ನಾಲತವಾಡ: ಭಾರತ ಹುಣ್ಣಿಮೆ ಆಸುಪಾಸಿನಲ್ಲಿ ಸ್ಥಳೀಯ ಎಲ್ಲಮ್ಮನ ಭಕ್ತರು ಎಲ್ಲಮ್ಮನ ಗುಡ್ಡಕ್ಕೆ ಹೋದವರನ್ನು ಸ್ವಾಗತಿಸಿ, ಜೋಗಮ್ಮ ಮತ್ತು ಐದು ಜನ ಮುತ್ತೈದೆಯರಿಗೆ ಹಡಲಿಗೆ ತುಂಬುವ ಕಾರ್ಯಕ್ಕೆ ಪಟ್ಟಣದ ಎಲ್ಲಮ್ಮ ಗುಡಿಯಲ್ಲಿ ಚಾಲನೆ ದೊರೆಯಿತು.
ವಿನಾಯಕ ನಗರದ ವಿಶ್ವನಾಥ ಗಂಗನಗೌಡರ ತೋಟದಲ್ಲಿರುವ ರೇಣುಕಾ ಎಲ್ಲಮ್ಮನ ಗುಡಿಯಲ್ಲಿ ಹಡಲಿಗೆ ಕಾರ್ಯ ಜರುಗಿತು.
ಕಡುಬು,ವಡೆ,ರೊಟ್ಟಿ,ಚಪಾತಿ,ಪಲ್ಯ ಸೇರಿದಂತೆ ಹಲವು ಪದಾರ್ಥಗಳನ್ನು ತಯಾರಿಸಿಕೊಂಡು ತಾವು ತಂದಿದ್ದ ದವಸದಾನ್ಯಗಳನ್ನು ಹಡಲಿಗೆಯಲ್ಲಿಟ್ಟು,ಗಂಗಾ ಸ್ಥಳದಿಂದ ತಂದ ನೀರನ್ನು ತುಂಬಿದ ಚೌರಿಕೆಗಳನ್ನು ಹಡಲಿಗೆ ಪಕ್ಕದಲ್ಲಿಟ್ಟು ಪೂಜಿಸುವ ಮೂಲಕ ಆರತಿ ಕರ್ಪೂರವನ್ನು ಬೆಳಗುತ್ತ ‘ಎಲ್ಲಮ್ಮ ನಿನ್ನ ಪಾದಕೆ ಉಧೋ ಉಧೋ ಜಗದಂಭಾ ನಿನ್ನ ಪಾದಕೆ ಉಧೋ ಉಧೋ ಜೋಗುಳ ಭಾವಿ ಸತ್ಯವ್ವ ನಿನ್ನ ಪಾದಕೆ ಉಧೋ ಉಧೋ ಪರಶು ರಾಮ ನಿನ್ನ ಪಾದಕೆ ಉಧೋ ಉಧೋ’ ಎನ್ನುತ್ತ ಸುತ್ತಲಿನ ಎಲ್ಲ ದೇವರ ಹೆಸರನ್ನು ಸ್ಮರಿಸುತ್ತ ಮಂಗಳಾರತಿ ಮಾಡಿ ಜೋಗತಿಯರಿಗೆ ಮತ್ತು ಮುತೈದೆಯರಿಗೆ ಉಣಬಡಿಸಿ ನಂತರ ಕುಟುಂಬವರೂ ತಮ್ಮೊಡನೆ ಆಗಮಿಸಿದ ನೆರೆ ಹೊರೆಯ ಎಲ್ಲರೂ ಊಟ ಮಾಡುವ ಮೂಲಕ ಹಡಲಿಗೆ ತುಂಬುವ ಆಚರಣೆಯು ಸಂಪನ್ನಗೊಂಡಿತು.
ಈ ವೇಳೆ ಮಲ್ಲಿಕಾರ್ಜುನ ಗಂಗನಗೌಡರ,ರಾಘು ಹಂಪನಗೌಡರ,ಚನ್ನಪ್ಪ ಗಂಗನಗೌಡ್ರ,ಶ್ರೀಕಾಂತ ಗಂಗನಗೌಡರ,ಮಾಂತು ಟಕ್ಕಳಕಿ, ಪರಶುರಾಮ ಗಂಗನಗೌಡರ,ಸಂಗಣ್ಣ ಕುಳಗೇರಿ, ಶಿವಪ್ಪ ಗಂಗನಗೌಡರ,ಕಾಶಿನಾಥ ಬಿರಾದಾರ,ಮುದಕಪ್ಪ ಗಂಗನಗೌಡರ,ಮಲ್ಲು ಕಾಟೆ,ಸಂಗು ಗಂಗನಗೌಡರ ಇದ್ದರು.
ಈ ವೇಳೆ ಕೆಲವರು ತಮ್ಮ ತಮ್ಮ ಮನೆಗಳಲ್ಲೂ ಎಕ್ಕದ ಹೂ,ಭತ್ತ,ಗೋಧಿ ತೆನೆ,ಜೋಳದ ತೆನೆ,ಕಡ್ಲಿ ತೆನೆ,ಮಾವಿನ ಎಲೆಗಳಿಂದ ಮನೆ ಬಾಗಿಲಿಗೆ ತೋರಣ ಕಟ್ಟಿ ಮನೆಗೆ ಐದು ಜನ ಜೋಗಮ್ಮಂದಿರು,ಐದು ಜನ ಮುತೈದೆಯರನ್ನು ಆಮಂತ್ರಿಸಿ ಪೂಜೆಯನ್ನು ನಡೆಸುವ ಮೂಲಕ ನಾಲತವಾಡ ಸುತ್ತಮುತ್ತ ಗ್ರಾಮಗಳ ಮನೆಮನಗಳಲ್ಲಿ ಇಂದಿಗೂ ಈ ಸಂಪ್ರದಾಯ ಜರುಗುತ್ತಿದೆ.