Advertisement

Renukaswamy case: ಪತ್ನಿ ತುಂಬು ಗರ್ಭಿಣಿ ಅಂದರೂ ಕೇಳದೇ ಕೊಂದರು!

07:26 AM Jun 12, 2024 | Team Udayavani |

ಬೆಂಗಳೂರು: ಪ್ರೇಯಸಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ತನ್ನ ಅಭಿಮಾನಿಯನ್ನೇ ಭೀಕರವಾಗಿ ಹತ್ಯೆಗೈಯಿಸಿದ ನಟ ದರ್ಶನ್‌, ಆತನ ಶವವನ್ನು ಮೋರಿ ಸಮೀಪ ಎಸೆಯುವಾಗಲೂ ಸ್ಥಳದಲ್ಲಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಈ ಕುರಿತು ಸಿಸಿ ಕೆಮೆರಾ ದೃಶ್ಯಗಳು ಪೊಲೀಸರ ಕೈ ಸೇರಿವೆ.

Advertisement

ನಕಲಿ ಖಾತೆಗಳ ಮೂಲಕ ರೇಣುಕಾಸ್ವಾಮಿ ವಿಳಾಸ ಪತ್ತೆ ಹಚ್ಚಿದ ಹಂತಕರು, ಚಿತ್ರದುರ್ಗ ರಾಘವೇಂದ್ರನ ಮೂಲಕ ಜೂ.8ರಂದು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಅಪರಾಹ್ನ 12.30ರ ಸುಮಾರಿಗೆ ವಿನಯ್‌ ಸೂಚನೆ ಮೇರೆಗೆ ಪಟ್ಟಣಗೆರೆ ಜಯಣ್ಣನ ಶೆಡ್‌ಗೆ ಕರೆದೊಯ್ದಿದ್ದಾರೆ. ಅಲ್ಲಿಯೇ ಊಟ, ನೀರು ಕೊಡದೆ ಕೆಲ ಹೊತ್ತು ಕೂಡಿಹಾಕಿ, ಆತನ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ.

ಮತ್ತೊಂದೆಡೆ ರೇಣುಕಾಸ್ವಾಮಿ ಕರೆತಂದ ಬಗ್ಗೆ ವಿಷಯ ತಿಳಿದ ದರ್ಶನ್‌ ಮತ್ತು ಪವಿತ್ರಾ ಗೌಡ ಮಧ್ಯಾಹ್ನ 3 ಗಂಟೆಗೆ ಶೆಡ್‌ಗೆ ಬಂದಿದ್ದಾರೆ. ಅನಂತರ ಎಲ್ಲರೂ ಸೇರಿ ಆರೇಳು ಗಂಟೆಯವರೆಗೆ ಹಲ್ಲೆ ನಡೆಸಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ರೇಣುಕಾಸ್ವಾಮಿ ಮೃತಪಟ್ಟಿ ದ್ದಾನೆ. ಆರಂಭದಲ್ಲಿ ಅರೆಪ್ರಜ್ಞಾಸ್ಥಿತಿ ತಲು ಪಿದ್ದಾನೆ ಎಂದುಕೊಂಡಿದ್ದ ಹಂತಕರು, ರಾತ್ರಿ 9 ಗಂಟೆ ವೇಳೆಗೆ ಎಚ್ಚರಿಸಲು ಹೋದಾಗ, ಆತ ಮೃತಪಟ್ಟಿರುವುದು ಗೊತ್ತಾಗಿದೆ.ಅದರಿಂದ ಗಾಬರಿಗೊಂಡ ದರ್ಶನ್‌ ಮತ್ತು ತಂಡ ಒಂದೂವರೆ ತಾಸು ಶವದ ಮುಂದೆಯೇ ಕುಳಿತು ಯೋಚಿಸಿದ್ದಾರೆ. ಇದೇ ವೇಳೆ ದರ್ಶನ್‌, ಈ ಘಟನೆ ನಿನ್ನಿಂದಲೇ ನಡೆದಿದೆ ಎಂದು ಪವಿತ್ರಾಗೌಡ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಜೂ.9ರ ನಸುಕಿನ 3.30ರ ಸುಮಾರಿಗೆ ಸ್ಕಾರ್ಪಿಯೋ ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಈ ವಾಹನದ ಹಿಂದೆ ನಟ ದರ್ಶನ್‌ ಕೂಡ ತನ್ನ ಜೀಪ್‌ನಲ್ಲಿ ಹೋಗಿದ್ದಾರೆ. ಕೂಗಳತೆ ದೂರದಲ್ಲಿ ನಟ ದರ್ಶನ್‌ ನಿಂತುಕೊಂಡರೆ, ಇತ್ತ ಸ್ಕಾರ್ಪಿಯೋದಲ್ಲಿದ್ದ ಆರೋಪಿಗಳು ಮೃತದೇಹವನ್ನು ಸತ್ವ ಅಪಾರ್ಟ್‌ ಮೆಂಟ್‌ ಮುಂಭಾಗದ ಮೋರಿ ದಡದಲ್ಲಿ ಎಸೆದು ಪರಾರಿಯಾಗಿದ್ದರು. ಬೆಳಗ್ಗೆ ಮೃತದೇಹವನ್ನು ನಾಯಿಗಳು ಕಾಲುವೆಯಿಂದ ಮೇಲಕ್ಕೆ ಎಳೆಯುತ್ತಿದ್ದವು. ಅದೇ ವೇಳೆ ಫ‌ುಡ್‌ ಡೆಲಿವರಿ ಬಾಯ್‌ ಮತ್ತು ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಂತಕರ ಕ್ರೌರ್ಯ, 15 ಕಡೆ ಗಾಯ
ಮೃತ ರೇಣುಕಾಸ್ವಾಮಿ ಮೇಲೆ ಹಂತಕರು 15 ಕಡೆ ಭೀಕರವಾಗಿ ಹಲ್ಲೆ ನಡೆಸಿ ದ್ದಾರೆ. ಮರದಕಟ್ಟಿಗೆ, ಬೆಲ್ಟ್ ಹಾಗೂ ಇತರ ಆಯುಧಗಳಿಂದ ಹಲ್ಲೆ ನಡೆಸಿದ ಪರಿಣಾಮ ಆತನ ಮರ್ಮಾಂಗ, ಮೂಗು, ಕಾಲು, ದವಡೆ, ತಲೆ, ಬೆನ್ನು ಸೇರಿ 15 ಕಡೆ ಹಲ್ಲೆ ನಡೆಸಲಾಗಿದೆ. ಕೆಲವು ಕಡೆ ಸುಟ್ಟು ಕ್ರೌರ್ಯ ಮೆರೆದಿದ್ದಾರೆ. ಮರ್ಮಾಂಗಕ್ಕೂ ಬಲವಾಗಿ ಒದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಪತ್ನಿ ತುಂಬು ಗರ್ಭಿಣಿ ಅಂದರೂ ಬಿಡಲಿಲ್ಲ
ಹಲ್ಲೆ ನಡೆಸುವಾಗ ಹಂತಕರ ಬಳಿ ರೇಣುಕಾಸ್ವಾಮಿ, ಮತ್ತೂಮ್ಮೆ ಈ ರೀತಿ ಮಾಡುವುದಿಲ್ಲ. ದಯವಿಟ್ಟು ಬಿಟ್ಟುಬಿಡಿ ಎಂದು ಗೋಳಾಡಿದ್ದಾನೆ. ಅಲ್ಲದೆ ದರ್ಶನ್‌ಗೆ ಕೈ ಮುಗಿದು, ತನ್ನ ಪತ್ನಿ ತುಂಬು ಗರ್ಭಿಣಿ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾನೆ. ಆದರೂ ಮನಸು ಕರಗದ ದರ್ಶನ್‌, ತನ್ನ ಸಹಚರರ ಜತೆ ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನನ್ನ ಪತಿ ದರ್ಶನ್‌ ಅಭಿಮಾನಿ ಅಲ್ಲ, ತಪ್ಪು ಮಾಡಿದ್ದರೆ ಎಚ್ಚರಿಸಬೇಕಿತ್ತು: ಪತ್ನಿ ಸಹನಾ
ಚಿತ್ರದುರ್ಗ: ನಾವಿಬ್ಬರು ಮದುವೆಯಾಗಿ ಒಂದು ವರ್ಷವಾಗಿದೆ. ನಾನೀಗ ಗರ್ಭಿಣಿ. ಈಗ ನನ್ನ ಪತಿಯ ಹತ್ಯೆಯಾಗಿದೆ. ನಾನು ತಾಯಿಯಾಗುತ್ತಿದ್ದೇನೆ. ಮುಂದೇನು ಮಾಡಲಿ. ನನಗೆ, ನನ್ನ ಮಗುವಿಗೆ ಇನ್ನು ಯಾರು ದಿಕ್ಕು ಎಂದು ಹತ್ಯೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣೀರಿಟ್ಟಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಪತಿಯ ಸಾವಿಗೆ ನ್ಯಾಯ ಕೊಡಿಸಿ. ನನ್ನ ಗಂಡನಿಗೆ ಹೀಗಾಗಬಾರದಿತ್ತು. ಅವರು ಮನೆಯಿಂದ ಹೋಗುವಾಗ ಏನೂ ಹೇಳಿ ಹೋಗಲಿಲ್ಲ. ನನ್ನ ಪತಿ ರೇಣುಕಾಸ್ವಾಮಿ ದರ್ಶನ್‌ ಅಭಿಮಾನಿ ಆಗಿರಲಿಲ್ಲ. ನನಗೆ ನನ್ನ ಗಂಡ ಬೇಕು, ನ್ಯಾಯ ಬೇಕು. ನನ್ನ ಮುಂದಿನ ಜೀವನ ಹೇಗೆ ನಡೆಸಲಿ, ನನ್ನ ಪತಿ ತಪ್ಪು ಮಾಡಿದ್ದರೆ ಎಚ್ಚರಿಕೆ ನೀಡಿ ಬಿಡಬೇಕಾಗಿತ್ತು. ಅವರ ಜೀವಕ್ಕೆ ಏಕೆ ತೊಂದರೆ ಮಾಡಬೇಕಿತ್ತು. ನನ್ನ ಮಗುವಿನ ಭವಿಷ್ಯ ಏನು ಎಂದು ಸಹನಾ ಬಿಕ್ಕಳಿಸಿ ಅತ್ತರು.

Advertisement

Udayavani is now on Telegram. Click here to join our channel and stay updated with the latest news.

Next