Advertisement

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

11:50 PM Jun 12, 2024 | Team Udayavani |

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 13 ಮಂದಿ ಆರೋಪಿಗಳಲ್ಲ, 17 ಮಂದಿ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮತ್ತೊಂದೆಡೆ ಪ್ರಕರಣದಲ್ಲಿ ಎ1 ಪವಿತ್ರಾ ಗೌಡ ಮತ್ತು ಎ2 ದರ್ಶನ್‌ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್‌, ಆತನ ಪ್ರೇಯಸಿ ಪವಿತ್ರಾ ಗೌಡ ಹಾಗೂ ಈ ಇಬ್ಬರ ಆಪ್ತರು, ಸ್ನೇಹಿತರು ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಇದೀಗ ಈ ಆರೋಪಿಗಳ ವಿಚಾರಣೆಯಲ್ಲಿ ಕೊಲೆ ಪ್ರಕರಣದಲ್ಲಿ ಇನ್ನು ನಾಲ್ವರು ಭಾಗಿಯಾಗಿರುವುದು ಪತ್ತೆಯಾಗಿದೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ಆರೋಪಿಗಳ ಅಭಿರಕ್ಷೆ ಮನವಿ ಪತ್ರದಲ್ಲಿ ಆರೋಪಿಗಳ ವಿವರ ಉಲ್ಲೇಖಿಸಿದ್ದಾರೆ.

ಎ1 ಪವಿತ್ರಾ ಗೌಡ (33), ಎ2 ದರ್ಶನ್‌ ಅಲಿಯಾಸ್‌ ಡಿ ಬಾಸ್‌(47), ಎ3 ಪುಟ್ಟಸ್ವಾಮಿ ಅಲಿಯಾಸ್‌ ಕೆ. ಪವನ್‌ (29), ಎ4 ರಾಘವೇಂದ್ರ (43), ಎ5 ನಂದೀಶ (28), ಎ6 ಜಗದೀಶ್‌ ಅಲಿಯಾಸ್‌ ಜಗ್ಗ (ತಲೆಮರೆಸಿಕೊಂಡ ಆರೋಪಿ), ಎ7 ಅನು(ತಲೆಮರೆಸಿಕೊಂಡಿರುವ ಆರೋಪಿ), ಎ8 ರವಿ (ತಲೆಮರೆಸಿ ಕೊಂಡಿರುವ ಆರೋಪಿ), ಎ9 ರಾಜು (ತಲೆಮರೆಸಿಕೊಂಡಿರುವ ಆರೋಪಿ), ಎ10 ವಿನಯ… (38), ಎ11ನಾಗರಾಜ್‌ (41), ಎ12 ಲಕ್ಷ್ಮಣ್‌ (54), ಎ13 ದೀಪಕ್‌ (39), ಎ14 ಪ್ರದೂಷ್‌ (40), ಎ15 ಕಾರ್ತಿಕ್‌ ಅಲಿಯಾಸ್‌ ಕಪ್ಪೆ (27), ಎ16 ಕೇಶವಮೂರ್ತಿ (27), ಎ17 ನಿಖೀಲ್‌ ನಾಯಕ್‌ (21) ಅವರನ್ನು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಅಪರಿಚಿತ ಶವ ಪ್ರಕರಣದಲ್ಲೇ ಹೆಚ್ಚುವರಿಯಾಗಿ ಆರೋಪಿಗಳ ಹೆಸರು ಉಲ್ಲೇಖಿಸಿ ಕೋರ್ಟ್‌ಗೆ ಸಲ್ಲಿಸಲಾಗಿದೆ.

ಸ್ವಇಚ್ಛಾ ಹೇಳಿಕೆ ದಾಖಲು
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ದರ್ಶನ್‌ ಸೇರಿ ಎಲ್ಲ ಆರೋಪಿಗಳಿಂದ ಪೊಲೀಸರು ಸ್ವ-ಇಚ್ಚಾ ಹೇಳಿಕೆ ಪಡೆದುಕೊಂಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದ ನಟ ದರ್ಶನ್‌ ಸೇರಿ 12 ಮಂದಿ ಆರೋಪಿಗಳು ಹಾಗೂ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಪವಿತ್ರಾ ಗೌಡಳನ್ನೂ ಠಾಣೆಗೆ ಕರೆಸಿಕೊಂಡು ಹೇಳಿಕೆ ಪಡೆಯಲಾಗಿದೆ. ರೇಣುಕಾಸ್ವಾಮಿ ತನ್ನೊಂದಿಗೆ ಚಾಟ್‌ ಮಾಡುತ್ತಿದ್ದ ದಿನದಿಂದ ಆತನ ಹತ್ಯೆಗೈಯುವರೆಗಿನ ಎಲ್ಲ ಘಟನಾವಳಿಗಳು, ತನ್ನೊಂದಿಗೆ ಆತ ಯಾರ ಹೆಸರಿನಲ್ಲಿ ಚಾಟಿಂಗ್‌ ಮಾಡುತ್ತಿದ್ದ ಎಂಬೆಲ್ಲ ವಿಚಾರವನ್ನು ಆಕೆ ವಿವರಿಸಿದ್ದಾಳೆ. ಹಾಗೆಯೇ ದರ್ಶನ್‌ ಹಾಗೂ ಇತರ ಆರೋಪಿಗಳು, ಯಾವ ರೀತಿ ರೇಣುಕಾಸ್ವಾಮಿಯನ್ನು ಆತನನ್ನು ಚಿತ್ರದುರ್ಗದಿಂದ ಹೇಗೆ ಬೆಂಗಳೂರಿಗೆ ಕರೆಸಿಕೊಳ್ಳಲಾಯಿತು. ಬಳಿಕ ಪಟ್ಟಣಗೆರೆಯ ವಿನಯ್‌ಗೆ ಸೇರಿದ ಶೆಡ್‌ಗೆ ಕರೆದೊಯ್ದು ಹಲ್ಲೆ ನಡೆಸಿ, ಕೊಲೆಗೈಯಲಾಗಿತ್ತು. ಆಗ ಯಾರೆಲ್ಲ ಇದ್ದರು. ಶವ ಸಾಗಣೆಗೆ ಯಾರು ಹಣ ನೀಡಿದ್ದರು. ಪೊಲೀಸರಿಗೆ ಶರಣಾಗಲು ಯಾರು ಹಣ ನೀಡಿದ್ದರು ಎಂಬೆಲ್ಲ ಹೇಳಿಕೆಯನ್ನು ಆರೋಪಿಗಳಿಂದ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿದೆ.

Advertisement

ಜಮಾಯಿಸಿದ್ದ ಅಭಿಮಾನಿಗಳಿಗೆ ಲಾಠಿ ಏಟು
ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್‌, ಪವಿತ್ರಾಗೌಡ ಸೇರಿ 13 ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಅವರನ್ನು ಅಲ್ಲಿಂದಲೇ ಸ್ಥಳ ಮಹಜರು ನಡೆಸಲು ಕರೆದೊಯ್ಯಲಾಯಿತು. ಆರೋಪಿಗಳನ್ನು ಕರೆದೊಯ್ಯುವ ಮಾರ್ಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆ ಆಗಿದ್ದರು. ಠಾಣೆ ಎದುರೂ ಬುಧವಾರ ಸಹ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಹೀಗಾಗಿ ಸ್ಥಳದಿಂದ ತೆರಳುವಂತೆ ಪೊಲೀಸರು ಮನವಿ ಮಾಡಿದರೂ ಜನರು ಕದಲಿಲ್ಲ. ಆದರಿಂದ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಆಯುಕ್ತರಿಂದಲೇ ಖುದ್ದು ನಟ ದರ್ಶನ್‌ ವಿಚಾರಣೆ
ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಅವರು ಬುಧವಾರ ಅನ್ನಪೂರ್ಣೇಶ್ವರಿನಗರ ಠಾಣೆಗೆ ಭೇಟಿ ನೀಡಿದರು. ಈ ವೇಳೆ ನಟ ದರ್ಶನ್‌ನನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆರೋಪಿಯಿಂದ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೃತ್ಯಕ್ಕೆ ಬಳಸಿದ್ದ ಕಾರು, ಜೀಪ್‌
ಜತೆಗೆ ಮದ್ಯದ ಬಾಟಲಿಗಳು ಜಪ್ತಿ
ಬಂಧಿತ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಮತ್ತು ದರ್ಶನ್‌ ಓಡಾಟಕ್ಕೆ ಬಳಸಿದ್ದ ಮಹಿಂದ್ರಾ ಥಾರ್‌ ಜೀಪ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಕಾರ್ಪಿಯೋ ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಪಟ್ಟಣಗೆರೆಯಿಂದ ಸುಮ್ಮನಹಳ್ಳಿಯ ಸತ್ವ ಅಪಾರ್ಟ್‌ಮೆಂಟ್‌ ಸಮೀಪದ ಮೋರಿಗೆ ತರಲಾಗಿತ್ತು. ಇನ್ನು ದರ್ಶನ್‌, ತನ್ನ ಥಾರ್‌ ಜೀಪ್‌ನಲ್ಲೇ ಪಟ್ಟಣಗೆರೆಯ ಶೆಡ್‌ ಹಾಗೂ ಶವ ಬಿಸಾಡಿದ ಸ್ಥಳಕ್ಕೆ ಹೋಗಿದ್ದಾನೆ. ಹೀಗಾಗಿ ಈ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ ಜೀಪ್‌ನಲ್ಲಿದ್ದ ಎರಡು ಮದ್ಯದ ಬಾಟಲಿಗಳನ್ನು ಸಹ ಜಪ್ತಿ ಮಾಡಲಾಗಿದೆ.

ಆರೋಪಿಗಳಿಂದ ಏನೆಲ್ಲ ಸಂಗ್ರಹಿಸಬೇಕಿದೆ?
-ಆರೋಪಿಗಳ ಮೊಬೈಲ್‌ಗ‌ಳ ರಿಟ್ರಿವ್‌ ಮಾಡಿ ಮಾಹಿತಿ ಸಂಗ್ರಹ
-ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದೊಯ್ದು ಮಹಜರು
– ಸಾಕ್ಷಿದಾರರ ಹೇಳಿಕೆ ದಾಖಲಿಸುವ ಪ್ರಕ್ರಿಯೆ
-ಕೊಲೆ ಒಪ್ಪಿಕೊಳ್ಳಲು ನೀಡಿದ್ದ ನಗದು ಹಣ ಜಪ್ತಿ ಮಾಡಿಕೊಳ್ಳುವುದು
-ದರ್ಶನ್‌ ನಾಶಮಾಡಿರುವ ಸಾಕ್ಷ್ಯಗಳ ಕಲೆ ಹಾಕಬೇಕು

ದರ್ಶನ್‌ ಕೃತ್ಯ ಎಸಗಿಲ್ಲ: ವಕೀಲ ನಾರಾಯಣಸ್ವಾಮಿ
ಬುಧವಾರ ಬೆಳಗ್ಗೆ ಅನ್ನಪೂರ್ಣೇಶ್ವರಿನಗರ ಠಾಣೆಗೆ ಆಗಮಿಸಿದ್ದ ದರ್ಶನ್‌ ಪರ ವಕೀಲ ನಾರಾಯಣಸ್ವಾಮಿ, ತಮ್ಮ ಕಕ್ಷಿದಾರರನ ಜತೆ ಕೆಲ ಹೊತ್ತು ಚರ್ಚಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೃತ್ಯ ನಡೆದ ಸ್ಥಳಕ್ಕೆ ಹೋಗಿದ್ದ ಮಾತ್ರಕ್ಕೆ ದರ್ಶನ್‌ ಕೊಲೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ದರ್ಶನ್‌ ಕೃತ್ಯ ಎಸಗಿದ್ದಾರೆ ಎಂಬುದು ಸರಿಯಲ್ಲ. ಪವಿತ್ರಾ ಗೌಡ ಕೃತ್ಯ ಅಪರಾಧ ಮಾಡಿಲ್ಲ.ಮತ್ತೊಂದೆಡೆ ರೇಣುಕಾಸ್ವಾಮಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗಿದೆ. ಅಲ್ಲದೆ ರೇಣುಕಾಸ್ವಾಮಿ ಮೇಲೆ ಕಂಡು ಬಂದಿರುವ ಗಾಯದ ಗುರುತುಗಳು ನಾಯಿ ಕಚ್ಚಿರುವುದು. ಎಲ್ಲವೂ ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next