ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪ್ರಕರಣದ 14 ನೇ ಆರೋಪಿ ಪ್ರದೋಷ್ ತನ್ನ ಮೊಬೈಲ್‌ನಲ್ಲಿ ಹತ್ಯೆ ಮಾಡುವ ಸಮಯದಲ್ಲಿ 5 ರಿಂದ 10 ಸೆಕೆಂಡ್ ವಿಡಿಯೋ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಸ್ವಾಮಿ ಮೇಲೆ ಹಲ್ಲೆ ಸಂದರ್ಭದಲ್ಲಿ ಎ- 14 ಪ್ರದೋಷ್ ವಿಡಿಯೋ ಮಾಡಿರುವ ಮಾಹಿತಿ ತನಿಖೆಯಲ್ಲಿ ಪೊಲೀಸರಿಗೆ ತಿಳಿದುಬಂದಿದೆ. ಪ್ರಮುಖ ಆರೋಪಿ ದರ್ಶನ್ ಸೂಚನೆ ಮೇರೆಗೆ ತನ್ನ ಮೊಬೈಲ್‌ನಲ್ಲಿ ಪ್ರದೋಷ್ ಸುಮಾರು 5 ರಿಂದ 10 ಸೆಕೆಂಡ್‌ವರೆಗೆ ವಿಡಿಯೋವನ್ನು ಮಾಡಿಕೊಂಡಿದ್ದಾನೆ. ಬಳಿಕ ಈ ವಿಡಿಯೋವನ್ನು ಡಿಲಿಟ್ ಮಾಡಿದ್ದಾನೆ. ಆದರೆ, ವಿಡಿಯೋ ಮಾಡಿರುವ ಮೊಬೈಲ್‌ಗಾಗಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಪ್ರದೋಷ್ ವಿಡಿಯೋ ಮಾಡಿಕೊಂಡಿರುವ ಮೊಬೈಲ್ ಸಿಕ್ಕರೆ, ನಟ ದರ್ಶನ್ ವಿರುದ್ಧ ಬಲವಾದ ಸಾಕ್ಷಿ ಪೊಲೀಸರಿಗೆ ದೊರೆಯಲಿದೆ. ಆ ವಿಡಿಯೋದಲ್ಲಿ ದರ್ಶನ್ ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಇದೆ ಎನ್ನಲಾಗಿದೆ.
ಈಗಾಗಲೇ ಆರೋಪಿಗಳ ಅನೇಕ್ ಮೊಬೈಲ್ ನಂಬರ್‌ಗಳ ನಕಲಿ ಸೀಮ್ ಕಾರ್ಡ್‌ಗಳನ್ನು ಪಡೆದುಕೊಂಡು ರಿಟ್ರೈವ್ ಮಾಡುತ್ತಿರುವ ಪೊಲೀಸರಿಗೆ ಘಟನೆಯ ಹಲವು ವಿಷಯಗಳು ಹೊರ ಬರುತ್ತಿವೆ. ಇನ್ನೂ ಕೆಲ ಆರೋಪಿಗಳು ದರ್ಶನ್ ಸೂಚನೆಯಂತೆ ಹಲ್ಲೆ ನಡೆದಿರುವುದಾಗಿ ಸತ್ಯ ಬಾಯಿಬಿಟ್ಟಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.
ನಾಳೆ ದರ್ಶನ್ ಮನೆ ಊಟ ನಿರ್ಧಾರ?: ಜೈಲಿನ ಊಟ ಸೇವನೆಯಿಂದ ಅನಾರೋಗ್ಯ ಹಿನ್ನೆಲೆಯಲ್ಲಿ ನಟ ದರ್ಶನ್ ಮನೆ ಊಟಕ್ಕಾಗಿ ಹೈಕೋರ್ಟ್ ಮೊರೆ ಹೋಗಿ ದ್ದರು. ಇದೀಗ ಹೈಕೋರ್ಟ್ ಸೂಚನೆ ಮೇರೆಗೆ ಆರೋಪಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ದ್ದಾರೆ. ಶನಿವಾರ ದರ್ಶನ್ ಪರ ವಕೀಲ ಶಶಿಕುಮಾರ್ 24ನೇ ಎಸಿಎಂಎಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸೋಮ ವಾರ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.