ವಿಜಯಪುರ: ಭೀಮಾ ತೀರದ ಕೊಂಕಣಗಾಂವ ಎಂಬಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಮತ್ತೆ ನೆತ್ತರು ಹರಿದಿದೆ. ಕಂಟ್ರಿ
ಪಿಸ್ತೂಲ್ ಶೋಧಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ ಕುಖ್ಯಾತ ಪಾತಕಿ ಧರ್ಮರಾಜ್ ಚಡಚಣ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.
ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಹತ ಧರ್ಮರಾಜ್ ಸಹಚರ ಶಿವಾನಂದ ಬಿರಾದಾರ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದು, ಅವರನ್ನು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಸಂಗ್ರಹ-ಮಾರಾಟ ವಿರುದಟಛಿ ಇತ್ತೀಚಿಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಂತೆಯೇ ಕೊಂಕಣಗಾಂವ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಧರ್ಮರಾಜ್ ಕಂಟ್ರಿ ಪಿಸ್ತೂಲ್ ಸಂಗ್ರಹಿಸಿರುವ ಕುರಿತು ನಿಖರ ಮಾಹಿತಿ ಹಿನ್ನೆಲೆಯಲ್ಲಿ ಚಡಚಣ ಪೊಲೀಸರು ದಾಳಿ ನಡೆಸಿದ್ದರು. ಈ ಹಂತದಲ್ಲಿ ಧರ್ಮರಾಜ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಲ್ಲದೇ ಪಿಎಸ್‌ಐ ಗೋಪಾಲ ಅವರ ಮೇಲೆ ಕಂಟ್ರಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ.
ಇದು ಪಿಎಸ್‌ಐ ಗೋಪಾಲ ಅವರ ಬಲಗೈಗೆತಾಗಿದ್ದು, ಆತ್ಮರಕ್ಷಣೆಗಾಗಿ ಅವರು ಸರ್ವೀಸ್ ರಿವಾಲ್ವಾರ್‌ನಿಂದ ಪ್ರತಿದಾಳಿ ನಡೆಸಿದಾಗ ತಲಾ ಮೂರು ಗುಂಡು ಎದೆ ಮತ್ತು ಬೆನ್ನು ಹಾಗೂ ತಲಾ ಒಂದೊಂದು ಗುಂಡು ಧರ್ಮರಾಜ್‌ನ ಕಾಲು ಹಾಗೂ ಕೈಗೆ ತಾಗಿವೆ. ಜತೆಗೆ ಆತನ ಸಹಚರ ಶಿವಾನಂದ ಬಿರಾದಾರ ಎಂಬುವನ ಬೆನ್ನು ಹಾಗೂ ಹೊಟ್ಟೆ ಭಾಗಕ್ಕೂ ಗುಂಡು ತಾಗಿದೆ ಎನ್ನಲಾಗಿದೆ. ಈ ಘಟನೆ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಚಡಚಣ ಹಾಗೂ ಇಂಡಿ ಠಾಣೆ ಪೊಲೀಸರು ಗಾಯಾಳುಗಳಿಗೆ ಚಡಚಣ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಅವರನ್ನು ವಿಜಯಪುರದ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರ ಗಾಯಗೊಂಡಿದ್ದ ಧರ್ಮರಾಜ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಎಂದು ಮೂಲಗಳು ತಿಳಿಸಿವೆ. ಪಿಎಸ್‌ಐ ಹಳ್ಳೂರ ಅವರ ಕೈ ಹಾಗೂ ಶಿವಾನಂದ ಬಿರಾದಾರ ಹೊಟ್ಟೆ-ಬೆನ್ನು ಸೇರಿಕೊಂಡಿರುವ ಗುಂಡುಗಳನ್ನು ವೈದ್ಯರು ಸ್ಕಾನಿಂಗ್ ಮೂಲಕ ಪತ್ತೆ ಹಚ್ಚಿದ್ದು, ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಚಡಚಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಸಂಗ್ರಹಿಸಿದ ಮಾಹಿತಿ ಆಧರಿಸಿ ಪೊಲೀಸರು ಧರ್ಮರಾಜ್ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದರು. ಧರ್ಮರಾಜ್ ಏಕಾಏಕಿ ಎಸ್ಸೆ„ ಗೋಪಾಲ ಹಳ್ಳೂರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ಕೂಡಲೇ ಎಸ್ಸೆ„ ಆತ್ಮರಕ್ಷಣೆಗೆ ಹಾರಿಸಿದ ಗುಂಡುಗಳು ಧರ್ಮರಾಜನನ್ನು ತೀವ್ರ ಗಾಯಗೊಳಿಸಿದ್ದವು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಎಸ್ಸೆ„ ಗೋಪಾಲ ಹಾಗೂ ಧರ್ಮರಾಜ್ ಸಹಚರ ಶಿವಾನಂದ ಬಿರಾದಾರಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
– ಕುಲದೀಪ ಜೈನ್, ಎಸ್ಪಿ-ವಿಜಯಪುರ