Advertisement

ಚಾರ್ಮಾಡಿ ಘಾಟಿ ರಸ್ತೆಗೆ ತೇಪೆ ಭಾಗ್ಯ

12:28 PM Dec 01, 2018 | Team Udayavani |

ಬೆಳ್ತಂಗಡಿ : ಕಳೆದ ಕೆಲವು ಸಮಯಗಳಿಂದ ಹದಗೆಟ್ಟಿದ್ದ ಚಾರ್ಮಾಡಿ ಘಾಟಿಯ ರಸ್ತೆಗೆ ತೇಪೆ ಭಾಗ್ಯ ಲಭಿಸಿದೆ. ಶಿರಾಡಿ ಘಾಟಿ ರಸ್ತೆಯ ದುರಸ್ತಿ ಹಿನ್ನೆಲೆಯಲ್ಲಿ ಕೆಲವು ತಿಂಗಳ ಕಾಲ ಚಾರ್ಮಾಡಿ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಿದ್ದ ಕಾರಣ ಘಾಟಿ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡಗಳು ನಿರ್ಮಾಣವಾಗಿತ್ತು. ಪರಿಣಾಮವಾಗಿ ವಾಹನ ಸಂಚಾರಕ್ಕೆ ತುಂಬಾ ಕಷ್ಟಸಾಧ್ಯವಾಗುತ್ತಿತ್ತು. ದಿನಂಪ್ರತಿ ಯಾವುದಾರೂ ವಾಹನ ಕೆಟ್ಟು ನಿಂತು ಕೆಲವು ಕಾಲ ಸಂಚಾರಕ್ಕೂ ತೊಂದರೆಯಾಗುತ್ತಿತ್ತು. ಇದಕ್ಕೆಲ್ಲ ಮುಕ್ತಿ ದೊರೆಯುವಂತೆ ಈಗ ಘಾಟಿ ರಸ್ತೆಯಲ್ಲಿನ ಹೊಂಡಗಳಿಗೆ ತೇಪೆ ಕಾರ್ಯ ನಡೆಯುತ್ತಿದೆ. ತೇಪೆ ಕಾರ್ಯ ನಡೆಯುವಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Advertisement

ದ.ಕ. ಜಿಲ್ಲೆ – ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ, ಅಪಾಯಕಾರಿ ತಿರುವುಗಳನ್ನು ಒಳಗೊಂಡಿರುವ ಚಾರ್ಮಾಡಿ ಘಾಟಿ ರಸ್ತೆಯ ಬದಿಯ ತಡೆಬೇಲಿಯೂ ಶಿಥಿಲಗೊಂಡಿರುವುದರಿಂದ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಕೆಲವು ತಿರುವುಗಳಲ್ಲಿ ಮರಳಿನ ಚೀಲಗಳನ್ನು ಇರಿಸಲಾಗಿದೆ. ಶಿರಾಡಿ ಘಾಟಿ ರಸ್ತೆಗೆ ಕಾಂಕ್ರಿಟ್‌ ಹಾಕುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಗೊಳಿಸಿದ ಕಾರಣ ಪರ್ಯಾಯ ಮಾರ್ಗವಾಗಿ ಬೆಂಗಳೂರು ಮೊದಲಾದೆಡೆ ತೆರಳುವ ಅನೇಕ ಖಾಸಗಿ ವಾಹನಗಳು, ಬಸ್‌ ಗಳು, ಲಾರಿಗಳು ಚಾರ್ಮಾಡಿ ಘಾಟಿ ರಸ್ತೆಯನ್ನೇ ನೆಚ್ಚಿಕೊಂಡಿದ್ದವು. ಅನೇಕ ಬಾರಿ ರಸ್ತೆ ಬ್ಲಾಕ್‌ ಆಗಿ ಪ್ರಯಾಣಿಕರು ಕಷ್ಟ ಅನುಭವಿಸಿದ್ದರು. ಹೆದ್ದಾರಿಯ ಅನೇಕ ಮೋರಿಗಳು ತನ್ನ ಬಲ ಕಳೆದುಕೊಂಡಿದೆ.

ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಮೊದಲಾದೆಡೆಗಳಿಂದ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸು ವವರು ಚಾರ್ಮಾಡಿ ಘಾಟಿ ರಸ್ತೆಯನ್ನೇ ನೆಚ್ಚಿಕೊಂಡಿದ್ದಾರೆ. ರಜಾ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಏರಿಕೆಯಾಗುತ್ತದೆ. ಹೆದ್ದಾರಿಯ ಹೊಂಡಗಳಿಗೆ ತೇಪೆ ಕಾರ್ಯ ನಡೆಸಲಾಗಿದ್ದು, ಪೂರ್ಣ ಪ್ರಮಾಣದ ಡಾಮರು ಕಾಮಗಾರಿ ಯಾದರೆ ಉತ್ತಮ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

 ಕಂದಕ ಭೀತಿ
ಘಾಟಿ ರಸ್ತೆಯ ಕೊನೆಯ ತಿರುವಿನಲ್ಲಿ ರಸ್ತೆಯ ಹೊಂಡಗಳು ಒಂದೆಡೆಯಾದರೆ, ಹೊಂಡವನ್ನು ತಪ್ಪಿಸಿ ಘನ ವಾಹನಗಳು ತಿರುವಿನಲ್ಲಿ ತಿರುಗುವಾಗ ತಡೆಬೇಲಿ ಇಲ್ಲದ ಕಂದಕಗಳನ್ನು ನೋಡಿದರೆ ಭಯವಾಗುತ್ತದೆ. ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಉತ್ತಮ.
 - ರಾಜೇಶ್‌ ಎಂ. ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next