Advertisement

ಅಧಿಕಾರಿಗಳಿಗೆ ರೇಣುಕಾಚಾರ್ಯ ಕ್ಲಾಸ್‌

06:15 PM Aug 04, 2022 | Team Udayavani |

ಹೊನ್ನಾಳಿ: ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಅವಶ್ಯಕತೆ ನಮ್ಮ ಕ್ಷೇತ್ರಕ್ಕೆ ಬೇಕಿಲ್ಲ. ಈಗಾಗಲೇ ಒಂದು ಬಾರಿ ಸೌಮ್ಯವಾಗಿ ಹೇಳಿದ್ದರೂ ತಿದ್ದಿಕೊಳ್ಳುವ ಜಾಯಮಾನ ನಿಮ್ಮದಲ್ಲ. ಇಷ್ಟು ಹೇಳಿದರೂ ಸ್ಪಂದಿಸದಿದ್ದರೆ ನೀವು ಬೇರೆಡೆ ಹೋಗಬಹುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧಿಕಾರಿಗಳನ್ನು ತರಾಟೆಗೆ ತೆದುಕೊಂಡರು.

Advertisement

ಬುಧವಾರ ಪಟ್ಟಣದ ಸಾಮರ್ಥ್ಯಸೌಧದಲ್ಲಿ ಮಳೆ ಹಾನಿ ಬಗ್ಗೆ ಕರೆದಿದ್ದ ತುರ್ತುಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಸೋಮವಾರ ಸುರಿದ ಧಾರಾಕಾರ ಮಳೆಗೆ ರೈತರ ಬದುಕು ಮೂರಾಬಟ್ಟೆಯಾಗಿದೆ. ಎಲ್ಲಾ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದ ಕಂಗಲಾದ ರೈತರು ಮುಂದಿನ ಜೀವನವನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ನಾನು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ.

ನಾನು ಮುನ್ನುಗ್ಗಿದ್ದೇನೆ ಆದರೆ ನೀವು ಮಾತ್ರ ಸ್ಥಳಗಳಿಗೆ ಹೋಗುವುದೋ ಬೇಡವೋ ಎಂದು ಯೋಚಿಸುತ್ತಿದ್ದಿರಿ. ನಿಮಗೆ ಸ್ವಲ್ಪವೂ ಮಾನವೀಯತೆ ಇಲ್ಲವೇ, ನೀವ್ಯಾರೂ ರೈತರ ಮಕ್ಕಳಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಅವಳಿ ತಾಲೂಕಿನಾದ್ಯಂತ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಜಲಾವೃತವಾಗಿದೆ. ಈ ಬಗ್ಗೆ ಮಾನವೀಯತೆ ಆಧಾರದ ಮೇಲೆ ವರದಿ ನೀಡಿ. ಆಗಲಾದರೂ ರೈತರಿಗೆ ಅನುಕೂಲವಾಗಬಹುದು. ಕಾನೂನಿನ ಜೊತೆಗೆ ಮಾನವೀಯತೆಯ ಅರಿವು ಕೂಡ ಇರಬೇಕು ಎಂದರು. ಇಂಥ ತುರ್ತು ಸಭೆಗೂ ಕೆಲವು ಅಧಿ ಕಾರಿಗಳು ಬಾರದೆ ಇರುವುದನ್ನು ಗಮನಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ, ಯಾರು ತುರ್ತು ಸಭೆಗೆ ಬಂದಿಲ್ಲವೋ ಅಂತಹ
ಅ ಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಅಧಿಕಾರಿಗಳಿಗಿಂತ ಹೆಚ್ಚಾಗಿ ಶಾಸಕರಿಗೆ ಹೆಚ್ಚು ಮಾಹಿತಿ ಇರುತ್ತದೆ. ಅವರ ಬಳಿಯೇ ನಾವು ಮಾಹಿತಿ ಪಡೆಯಬೇಕು. ಆದ್ದರಿಂದ ನಮ್ಮ ಹಾಗೂ ಶಾಸಕರ ಮಾಹಿತಿ ಪಡೆದು ನೊಂದವರಿಗೆ ಸಹಾಯ ಮಾಡೋಣ ಎಂದರು.

Advertisement

ಶಾಸಕರಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ಅಲ್ಲದೆ ಇಂತಹ ತುರ್ತು ಸಂದರ್ಭದಲ್ಲೂ ಅವರು ಮನೆಯಲ್ಲಿ ಕೂರದೆ ಜಮೀನು, ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ರೇಣುಕಾಚಾರ್ಯ ಪ್ರಯತ್ನ ಮಾಡುತ್ತಿದ್ದಾರೆ. ಅವರ ಉತ್ಸಹವನ್ನು ನಾವೂ ಮೈಗೂಡಿಸಿಕೊಳ್ಳೋಣ ಎಂದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌, ಸಹಾಯಕ ಅಭಿಯಂತರ ತ್ಯಾಗರಾಜ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರಪ್ರಸಾದ್‌, ತಹಶೀಲ್ದಾರರಾದ ರಶ್ಮಿ, ರೇಣುಕಾ, ಪಿಎಸ್‌ಐ ಬಸವರಾಜ್‌ ಬಿರಾದಾರ್‌, ಬಿಇಒ ಮಂಜುನಾಥಸ್ವಾಮಿ ಭಾಗವಹಿಸಿದ್ದರು.

ಹಣಕ್ಕೆ ಪೀಡಿಸಿದರೆ ಸಹಿಸಲ್ಲ
ಸರ್ಕಾರ ನಿಮಗೂ, ನನಗೂ ವೇತನ ನೀಡುತ್ತಿದೆ. ಹಾಗಾಗಿ ನಾವೆಲ್ಲರೂ ಸೇರಿ ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕು. ಆದರೆ ನೀವು ಮುಗ್ಧ ರೈತರ ಬಳಿ ಕೈ ಚಾಚುವುದು ಸರಿಯೇ, ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ. ಹಣಕ್ಕೆ ಪೀಡಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next