ಬೆಂಗಳೂರು: ಪ್ರವಾಹ ಪರಿಸ್ಥಿತಿಯಿಂದ ಅನೇಕ ಶಾಲೆಗಳು ಮುಳುಗಡೆಗೊಂಡಿದ್ದು, ಶಾಲಾ ಕಟ್ಟಡಗಳಿಗೆ ಹಾನಿಯಾಗಿರುತ್ತದೆ. ಇಂತಹ ಶಾಲೆಗಳ ಮರು ನಿರ್ಮಾಣ ಅಥವಾ ಶಾಲಾ ಕಟ್ಟಡ ದುರಸ್ತಿಗೆ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಬಂದಿದ್ದ ಪ್ರವಾಹ ಹಾಗೂ ಭೀಕರ ಮಳೆಯಿಂದಾಗಿ 50 ಸಾವಿರಕ್ಕೂ ಅಧಿಕ ಕೊಠಡಿಗಳು ಶಿಥಿಲಗೊಂಡಿವೆ ಎಂದು ಉದಯವಾಣಿ ಆ.12ರಂದು ವಿಶೇಷ ವರದಿ ಪ್ರಕಟಿಸಿತ್ತು. ಶಾಲಾ ಮಕ್ಕಳು ಹಾಗೂ ಶಿಕ್ಷಕರ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಭದ್ರತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಮಂಗಳವಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಹಾನಿಗೊಂಡಿರುವ ಶಾಲೆಗಳ ಮರು ನಿರ್ಮಾಣ ಮತ್ತು ಶಾಲಾ ಕಟ್ಟಡ ದುರಸ್ತಿಗೆ ತುರ್ತಾಗಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು, ದುರಸ್ತಿಗೊಳಿಸಬೇಕಾದ ಶಾಲೆಗಳು ಮತ್ತು ಮರು ನಿರ್ಮಾಣ ಮಾಡಬೇಕಾಗಿರುವ ಶಾಲಾ ಕಟ್ಟಡಗಳ ವಿವರಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ತುರ್ತಾಗಿ ಡಿ.ಸಿ ಕಚೇರಿಗೆ ಸಲ್ಲಿಸಿ, ದುರಸ್ತಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಮಳೆ ಕಡಿಮೆಯಾದ ನಂತರ ಶಾಲಾ ಕಟ್ಟಡಗಳು, ಕೊಠಡಿಗಳನ್ನು ಪಿಡಬ್ಲ್ಯೂಡಿ, ಗ್ರಾಮೀಣಾಭಿವೃದ್ಧಿ ಇಲಾಖೆ ಎಂಜಿನಿಯರ್ ಮೂಲಕ ಪರಿಶೀಲಿಸಬೇಕು. ಕಟ್ಟಡ, ಕೊಠಡಿಯ ಸಾಮರ್ಥ್ಯ ದೃಢೀಕರಣ ಪತ್ರ ಪಡೆಯಬೇಕು. ಕೊಠಡಿಗಳು ಶಿಥಿಲಗೊಂಡು ತರಗತಿ ನಡೆಸಲು ಸಾಧ್ಯವಿಲ್ಲದಿದ್ದರೆ ಅಂತಹ ಕಟ್ಟಡಗಳನ್ನು ದುರಸ್ತಿ ಮಾಡುವವರೆಗೂ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ದಾಖಲೆ ಕೇಳುವಂತಿಲ್ಲ
ನೆರೆ ಹಾನಿಗೆ ತುತ್ತಾಗಿ ಶಾಲೆ ಕಳೆದುಕೊಂಡಿರುವ ಮಕ್ಕಳು ಯಾವುದೇ ಜಿಲ್ಲೆಯಲ್ಲಿ ದಾಖಲಾತಿಗೆ ಬಂದರೂ ದಾಖಲಾತಿ ಮಾಡಿಕೊಳ್ಳುವ ಸಂಬಂಧ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವಂತೆ ಕಡ್ಡಾಯಗೊಳಿಸುವಂತಿಲ್ಲ. ದಾಖಲಾತಿ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ, ವರ್ಗಾವಣೆ ಪತ್ರ ಇದು ಯಾವುದನ್ನ್ನೂ ನೀಡುವಂತೆ ಒತ್ತಡ ಹೇರುವಂತಿಲ್ಲ. ವಿದ್ಯಾರ್ಥಿ ಅಥವಾ ಪಾಲಕರಿಂದ ಸ್ವಯಂ ದೃಢೀಕೃತ ಪತ್ರ ಪಡೆದು, ದಾಖಲಾತಿ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದಾಖಲಾತಿ ನಿರಾಕರಿಸಬಾರದು.