Advertisement

ವೇದಾಂತದಲ್ಲೂ ಸಿದ್ಧಾಂತದಲ್ಲೂ ಹೇಳಿದ್ದು ಒಂದೇನೇ ದುಡ್ಡಿಂದ ದುಃಖನೇ, ದುಡ್ಡಿಂದ ದುಃಖನೇ … ಹಾಗಂತ ಹಿರಿಯೊಬ್ಬರು ಹಾಡಿಕೊಂಡು ಬರುವಾಗ ಅವನಿಗೆ ಜ್ಞಾನೋದಯವಾಗುತ್ತದೆ. ಅಷ್ಟರಲ್ಲಿ ಅವನ ಜೀವನದಲ್ಲಿ ಸಾಕಷ್ಟು ಘಟನೆಗಳಾಗಿರುತ್ತವೆ. ಆತ್ಮಾವಲೋಕನ ಮಾಡಿಕೊಳ್ಳುವಾಗ, ಅವನಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಜಗತ್ತಿನ ಎಲ್ಲಾ ಸಮಸ್ಯೆಗೆ ಕಾರಣ ದುಡ್ಡು ಎಂದು. ಅಲ್ಲಿಂದ ಅವನು ತನ್ನ ಬದುಕನ್ನು ಪುನಾರಂಭಿಸುತ್ತಾನೆ, ಹೊಸ ದಾರಿ ಹಿಡಿಯುತ್ತಾನೆ.

Advertisement

ಸರಳವಾಗಿ ಹೇಳಬೇಕೆಂದರೆ, ಒಬ್ಬ ಸೋತ ವ್ಯಕ್ತಿ ಹೇಗೆ ತನ್ನ ಜೀವನವನ್ನು ಪುನಾರಂಭಿಸುತ್ತಾನೆ ಎನ್ನುವುದು “ಪುನಾರಂಭ’ ಚಿತ್ರದ ಕಥೆ. ಇಲ್ಲಿ ನಾಯಕ ಒಬ್ಬ ಬಿಲ್ಡರ್‌. ಬಿಲ್ಡರ್‌ನಿಂದ ದೊಡ್ಡ ಬಿಲ್ಡರ್‌ ಆಗಬೇಕೆಂಬ ಕನಸು ಕಾಣುವ ಆತ, ದೊಡ್ಡದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿರುತ್ತಾನೆ. ಈ ಸಂದರ್ಭದಲ್ಲಿ ಅವನಿಗೆ ಬರಬೇಕಿದ್ದ ಹಣ ತಡವಾಗುತ್ತದೆ. ಸಾಲಗಳು ಹೆಚ್ಚುತ್ತವೆ. ಹಣದ ಅವಶ್ಯಕತೆ ತೀವ್ರವಾಗುತ್ತದೆ. ಆಗ ಅವನ ಎಸ್ಟೇಟ್‌ನಲ್ಲಿ ಒಂದು ಹೆಣ ಬೀಳುತ್ತದೆ. ಅದಾಗಿ ಕೆಲವು ದಿನಗಳಲ್ಲೇ ಅವನ ಕೈಯಲ್ಲಿ ಮತ್ತೂಮ್ಮೆ ದುಡ್ಡು ಓಡಾಡ ತೊಡಗುತ್ತದೆ.

ಈ ಮಧ್ಯೆ ಡ್ರಗ್‌ ಡೀಲರ್‌ ಒಬ್ಬನ ಲಕ್ಷಾಂತರ ಹಣ ಕಾಣೆಯಾಗುತ್ತದೆ. ಹಾಗೆ ಕಾಣೆನಾಗುವುದಕ್ಕೂ, ನಾಯಕನ ಕೈಯಲ್ಲಿ ಮತ್ತೆ ದುಡ್ಡು ಓಡಾಡುವುದಕ್ಕೂ, ಅವನ ಎಸ್ಟೇಟ್‌ನಲ್ಲಿ ಒಂದು ಹೆಣ ಬೀಳುವುದಕ್ಕೆ ಏನಾದರೂ ಸಂಬಂಧವಿದೆಯಾ? ಅದು ಗೊತ್ತಾಗಬೇಕಿದ್ದರೆ ಚಿತ್ರ ನೋಡಲೇಬೇಕು. “ಪುನಾರಂಭ” ಚಿತ್ರದ ಮೂಲಕ ಬಹಳ ವರ್ಷಗಳ ನಂತರ ಡಾ. ವಿಜಯ್‌ಕುಮಾರ್‌ ಅಭಿನಯಕ್ಕೆ ವಾಪಸ್ಸಾಗಿದ್ದಾರೆ. ತಮ್ಮ ಅಭಿನಯವನ್ನು ಪುನಾರಂಭಿಸುವುದಕ್ಕೆ ತಮಗೆ ತಾವೇ ವೇದಿಕೆಯನ್ನು ಕಟ್ಟಿಕೊಂಡಿದ್ದಾರೆ.

ತಮ್ಮ ಇಮೇಜಿಗೆ ತಕ್ಕಂತೆ ಕಥೆಯೊಂದನ್ನು ರಚಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಹೀಗೆ ಹೆಗಲ ಮೇಲೆ ಜವಾಬ್ದಾರಿ ಜಾಸ್ತಿಯಾಗುತ್ತಾ ಹೋದಹಾಗೆ, ಅವರು ಕುಗ್ಗುತ್ತಾ ಹೋಗಿದ್ದಾರೆ. ಹಾಗಾಗಿ ಇಲ್ಲಿ ಹೆಚ್ಚು ಗಮನಸೆಳೆಯುವುದಕ್ಕೆ ವಿಜಯಕುಮಾರ್‌ ಅವರಿಗೆ ಸಾಧ್ಯವಾಗಿಲ್ಲ. ಆ ಕಡೆ ಅಭಿನಯವೂ ಓಹೋ ಎನ್ನುವಂತಿಲ್ಲ, ನಿರ್ದೇಶನ ಸಹ ವಾಹ್‌ ಎನ್ನುವಂತಿಲ್ಲ. ಇನ್ನು ಕಥೆ, ನಿರೂಪಣೆಯ ಬಗ್ಗೆ ಹೆಚ್ಚು ಹೇಳುವ ಹಾಗೆಯೇ ಇಲ್ಲ. ಏನೋ ಮಾಡಬೇಕು ಎಂಬ ವಿಜಯಕುಮಾರ್‌ ಅವರ ಉತ್ಸಾಹವೇನೋ ಖುಷಿಕೊಡಬಹುದು.

ಆದರೆ, ಏನು ಮಾಡಬೇಕೆಂಬ ಸ್ಪಷ್ಟತೆ ಅವರಿಗಿಲ್ಲ ಎನ್ನುವುದು ಚಿತ್ರ ನೋಡುತ್ತಿದ್ದಂತೆಯೇ ಅರ್ಥವಾಗುತ್ತದೆ. ಆ ಮಟ್ಟದ ಗೊಂದಲಗಳು ಚಿತ್ರದಲ್ಲಿವೆ. ಇನ್ನು ನಿರೂಪಣೆ ಬರೀ ಗೊಂದಲಮಯವಾಗಿರುವುದಷ್ಟೇ ಅಲ್ಲ, ವಿಪರೀತ ನಿಧಾನ. ಹಾಗೆ ನೋಡಿದರೆ, ಚಿತ್ರದ ಅವಧಿ ಕೇವಲ 104 ನಿಮಿಷವಷ್ಟೇ. ಅದರಲ್ಲಿ ನಾಯಕನ ಪರಿಚಯದ ದೃಶ್ಯವೇ ಮೂರು ನಿಮಿಷದಷ್ಟಿದೆ. ನಾಯಕಿ ರೋಡ್‌ನಿಂದ ಮನೆಗೆ ಬರುವುದಕ್ಕೆ ಎರಡು ನಿಮಿಷಗಳಾಗುತ್ತವೆ. ಮುಂದೇನು ಮಾಡಬೇಕೆಂದು ನಾಯಕ ಮನೆಯಲ್ಲೆಲ್ಲಾ ಓಡಾಡಿಕೊಂಡು ಯೋಚಿಸುವ ದೃಶ್ಯಕ್ಕೆ ಮತ್ತೆ ಎರಡು ನಿಮಿಷ ಬೇಕು.

Advertisement

ಇನ್ನು ಖಳನಟನ ಪರಿಚಯ, ಕೆಟ್ಟ ಕಾಮಿಡಿ, ಬೇಡದ ಹಾಡು ಅಂತೆಲ್ಲಾ ಇನ್ನೊಂದಿಷ್ಟು ಸಮಯ ಹಾಳಾಗುತ್ತದೆ. ಕೆಲವೊಮ್ಮೆಯಂತೂ ಶಾಲಾ-ಕಾಲೇಜುಗಳಲ್ಲಿನ ನಾಟಕ ನೋಡಿದಂತಾಗುತ್ತದೆ. ಚಿತ್ರದಲ್ಲೇನಾದರೂ ಇಷ್ಟವಾಗುವುದಿದ್ದರೆ ಅದು ಸಂದೇಶ ಎಂದು ಎದೆತಟ್ಟಿ ಹೇಳಬಹುದು. ಸಾಲ ಮಾಡಿ ಸಾಯಬೇಡಿ, ಹಾಸಿಗೆ ಇದ್ದಷ್ಟು ಕಾಲು ಚಾಚಿ … ಎಂಬ ಸಂದೇಶವೊಂದು ಚಿತ್ರದ ಹೈಲೈಟ್‌. ಆ ಸಂದೇಶವನ್ನು ಇಷ್ಟರವರೆಗೂ ಕೇಳಿರದಿದ್ದರೆ ಅಥವಾ ಚಿತ್ರ ನೋಡಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಇದ್ದರೆ, ಚಿತ್ರವನ್ನು ಧಾರಾಳವಾಗಿ ನೋಡಬಹುದು.

ಚಿತ್ರ: ಪುನಾರಂಭ
ನಿರ್ದೇಶನ: ಡಾ ವಿಜಯ್‌ಕುಮಾರ್‌
ನಿರ್ಮಾಣ: ಡಾ ವಿಜಯ್‌ಕುಮಾರ್‌
ತಾರಾಗಣ: ಡಾ ವಿಜಯ್‌ಕುಮಾರ್‌, ಐಶ್ವರ್ಯ, ಶೋಭರಾಜ್‌, ಶಂಕರ್‌ ಅಶ್ವತ್ಥ್, ರಿಚರ್ಡ್‌ ಲೂಯಿಸ್‌, ಗಣೇಶ್‌ ರಾವ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next