Advertisement

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

12:40 AM Jun 22, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿ, ತಮ್ಮ ಹೆಸರು ಥಳಕು ಹಾಕದಂತೆ ನೋಡಿಕೊಳ್ಳಲು ಸಂಗ್ರಹಿಸಿಟ್ಟಿದ್ದ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನಿಂದ ಇದುವರೆಗೆ ಪೊಲೀಸರು
70 ಲಕ್ಷ ರೂ. ಅನ್ನು ಜಪ್ತಿ ಮಾಡಿದ್ದು ಇದರ ಮೂಲ ಪತ್ತೆ ಹಚ್ಚಲು ಖಾಕಿ ಮುಂದಾಗಿದೆ. ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯೂ (ಐಟಿ) ಎಂಟ್ರಿ ಕೊಡುವ ಸಾಧ್ಯತೆಯೂ ಇದೆ.

Advertisement

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೊಲೆ ಸಾಕ್ಷ್ಯ ನಾಶಪಡಿಸಲು ದರ್ಶನ್‌ ಆ್ಯಂಡ್‌ ಗ್ಯಾಂಗ್‌ ರೆಡಿ ಮಾಡಿದ್ದ 70 ಲಕ್ಷ ರೂ. ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಈ ದುಡ್ಡಿನ ಮೂಲದ ಬಗ್ಗೆ ಸೂಕ್ತ ದಾಖಲೆ ಸಿಕ್ಕಿಲ್ಲ. ಹೀಗಾಗಿ ಶೀಘ್ರದಲ್ಲೇ ಐಟಿ ಅಧಿಕಾರಿಗಳು ಅಥವಾ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಜಪ್ತಿ ಮಾಡಿರುವ ದುಡ್ಡಿಗೆ ಸೂಕ್ತ ದಾಖಲೆ ಒದಗಿಸದೆ ಇದ್ದರೆ ಐಟಿ ಅಧಿಕಾರಿಗಳು ದರ್ಶನ್‌ ಹಾಗೂ ಮೋಹನ್‌ ರಾಜ್‌ಗೆ ನೋಟಿಸ್‌ ನೀಡಿ ಈ ಬಗ್ಗೆ ಮಾಹಿತಿ ಕೇಳುವ ಸಾಧ್ಯತೆಗಳಿವೆ. ಅಕ್ರಮ ಹಣ ವರ್ಗಾವಣೆ ಮಾಡಿದರೆ ಇಡಿ ತನಿಖೆ ನಡೆಸುವ ಸಾಧ್ಯತೆಗಳಿವೆ.

ಹಲವೆಡೆಗಳಿಂದ ಹಣ ಜಪ್ತಿ
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ನಟ ದರ್ಶನ್‌ ತನ್ನ ಸಹಚರರಿಗೆ ನೀಡಿದ್ದ 40 ಲಕ್ಷ ರೂ. ಅನ್ನು ಮಾಜಿ ಕಾರ್ಪೊರೇಟರ್‌ ಮೋಹನ್‌ ರಾಜ್‌ನಿಂದ ಪಡೆದಿರುವುದು ಕಂಡುಬಂದಿದೆ. ಈ ಪೈಕಿ 3 ಲಕ್ಷ ರೂ. ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿಟ್ಟಿದ್ದರು. ಈ 40 ಲಕ್ಷ ರೂ. ಸದ್ಯ ಖಾಕಿ ಕೈ ಸೇರಿದೆ. ಇದಲ್ಲದೇ ಶರಣಾಗುವ ಆರೋಪಿಗಳಿಗೆ ನೀಡಲೆಂದು ಆರ್‌.ಆರ್‌. ನಗರದ ಮತ್ತೋರ್ವ ಆರೋಪಿ ವಿನಯ್‌ ಮನೆಯಲ್ಲಿದ್ದ 30 ಲಕ್ಷ ರೂ. ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಒಟ್ಟಾರೆ ಪ್ರಕರಣದಲ್ಲಿ 70 ಲಕ್ಷ ರೂ. ಅನ್ನು ಜಪ್ತಿ ಮಾಡಿದಂತಾಗಿದೆ.

ಮೋಹನ್‌ ರಾಜ್‌ಗಾಗಿ
ಎಸ್‌ಐಟಿ ಹುಡುಕಾಟ
ದರ್ಶನ್‌ಗೆ 40 ಲಕ್ಷ ರೂ. ನೀಡಿದ್ದ ಆಪ್ತ ಸ್ನೇಹಿತ ಮೋಹನ್‌ ರಾಜ್‌ಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಆದರೆ ಮೋಹನ್‌ ರಾಜ್‌ ಸದ್ಯ ನಾಪತ್ತೆಯಾಗಿದ್ದು ಆತನಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಪ್ರಕರಣದಲ್ಲಿ ತನ್ನ ಹೆಸರು ತಳುಕು ಹಾಕುತ್ತಿದ್ದಂತೆ ಮೋಹನ್‌ ರಾಜು ಫೋನ್‌ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ. ಇದೀಗ ಮನೆಗೆ ಹೋಗಿ ನೋಟಿಸ್‌ ನೀಡಲು ಕಾಮಾಕ್ಷಿ ಪಾಳ್ಯ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬಂಧಿತರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿ¨ªಾರೆ. ಈ ಹಣ ನೀಡುವ ವೇಳೆ ಮೋಹನ್‌ ರಾಜ್‌ಗೆ ಈ ಕೊಲೆಯ ಬಗ್ಗೆ ಮಾಹಿತಿ ಇತ್ತೇ ಇಲ್ಲವೇ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.

ಯಾರು ಈ ಮೋಹನ್‌ ರಾಜ್‌?
ಮೋಹನ್‌ ರಾಜು ಬೆಂಗಳೂರಿನಲ್ಲಿ 2019ರಲ್ಲಿ ಬೊಮ್ಮನಹಳ್ಳಿ ವಾರ್ಡ್‌ ಕಾರ್ಪೊರೇಟರ್‌ ಆಗಿದ್ದ. ರಾಜಕೀಯ ವಲಯದಲ್ಲಿ ಪ್ರಭಾವಿ ವ್ಯಕ್ತಿ. ಜಮೀನು ವಿಚಾರವಾಗಿ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ 2018ರಲ್ಲಿ ಇದೇ ಮೋಹನ್‌ ರಾಜ್‌ ಬೊಮ್ಮನಹಳ್ಳಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ಪೊಲೀಸ್‌ ಸಿಬಂದಿ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next