Advertisement

Renukaswamy Case: ಜೈಲೂಟ ಸೇರುತ್ತಿಲ್ಲ, ಮನೆ ಊಟಕ್ಕೆ ನಟ ದರ್ಶನ್‌ ಮೊರೆ

10:31 PM Jul 09, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ನಟ ದರ್ಶನ್‌ ತೂಗುದೀಪ ಮನೆ ಊಟಕ್ಕೆ ಅವಕಾಶ ಕೋರಿ ಹೈಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾನೆ. ಅದು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

Advertisement

ಕಾರಾಗೃಹದಲ್ಲಿ ನೀಡುತ್ತಿರುವ ಆಹಾರ ಅರ್ಜಿದಾರರಿಗೆ ಸೂಕ್ತ ರೀತಿಯಲ್ಲಿ ಜೀರ್ಣವಾಗುತ್ತಿಲ್ಲ. ಕೆಲವು ದಿನಗಳಿಂದ ಅತಿಸಾರ(ಭೇದಿ)ದಿಂದ ಬಳಲುತ್ತಿದ್ದಾರೆ. ಜೈಲಿನ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದ ಆಹಾರದಲ್ಲಿ ವಿಷಕಾರಿ ಸೂಕ್ಷ್ಮಜೀವಿಗಳು ಸೇರಿವೆ ಎಂದು ತಿಳಿಸಿದ್ದಾರೆ. ಜತೆಗೆ ಅರ್ಜಿದಾರರು ತೂಕವೂ ಇಳಿದಿದ್ದು, ಕಾರಾಗೃಹದಲ್ಲಿ ವಿತರಿಸುತ್ತಿರುವ ಆಹಾರ ಸೇವನೆ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಮನೆ ಆಹಾರ ತರಿಸಿಕೊಳ್ಳುವುದಕ್ಕೆ ಅವಕಾಶ‌ ನೀಡಬೇಕೆಂದು ಜೈಲು ಅಧಿಕಾರಿಗಳಿಗೆ ಈಗಾಗಲೇ ಮೌಖೀಕವಾಗಿ ಮನವಿ ಮಾಡಿದ್ದಾರೆ.

ಆದರೆ ಅಧಿಕಾರಿಗಳು ಹೈಕೋರ್ಟ್‌ ಆದೇಶವಿಲ್ಲದೆ, ಅರ್ಜಿದಾರರ ಕುಟುಂಬಸ್ಥರು ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಒದಗಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ನಿರಾಕರಿಸಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ದರ್ಶನ್‌ ಆರೋಗ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಬಂದೀಖಾನೆ ಕಾಯ್ದೆ 1963 ಸೆಕ್ಷನ್‌ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಹೊರಗಡೆಯಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಜತೆಗೆ ಅರ್ಜಿದಾರರು ಅಪರಾಧಿಯಾಗಿಲ್ಲ. ಆದ್ದರಿಂದ ಊಟ, ಹಾಸಿಗೆ ಪುಸ್ತಕಗಳು ಮತ್ತು ಸುದ್ದಿಪತ್ರಿಕೆಗಳು ಮನೆಯಿಂದ ತರಿಸಿಕೊಂಡಲ್ಲಿ ಸರಕಾರದ ಖಜಾನೆಗೆ ಆಗುವ ವೆಚ್ಚವೂ ಕಡಿಮೆಯಾಗಲಿದೆ. ಅಲ್ಲದೆ ಅರ್ಜಿದಾರರಿಗೆ ಮನೆ ಆಹಾರ ನೀಡದಿರುವ ಜೈಲು ಅಧಿಕಾರಿಗಳ ಕ್ರಮ ಅಮಾನವೀಯವಾಗಿದ್ದು ಸಂವಿಧಾನದ ಪರಿಚ್ಛೇದ 21ರ ಬದುಕುವ ಹಕ್ಕು ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next