಾಗಿದ್ದೇನೆ ಎಂದು. ಅಷ್ಟರಲ್ಲಿ ಕಾಲು ಕಳೆದೊಗಿತ್ತು. ಕೃತ್ಯಕ್ಕಾಗಿ 14 ವರ್ಷ ಶಿಕ್ಷೆ ಅನುಭವಿಸಿದೆ.

ಜೈಲಿನಲ್ಲಿ ಒಳ್ಳೆಯ ಪಾಠ ಕಲಿತಿದ್ದೇನೆ. ಕರಕು ಶಲ ವಸ್ತುಗಳನ್ನು ಸಿದ್ಧಪಡಿಸುವುದನ್ನು ಕಲಿತಿ ದ್ದೇನೆ. ಅದನ್ನೆ ಬಂಡವಾಳ ಮಾಡಿಕೊಂಡು ಹೊಸ ಜೀವನ ನಡೆಸುತ್ತೇನೆ. ಪುತ್ರಿ ಎಂ.ಎ ಓದುತ್ತಿದ್ದಾಳೆ. ಮಗ ಬಿಎ ಓದುತ್ತಿದ್ದಾನೆ. ಸ್ವಾರ್ಥಿಗಳಿಂದ ದೂರು ಉಳಿದು ತನ್ನ ಕುಟುಂಬ ದೊಂದಿಗೆ ಸುಖವಾಗಿ ಜೀವನ ಮಾಡಲು ನಿರ್ಧರಿಸಿದ್ದೇನೆ. ಹೊರಗಿನ ಜನರಿಗೆ ಹೇಳು ವುದು ಇಷ್ಟೇ. ಸ್ವಾರ್ಥಿಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡುತ್ತೇನೆ ಎಂದರು.

ಮಗನಿಗಾಗಿ ಕಾಯುತ್ತಿತ್ತು ವೃದ್ಧ ಜೀವ: “ನನ್ನ ಮಗನಿಗೆ ಮೂಗಿನ ಮ್ಯಾಲೆ ಕೋಪ. ಆ ಕೋಪದ್ಯಾಗೆ ಮಂದಿ ಜತೆ ಸೇರಿಕೊಂಡು ಒಬ್ಬನ ಕೊಲೆ ಮಾಡಿಬಿಟ್ಟ. ಸೋಮವಾರ ಮಗ ಶಿವರಾಜು ಬಿಡುಗಡೆ ಯಾಗುತ್ತಿದ್ದಾನೆಂಬ ವಿಚಾರ ತಿಳಿತು. ಅದಕ್ಕೆ ಆತನ ಮಗನ ಜತೆ ಇಲ್ಲಿಗೆ ಬಂದಿದ್ದೇನೆ’. ತನ್ನ 48 ವರ್ಷದ ಪುತ್ರನ ಆಗಮನಕ್ಕಾಗಿ ಜೈಲಿನ ಪ್ರವೇಶ ದ್ವಾರದ ಮೂಲೆಯೊಂದರಲ್ಲಿ ಸಣ್ಣ ಬ್ಯಾಗ್‌ ಹಿಡಿದುಕೊಂಡು ಮೊಮ್ಮಗನ ಜತೆ ಕುಳಿತಿದ್ದ ವೃದ್ಧ ತಾಯಿ ಅನಂತಮ್ಮನ ಮಾತುಗಳಿವು.

“ಮಗ ಶಿವರಾಜು ಕೋಪದಲ್ಲಿ 15 ವರ್ಷದ ಹಿಂದೆ ಕೊಲೆ ಮಾಡಿದ್ದ. ಹೀಗಾಗಿ ಆತ 15 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಇದೀಗ ಹೊರಗಡೆ ಬರುತ್ತಿದ್ದಾನೆ. ಆತನಿಗೆ ಪಿಯು ಓದುವ ಮಗ ಇದ್ದಾನೆ. ಆತನೊಂದಿಗೆ ಮಗನನ್ನು ಕರೆದೊಯ್ಯಲು ಬಂದಿದ್ದೇನೆ. ನನ್ನ ಜೀವ ಇರಮಟ ಆತನೊಂದಿಗೆ ಬದುಕುತ್ತೇನೆ’ ಎಂದು ಕಣ್ಣೀರು ಸುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next