Advertisement

Renukaswamy case; ಜಾಮೀನಿಗೆ ಇಂದು ದರ್ಶನ್‌ ಅರ್ಜಿ?

11:29 PM Sep 08, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿ ಸೋಮವಾರ ಅಂತ್ಯವಾಗಲಿದ್ದು, ದರ್ಶನ್‌ ಸೇರಿ 17 ಮಂದಿ ಆರೋಪಿಗಳನ್ನು ಪೊಲೀಸರು ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ಗೆ ವಿಚಾರಣೆಗೆ ಹಾಜರುಪಡಿಸಲಿದ್ದಾರೆ. ಮತ್ತೂಂದೆಡೆ ದರ್ಶನ್‌ ಜಾಮೀನು ಕೋರಿ ಇಂದೇ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

Advertisement

ಜೂನ್‌ 9ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಮೂರೇ ದಿನದಲ್ಲಿ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನ 17 ಮಂದಿಯನ್ನು ವಿಜಯನಗರ ಎಸಿಪಿ ಚಂದನ್‌ ಕುಮಾರ್‌ ನೇತೃತ್ವದ ತಂಡ ಬಂಧಿಸಿತ್ತು. ವಿಚಾರಣೆ ಬಳಿಕ ಎಲ್ಲರಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಮಧ್ಯೆ ದರ್ಶನ್‌ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನಿಂದ ವಿಶೇಷ ಆತಿಥ್ಯ ಸ್ವೀಕರಿಸಿದ ಆರೋಪದಲ್ಲಿ, ದರ್ಶನ್‌ ಸೇರಿ ಕೆಲ ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ಪರಪ್ಪನ ಅಗ್ರಹಾರ, ಬಳ್ಳಾರಿ, ಮೈಸೂರು, ಶಿವಮೊಗ್ಗ, ವಿಜಯಪುರ, ಧಾರವಾಡ ಸೇರಿ ರಾಜ್ಯದ ವಿವಿಧ ಜೈಲುಗಳಲ್ಲಿರುವ 17 ಮಂದಿ ಆರೋಪಿಗಳನ್ನು ಆಯಾ ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

ಇಂದು ಜಾಮೀನಿಗೆ ಅರ್ಜಿ ಸಲ್ಲಿಕೆ ಸಾಧ್ಯತೆ
ಪ್ರಕರಣದ ಸಂಬಂಧ ಈಗಾಗಲೇ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, 24ನೇ ಎಸಿಎಂಎಂ ನ್ಯಾಯಾಲಯಕ್ಕೆ 3,991 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿಯನ್ನು ನಿಯಮಾನುಸಾರ ಎಲ್ಲ ಆರೋಪಿಗಳ ಪರ ವಕೀಲರಿಗೆ ಸೋಮವಾರ ಬೆಳಗ್ಗೆಯೇ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಗಳಾದ ನಟ ದರ್ಶನ್‌ ಹಾಗೂ ಇತರ ಆರೋಪಿಗಳು ಸೋಮವಾರ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.

ಈಗಾಗಲೇ ಪವಿತ್ರಾ ಗೌಡ ಸೇರಿ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್‌ ರದ್ದುಗೊಳಿಸಿದೆ.

ಡಿ ಗ್ಯಾಂಗ್‌ ಜೈಲು ಪಾಲಾಗಿ 3 ತಿಂಗಳು
ಕೊಲೆ ಪ್ರಕರಣ ಬೆಳಕಿಗೆ ಬಂದು ಮತ್ತು ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಬಂಧನಕ್ಕೊಳಗಾಗಿ 3 ತಿಂಗಳು ಕಳೆದಿದೆ. ಜೂ. 8ರಂದು ಪಟ್ಟಣಗೆರೆಯ ಶೆಡ್‌ನ‌ಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಲಾಗಿತ್ತು. ಜೂನ್‌ 9ರಂದು ನಸುಕಿನಲ್ಲಿ ಸುಮನಹಳ್ಳಿಯ ಸತ್ವ ಅಪಾರ್ಟ್‌ಮೆಂಟ್‌ ಬಳಿಯ ರಾಜಕಾಲುವೆಯಲ್ಲಿ ಆತನ ಮೃತದೇಹ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಜೂ. 10ರಂದು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ರಾಘವೇಂದ್ರ ಸೇರಿ ನಾಲ್ವರು ಶರಣಾಗಿದ್ದರು. ವಿಚಾರಣೆ ವೇಳೆ ಆರೋಪಿಗಳು ದರ್ಶನ್‌ ಹೆಸರು ಬಾಯಿಬಿಟ್ಟಿದ್ದರು.

Advertisement

ಜೈಲಿನಲ್ಲಿ ವಿಘ್ನ ನಿವಾರಕನ “ದರ್ಶನ’ ಭಾಗ್ಯವಿಲ್ಲ
ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ, ನಟ ದರ್ಶನ್‌ಗೆ ಜೈಲಲ್ಲೇ ಪ್ರತಿಷ್ಠಾಪಿಸಿರುವ ವಿಘ್ನ ನಿವಾರಕ ಗಣೇಶನ “ದರ್ಶನ’ ಭಾಗ್ಯವಿಲ್ಲದಂತಾಗಿದೆ.

ಬಳ್ಳಾರಿ ಜೈಲಲ್ಲೂ ಪ್ರತಿ ವರ್ಷದಂತೆ 4 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಗಣೇಶನ ದರ್ಶನ ಪಡೆದಿರುವ ಕೈದಿಗಳು, ತಮ್ಮ ಜೀವನದಲ್ಲಾಗಿರುವ ವಿಘ್ನಗಳನ್ನು ನಿವಾರಿಸುವಂತೆ ಮೊರೆಯಿಡುತ್ತಿದ್ದಾರೆ. ಆದರೆ ಜೈಲಿನ ವಿಶೇಷ ಭದ್ರತಾ ವಿಭಾಗದ ಹೈಸೆಕ್ಯುರಿಟಿ ಸೆಲ್‌ನಲ್ಲಿರುವ ಆರೋಪಿ ದರ್ಶನ್‌ಗೆ “ವಿನಾಯಕ’ನ ದರ್ಶನ ಭಾಗ್ಯ ಇಲ್ಲದಂತಾಗಿದ್ದು ಗಣೇಶ ಹಬ್ಬವನ್ನು 10/10 ಸೆಲ್‌ನಲ್ಲೇ ಆಚರಿಸುವಂತಾಗಿದೆ.

ಕಳೆದ ವರ್ಷ ಮನೆಯಲ್ಲಿ ಕುಟುಂಬ ಸಮೇತ ಗಣೇಶ ಹಬ್ಬವನ್ನು ಆಚರಿಸಿದ್ದ ದರ್ಶನ್‌, ಈ ಬಾರಿ ಜೈಲಲ್ಲಿ ಸೆರೆವಾಸ ಅನುಭವಿಸುತ್ತಿದ್ದು ಹಬ್ಬದ ದಿನ ಶನಿವಾರ ಮಾನಸಿವಾಗಿ ಕೊಂಚ ಕುಗ್ಗಿದ್ದಾರೆ ಎನ್ನಲಾಗಿದೆ. ಜೈಲಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನಕ್ಕಾದರೂ ದರ್ಶನ್‌ ಬಂದಾಗ ಅವರನ್ನು ನೋಡಬಹುದು ಎಂದು ನೀರಿಕ್ಷೆ ಇಟ್ಟುಕೊಂಡ ಕೈದಿಗಳಿಗೆ ನಿರಾಸೆಯಾಗಿದೆ. ಓದಲೆಂದು 5 ಪುಸ್ತಕ ಪಡೆದಿದ್ದ ದರ್ಶನ್‌, ಅದರಲ್ಲಿ 2 ಪುಸ್ತಕ ಚೆನ್ನಾಗಿಲ್ಲ ಎಂದು ಹಿಂದಿರುಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next