Advertisement

ಬಾಡಿಗೆ ಸಮಸ್ಯೆ: ಉಭಯ ಜಿಲ್ಲೆಗಳ ಹಲವು ಬಿಎಸ್ಸೆನ್ನೆಲ್‌ ಟವರ್‌ ಬಂದ್‌

02:02 AM Jun 19, 2019 | sudhir |

ಕೋಟ/ವಿಟ್ಲ: ವಾರದಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಬಿಎಸ್ಸೆನ್ನೆಲ್‌ ಮೊಬೈಲ್‌ ಗ್ರಾಹಕರು ನೆಟ್‌ವರ್ಕ್‌ ಸಿಗದೆ ಪರದಾಡುತ್ತಿದ್ದಾರೆ. ಬಾಕಿ ಬಾಡಿಗೆಗಾಗಿ ಖಾಸಗಿ ಸಂಸ್ಥೆಯೊಂದು ತನ್ನ ಮೂಲಕ ಕಾರ್ಯಾಚರಿಸುತ್ತಿದ್ದ ಬಿಎಸ್ಸೆನ್ನೆಲ್‌ ಟವರ್‌ಗಳನ್ನು ಸ್ಥಗಿತಗೊಳಿಸಿರುವುದೇ ಇದಕ್ಕೆ ಕಾರಣ.

Advertisement

ಬಿಎಸ್ಸೆನ್ನೆಲ್‌ನ ಕೆಲವು ಟವರ್‌ಗಳು ಸ್ವಂತವಾಗಿ ಮತ್ತು ಇನ್ನು ಕೆಲವು ಖಾಸಗಿಯಿಂದ ನಿರ್ವಹಣೆಗೊಳ್ಳುತ್ತವೆ. ಜಿಟಿಎಲ್‌ ಕಂಪೆನಿ ದೇಶಾದ್ಯಂತ ಬಿಎಸ್ಸೆನ್ನೆಲ್‌ನ ಸಾವಿರಾರು ಟವರ್‌ಗಳನ್ನು ನಿರ್ವಹಿಸುತ್ತಿದೆ. ಇದಕ್ಕಾಗಿ ಮಾಸಿಕ ಸುಮಾರು 30 ಸಾವಿರ ರೂ. ಬಾಡಿಗೆ ಪಾವತಿಯಾಗುತ್ತದೆ. ಹಲವು ತಿಂಗಳಿಂದ ಬಿಎಸ್ಸೆನ್ನೆಲ್‌ ಬಾಡಿಗೆ ಪಾವತಿಸದ್ದರಿಂದ ಜಿಟಿಎಲ್‌ ತನ್ನ ಸೇವೆ ಸ್ಥಗಿತಗೊಳಿಸಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಸಾೖಬ್ರಕಟ್ಟೆ, ಮಣಿಪಾಲ, ಉಡುಪಿ, ಶಿರೂರು, ಮಲ್ಲಾರು, ಮಲ್ಪೆ, ವಡಭಾಂಡೇ ಶ್ವರ ಹಾಗೂ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ 3, ಪುತ್ತೂರು ತಾಲೂಕಿನ 2, ಬಂಟ್ವಾಳ ತಾಲೂಕಿನ 3 ಸೇರಿದಂತೆ ಒಟ್ಟು 25 ಕಡೆಗಳಲ್ಲಿ ಟವರ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ಗ್ರಾಮಾಂತರದಲ್ಲಿ ಹೆಚ್ಚು ಪರದಾಟ
ನಗರ ಪ್ರದೇಶವಾದರೆ ಹತ್ತಿರದಲ್ಲಿ ರುವ ಮತ್ತೂಂದು ಬಿಎಸ್ಸೆನ್ನೆಲ್‌ ಟವರ್‌ನಿಂದ ಸ್ವಲ್ಪಮಟ್ಟಿನ ಸಿಗ್ನಲ್‌ ಸಿಗುತ್ತದೆ. ಆದರೆ ಗ್ರಾಮಾಂತರ ಭಾಗದಲ್ಲಿ ಟವರ್‌ಗಳು ದೂರ ಇರುವುದರಿಂದ ಸಿಗ್ನಲ್‌ ಸಿಗುತ್ತಿಲ್ಲ, ಇಂಟರ್‌ನೆಟ್‌ ಸೇವೆ ಕೂಡ ಸಿಗುತ್ತಿಲ್ಲ.

ಕರೆಗೆ ಕಿ.ಮೀ.ಗಟ್ಟಲೆ ಸುತ್ತಾಟ
ಒಂದೇ ಸಿಮ್‌ ಇರುವ ಗ್ರಾಹಕರು ಮೊಬೈಲ್‌ ಬಳಕೆಗೆ ಕಿ.ಮೀ.ದೂರದ ಇನ್ನೊಂದು ಟವರ್‌ ಸಮೀಪ ತೆರಳಬೇಕಾಗಿದೆ. ಈ ಸಮಸ್ಯೆಗೆ ಕಾರಣವೇನು? ಪರಿಹಾರ ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.

Advertisement

ಸಮಸ್ಯೆ ಇಷ್ಟೇ ಅಲ್ಲ …
ಬಿಎಸ್‌ಎನ್‌ಎಲ್‌ ಸಂಸ್ಥೆಯು ಮೆಸ್ಕಾಂಗೆ ವಿದ್ಯುತ್‌ ಬಿಲ್ಲನ್ನೂ ಪಾವತಿಸಿಲ್ಲ. ಗುತ್ತಿಗೆದಾರ ಕಾರ್ಮಿಕರಿಗೆ ವೇತನವನ್ನೂ ನೀಡಿಲ್ಲ. ದೂರವಾಣಿ ವಿನಿಮಯ ಕೇಂದ್ರಗಳ ಜನರೇಟರ್‌ಗೆ ಡೀಸೆಲ್‌ಗ‌ೂ ಅದರ ಬಳಿ ಹಣವಿಲ್ಲ. ವಿದ್ಯುತ್‌ ಕಡಿತಗೊಂಡರೆ ಜನರೇಟ್‌ ಕೂಡ ಚಾಲೂ ಆಗದೆ ಎಲ್ಲವೂ ಸ್ಥಬ್ಧವಾಗಲಿದೆ. ಪರಿಹಾರ ಮಾರ್ಗಗಳನ್ನು ಯೋಚಿಸದೇ ಇದ್ದಲ್ಲಿ ಗ್ರಾಹಕರು ತೀವ್ರ ತೊಂದರೆಗೊಳಗಾಗಲಿದ್ದಾರೆ.

ಪೋರ್ಟ್‌ ಅನಿವಾರ್ಯ
ಸರಕಾರಿ ಸ್ವಾಮ್ಯದ ಸಂಸ್ಥೆ ಎನ್ನುವ ಕಾರಣಕ್ಕೆ ಅಭಿಮಾನದಿಂದ ಬಿಎಸ್ಸೆನ್ನೆಲ್‌ ಉಪಯೋಗಿಸುತ್ತಿದ್ದೆವು. ಆದರೆ ಈಗ ಟವರ್‌ ಸ್ಥಗಿತಗೊಂಡು ಸಮಸ್ಯೆಯಾಗಿದೆ. ಗ್ರಾಮಾಂತರದಲ್ಲಿ ಇದೇ ಕಂಪೆನಿಯ ಬೇರೆ ಟವರ್‌ ಹತ್ತಿರವೆಲ್ಲೂ ಇಲ್ಲದಿರುವುದರಿಂದ ನೆಟ್‌ವರ್ಕ್‌ ಸಿಗುವುದೇ ಇಲ್ಲ. ಹೀಗಾಗಿ ಬೇರೆ ಕಂಪೆನಿಗೆ ಪೋರ್ಟ್‌ ಆಗಲು ನಿರ್ಧರಿಸಿದ್ದೇವೆ.
– ವಿನಯ್‌ ಕುಮಾರ್‌ ಸಾೖಬ್ರಕಟ್ಟೆ, ಗ್ರಾಹಕ

ಬಾಡಿಗೆ ಸಮಸ್ಯೆಯಿಂದ ಸ್ಥಗಿತ
ಜಿಟಿಎಲ್‌ ಕಂಪೆನಿ ಮೂಲಕ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹಲವು ಟವರ್‌ಗಳು ಬಾಡಿಗೆ ಸಮಸ್ಯೆಯಿಂದ ಸ್ಥಗಿತಗೊಂಡಿವೆ. ಉಡುಪಿ ಮತ್ತು ದ.ಕ. ಜಿಲ್ಲೆಯ 22 ಕಡೆ ಈ ಸಮಸ್ಯೆ ಇದೆ. ಇದು ಉನ್ನತ ಸ್ಥರದಲ್ಲಿ ಪರಿಹಾರವಾಗಬೇಕಾದ ವಿಚಾರವಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
– ಡಿಜಿಎಂ, ಬಿಎಸ್ಸೆನ್ನೆಲ್‌ ಮೊಬೈಲ್‌ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next