Advertisement

ಹತ್ತು ದಿನದೊಳಗೆ ಮಂಗಳೂರು-ಬೆಂಗಳೂರು ರಾ.ಹೆದ್ದಾರಿ ದುರಸ್ತಿಗೆ ಸಚಿವರ ತಾಕೀತು

03:09 PM Jun 30, 2022 | Team Udayavani |

ಬೆಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ- ಸಕಲೇಶಪುರ ಮತ್ತು ಅಡ್ಡಹೊಳೆ ವ್ಯಾಪ್ತಿಯಲ್ಲಿ ಹೆದ್ದಾರಿಯು ತೀರಾ ಹದಗೆಟ್ಟಿರುವುದರಿಂದ ತಕ್ಷಣವೇ ಅಲ್ಲಿ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಲೋಕೋಪಯೋಗಿ ಸಚಿವರ ವಿಕಾಸಸೌಧದ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸಭೆಯಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು.

ಈ ಶಿಥಿಲಗೊಂಡ ಹೆದ್ದಾರಿಯಿಂದಾಗಿ ವಾಹನಗಳಿಗೆ ಆ ಭಾಗದಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಸಾರ್ವಜನಿಕರಿಂದಲೂ ಈ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿ ಬಂದಿವೆ. ಆದ್ದರಿಂದ ಇನ್ನೆರಡು ದಿನಗಳೊಳಗಾಗಿ ಅಲ್ಲಿ ಸಮರೋಪಾದಿಯಲ್ಲಿ ದುರಸ್ತಿ ಕೆಲಸಗಳನ್ನು ಪ್ರಾರಂಭಿಸಬೇಕು ಮತ್ತು ಇನ್ನು ಹತ್ತು ದಿನಗಳ ಒಳಗಾಗಿ ಈ ಹೆದ್ದಾರಿಯನ್ನು ಒಂದು ಸುಸ್ಥಿತಿಗೆ ತರಬೇಕೆಂದು ಉಭಯ ಸಚಿವರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕಾಲಮಿತಿಯ ಗಡುವು ನೀಡಿದರು. ಈ ಹೆದ್ದಾರಿ ರಿಪೇರಿಗೆ ಸಂಬಂಧಪಟ್ಟ ಗುತ್ತಿಗೆದಾರರಿಗೂ ಈ ಬಗ್ಗೆ ಸೂಚಿಸಲಾಯಿತು.

ಈ ಸೂಚನೆಯಂತೆ ನಡೆಸಲಾಗುವ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಲು ಸದ್ಯದಲ್ಲಿಯೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಉಭಯ ಸಚಿವರೂ ಸ್ಪಷ್ಟಪಡಿಸಿದರು.

ಇದನ್ನೂ ಓದಿ:130ಕ್ಕೂ ಅಧಿಕ ಸ್ಥಾನ ಗೆದ್ದು ಕಾಂಗ್ರೆಸ್‌ ಗೆ ಸರಳ ಬಹುಮತ ಸಿಗಲಿದೆ:  ಸಿದ್ದರಾಮಯ್ಯ

Advertisement

ಈ ಹೆದ್ದಾರಿಯ ಒಂದು  ಭಾಗ ಸಂಪೂರ್ಣ ಹಾಳಾಗಿದ್ದು, ರಿಪೇರಿ ಮಾಡದಿದ್ದರೆ  ಕರಾವಳಿಗೆ ಸಾರಿಗೆ ಸಂಪರ್ಕ ಕಡಿತಗೊಂಡು ಕರಾವಳಿ ಭಾಗವು ದ್ವೀಪದಂತಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ದುರಸ್ತಿ ಕಾರ್ಯದಲ್ಲಿ ವಿಳಂಬವಾಗಬಾರದೆಂದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದರು.

ಸಮರೋಪಾದಿಯಲ್ಲಿ ಈ ದುರಸ್ತಿ ಕಾಮಗಾರಿ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಗತ್ಯವಾದ ಸಕಲ ಸಹಕಾರ  ನೀಡುವಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ.ವಾಠೋರೆ, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಬಿ.ಹೆಚ್.ಅನಿಲ್ ಕುಮಾರ್, ಕಾರ್ಯದರ್ಶಿ ಡಾ. ಕೆ.ಎಸ್.ಕೃಷ್ಣಾರೆಡ್ಡಿ ಅವರೂ ಸೇರಿದಂತೆ  ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next