Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಮಕಾವಾಸ್ತೆ ದುರಸ್ತಿ

01:28 PM Jun 11, 2022 | Team Udayavani |

ಶಹಾಬಾದ: ನಗರದಿಂದ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ನೆಲ ಕೆಳಗಿಳಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿರುವುದನ್ನು ಗಮನಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ರಸ್ತೆ ದುರಸ್ತಿ ಕಾರ್ಯ ನಾಮಕಾವಾಸ್ತೆ ಎಂಬಂತೆ ನಡೆಯಿತು.

Advertisement

ನಗರದ ಜಿಇ ಕಾಲೋನಿ ಮುಭಾಗದ ರಸ್ತೆಯ ಡಿವೈಡರ್‌ ಎರಡು ಕಡೆಗಳಲ್ಲಿ ನೆಲ ಕೆಳಗಿಳಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ವಾಹನಗಳು ಸಂಚರಿಸುವಾಗ ಜಂಪ್‌ ಆಗುತ್ತಿರುವುದನ್ನು ಗಮನಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಸಮತಟ್ಟು ಮಾಡಲು ತಗ್ಗಾದ ಪ್ರದೇಶವನ್ನು ಪರಿಶೀಲಿಸಿ ಡಾಂಬರೀಕರಣ ಮಾಡಿದರು. ಡಾಂಬರೀಕರಣ ಮಾಡಿದರೂ ರಸ್ತೆ ಸರಿಯಾಗಿ ಸಮತಟ್ಟು ಆಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಲವಾರು ಬಾರಿ ರಸ್ತೆ ಬದಿಯಲ್ಲಿ ಮಣ್ಣು ಸಂಗ್ರಹವಾಗಿದೆ. ಇದರಿಂದ ವಾಹನ ಸವಾರರು ಜಾರಿ ಬೀಳುತ್ತಿದ್ದಾರೆ. ಡಿವೈಡರ್‌ ಮಧ್ಯೆ ಮತ್ತು ಫುಟ್‌ಪಾತ್‌ ಮೇಲೆ ಮುಳ್ಳಿನ ಗಿಡಗಳು ಬೆಳೆದು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅದನ್ನು ತೆರವುಗೊಳಿಸಿ ಎಂದು ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳದಲ್ಲಿದ್ದ ಜೆಇ ಅವರಿಗೆ ದೂರಿದ್ದಾರೆ.

ವರ್ಷಕೊಮ್ಮೆ ಮಾತ್ರ ಅನುದಾನ ಬರುತ್ತದೆ. ಇದರಿಂದ ಏನು ಮಾಡಲು ಆಗುತ್ತಿಲ್ಲ. ಅಲ್ಲದೇ ಜಾಲಿಗಿಡಗಳು ಹಾಗೂ ಮುಳ್ಳಿನ ಗಿಡಗಳನ್ನು ತೆರವುಗೊಳಿಸಲು ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ ನಿವೇ ಏನಾದರೂ ಕಾರ್ಮಿಕರ ವ್ಯವಸ್ಥೆ ಮಾಡಿ ಕೊಟ್ಟರೇ ಅನುಕೂಲವಾಗುತ್ತದೆ ಎಂದು ಅಧಿಕಾರಿಯೊಬ್ಬರೂ ಮಾಧ್ಯಮದವರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಎಂದರೆ ಒಳ್ಳೆಯ ಗುಣಮಟ್ಟದಲ್ಲಿ ಇರುತ್ತದೆ. ಆದರೆ ಸರಿಯಾದ ನಿರ್ವಹಣೆ ಕೊರತೆಯಿಂದ ಎಲ್ಲವೂ ಹಾಳಾಗುತ್ತಿದೆ. ಅಲ್ಲದೇ ಸರಿಯಾದ ಸಮಯಕ್ಕೆ ರಸ್ತೆ ದುರಸ್ತಿ ಮಾಡುತ್ತಿಲ್ಲ. ನಾಮಕೇ ವಾಸ್ತೆ ದುರಸ್ತಿ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಇದನ್ನು ಮೊದಲು ಸರಿಪಡಿಸಿ ಎಂದು ಸಾರ್ವಜನಿಕರು ಕೇಳಿದರೆ ಇನ್ನೊಬ್ಬ ಜೆಇ ರಸ್ತೆ ಮೇಲೆ ಅಪಘಾತಗಳು ಆಗುತ್ತಿದ್ದರೇ ನಾವೇನು ಮಾಡುವುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ.

Advertisement

ಕೂಡಲೇ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಜೆಇಗಳ ವಿರುದ್ಧ ಕ್ರಮಕೈಗೊಳ್ಳಬೇಕು. ರಸ್ತೆ ಮಧ್ಯ ಹಾಗೂ ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು, ಜಾಲಿ ಗಿಡಗಳು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಣೆಗೊಂಡ ಕಸ, ಮಣ್ಣನ್ನು ತೆರವುಗೊಳಿಸಬೇಕು. ಇಲ್ಲದಿದ್ದರೇ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡ ಕಿರಣ ಚವ್ಹಾಣ ಎಚ್ಚರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next