ಬೆಂಗಳೂರು : ಐಟಿ ದಾಳಿಗೂ ಯಡಿಯೂರಪ್ಪ ಅವರಿಗೂ ಸಂಬಂಧವಿಲ್ಲ,ಸತ್ಯಾಂಶ ಹೊರಬರುತ್ತದೆ ಅಂತ ಅವರೇ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಪ್ತ ಉಮೇಶ್ ನಿವಾಸದ ಮೇಲೆ ಐಟಿ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದರು.
ಯಡಿಯೂರಪ್ಪ ಅವರನ್ನು ಹದ್ದುಬಸ್ತಿನಲ್ಲಿ ಇಡುವುದಕ್ಕೆ ಆಗುವುದಿಲ್ಲ. ಯಡಿಯೂರಪ್ಪ ಅವರನ್ನು ಬಿಜೆಪಿ ಸೈಡ್ ಲೈನ್ ಮಾಡಿಲ್ಲ ಎಂದರು.
ಆರೆಸೆಸ್ ಕುರಿತು ಸಿದ್ದರಾಮಯ್ಯ, ಎಚ್. ಡಿ.ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಗೆ ಕಿಡಿ ಕಾರಿದ ಅವರು, ಸಂಘಪರಿವಾರದ ವಿರುದ್ಧ ಟೀಕಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ, ಸಂಘ ಪರಿವಾರದ ನಾಯಕರಿಗೆ ಕುರ್ಚಿ ವ್ಯಾಮೋಹ ಇಲ್ಲ. ದೇಶಕ್ಕಾಗಿ ತ್ಯಾಗ ಮಾಡುವ ಸಂಸ್ಥೆ ಆರ್ ಎಸ್ ಎಸ್, ಕುರ್ಚಿ ವ್ಯಾಮೋಹ ಇರುವು ದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರ ನಾಟಕ ಅಲ್ಪಸಂಖ್ಯಾತರಿಗೂ ಗೊತ್ತಾಗಿ ಹೋಗಿದೆ, ಉಪಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಆರ್ ಎಸ್ ಎಸ್ ಬಗ್ಗೆ ಅನಗತ್ಯವಾಗಿ ಟೀಕೆ ಮಾಡುವುದು ಸರಿಯಲ್ಲ. ತಾಲಿಬಾನ್ ಸಂಸ್ಕೃತಿ ಆರ್ ಎಸ್ ಎಸ್ ನದ್ದಲ್ಲ, ಕಾಂಗ್ರೆಸ್ ನವರದ್ದು. ಕೊಳ್ಳಿಯಿಡುವ ಸಂಸ್ಕೃತಿ ,ವಿಕೃತ ಮನಸ್ಸಿನವರು ಕಾಂಗ್ರೆಸಿಗರು ಎಂದರು.