ಬೆಂಗಳೂರು: ಲಾಕ್‌ಡೌನ್ ಬೆನ್ನಲ್ಲೇ ಕಾರ್ಮಿಕರು ಕೊಕ್ ಕೊಟ್ಟಿದ್ದಾಯ್ತು. ಅದರಿಂದ ಬೆಸ್ಕಾಂನ “ಕರೆಂಟ್ ಶಾಕ್’ ತಟ್ಟಿದ್ದಾಯ್ತು. ನಗರದ ಹೋಟೆಲ್‌ಗಳಿಗೆ ಈಗ “ಬಾಡಿಗೆ ಭೂತ’ದ ಸರದಿ. ಅತ್ತ ಸಡಿಲಿಕೆ ಹಿನ್ನೆಲೆಯಲ್ಲಿ ಇತ್ತ ಹೋಟೆಲ್‌ಗಳ ಶೆಳrರ್ಸ್ ಗಳನ್ನು ನಿಧಾನವಾಗಿ ಮೇಲೆತ್ತಲಾಗುತ್ತಿದೆ. ಅಷ್ಟರಲ್ಲಿ ಬಾಕಿ ಇರುವ ಬಾಡಿಗೆ ವಸೂಲಿ ಕಾಟ ಶುರುವಾಗಿದೆ. ಇದು ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್ ಉದ್ದಿಮೆಯನ್ನು ಕಂಗೆಡಿಸಿದೆ. ವ್ಯಾಪಾರ ಇಲ್ಲದೆ ಕೈಯಲ್ಲಿ ಕಾಸಿಲ್ಲ, ಹಾಗಂತ ಬಾಡಿಗೆ ನಿಲ್ಲಿಸುವಂತಿಲ್ಲ. ಈ ದುಗುಡದಲ್ಲಿ ಹೋಟೆಲ್ ಮಾಲಿಕರು ಉದ್ಯಮದ ಚೇತರಿಕೆ ನಿರೀಕ್ಷೆಯಲ್ಲಿದ್ದಾರೆ.
ರಾಜಧಾನಿ ಬೆಂಗಳೂರಿನ ಅಷ್ಟದಿಕ್ಕುಗಳಿಗೂ ಹೋಟೆಲ್ ಉದ್ಯಮ ಚಾಚಿಕೊಂಡಿದೆ. ಕೊರೊನಾ ತಡೆಗಟ್ಟಲು ಕಳೆದ ಮಾ 24ರಿಂದ ಸುಮಾರು 2 ತಿಂಗಳಿಂದ ನಗರದ ಹೋಟೆಲ್ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ಇದರ ನೇರ ಪರಿಣಾಮ ಹೊಟೇಲ್ ಮಾಲಿಕರು ಮತ್ತು ಕಟ್ಟಡ ಮಾಲಿಕರು ಇಬ್ಬರೂ ಏಕಕಾಲಕ್ಕೆ ಎದುರಿಸುತ್ತಿದ್ದಾರೆ. ಆದರೆ, ಹೊಟೇಲ್ ಮಾಲಿಕರಿಗೆ ಇದು ತುಸು ಹೆಚ್ಚು ಬಾಧಿಸುತ್ತಿದೆ. ನಗರದಲ್ಲಿ ಅಂದಾಜು 17 ಸಾವಿರ ಐಷಾರಾಮಿ ಹೋಟೆಲ್ ಗಳಿದ್ದು, ಇದರಲ್ಲಿ ಸುಮಾರು 500ಕ್ಕೂ ಹೆಚ್ಚು ಪಂಚತಾರಾ ಹೋಟೆಲ್‌ಗಳಿವೆ.
ಜತೆಗೆ ದೊಡ್ಡ ಉದ್ಯಮ ಅಲ್ಲದಿದ್ದರೂ ಹೋಟೆಲ್ ಉದ್ಯಮದ ವ್ಯಾಪ್ತಿಗೆ ಬರುವ ದರ್ಶಿನಿ, ಉಪಾಹಾರ ಕೇಂದ್ರ, ಬೆಳಗ್ಗೆ ಮತ್ತು ಸಂಜೆ ಮಾತ್ರ ನಡೆಯುವ ತಿಂಡಿ ಕೇಂದ್ರ, ಕಾಂಡಿಮೆಂಟ್ಸ್ ಮತ್ತಿತರ ಸಣ್ಣ ಹೋಟೆಲ್‌ಗಳ ಸಂಖ್ಯೆ 35 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಹೋಟೆಲ್ ಉದ್ಯಮದ ಈ ಎರಡೂ ವರ್ಗಗಳಿಗೂ ಕೊರೊನಾ ಬಿಸಿ ತಟ್ಟಿದೆ. ನಗರದಲ್ಲಿನ ಹೋಟೆಲ್‌ಗಳ ಪೈಕಿ ಶೇ.5ರಿಂದ 10 ಮಾತ್ರ ಸ್ವಂತ ಕಟ್ಟಡದಲ್ಲಿದ್ದು, ಉಳಿದ ಶೇ.90ರಷ್ಟು ಹೋಟೆಲ್‌ಗಳು ಬಾಡಿಗೆ ಕಟ್ಟಡ ಅವಲಂಬಿಸಿವೆ. ಕನಿಷ್ಠ 10 ಸಾವಿರದಿಂದ ಗರಿಷ್ಠ 3 ಲಕ್ಷ ರೂ.ವರೆಗೆ ತಿಂಗಳ ಬಾಡಿಗೆ ಇದೆ.
ಐಷಾರಾಮಿ ಹೋಟೆಲ್‌ಗಳ ಲೆಕ್ಕ ಬೇರೆ ಇರುತ್ತದೆ. ಸಣ್ಣ ಹೋಟೆಲ್‌ಗಳಪೈಕಿ ಶೇ.60 ಹೋಟೆಲ್‌ಗಳು ಆಯಾ ದಿನದ ಸಾಮಾನು ತಂದು ವ್ಯವಹಾರ ನಡೆಸುತ್ತಾರೆ. ಇಂತಹವರು ಕಳೆದು 2 ತಿಂಗಳಿಂದ ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇನ್ನು ಪರಿಸ್ಥಿತಿ ಇನ್ನೆಷ್ಟು ತಿಂಗಳು ಹೀಗೇ ಇರುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಒಂದೊಮ್ಮೆ ಹೋಟೆಲ್‌ಗಳು ಆರಂಭಿಸಿದರೂ, ವ್ಯಾಪಾರವಂತೂ ಮೊದಲಿನಂತಿರುವು ದಿಲ್ಲ ಎಂಬುದು ಹೋಟೆಲ್ ಉದ್ಯಮಿಗಳು, ಮಾಲಿಕರನ್ನು ಚಿಂತೆಗೀಡು ಮಾಡಿದೆ.
ಮುಂದಿನ ದಿನದಲ್ಲೂ ಹೋಟೆಲ್ ಉದ್ಯಮ ಸವಾಲು..: ಬೆಂಗಳೂರು ಅಷ್ಟೇ ಅಲ್ಲ ಇಡೀ ರಾಜ್ಯದ ಹೋಟೆಲ್ ಉದ್ಯಮ ಬಹುತೇಕ ಬಾಡಿಗೆ ಕಟ್ಟಡಗಳನ್ನು ಅವಲಂಬಿಸಿದೆ. ಲಾಕ್ ಡೌನ್‌ನಿಂದ ಬಾಡಿಗೆಯಷ್ಟೇ ಅಲ್ಲ, ಕೆಲಸಗಾರರಿಗೆ ಊಟ, ವಸತಿ ಕೊಡುವುದೂ ಸವಾಲಿನ ಕೆಲಸ. ಲಾಕ್‌ಡೌನ್ ಮುಗಿದ ಬಳಿಕ ಗ್ರಾಹಕರು ಹೋಟೆಲ್‌ಗಳಿಗೆ ಮುಕ್ತವಾಗಿ ಬರುತ್ತಾರೆ ಎಂದು ಹೇಳಲಿಕ್ಕೂ ಆಗುವುದಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ ಮುಂದಿನ ದಿನಗಳಲ್ಲಿ ಶೇ. 30ರಿಂದ 40 ಹೋಟೆಲ್‌ಗಳು ಬಂದ್ ಅಗಬಹುದು. ಇಂತಹ ಸಂದರ್ಭದಲ್ಲಿ ಕಟ್ಟಡ ಮಾಲಿಕರು ಉದಾರತೆ ತೋರಿದರೆ ಒಳ್ಳೆಯದು. ಸರ್ಕಾರವೂ ಸಹಾಯಹಸ್ತ ಚಾಚಬೇಕು ಎಂದು ಕರ್ನಾಟಕ ಪ್ರದೇಶ ಹೋಟೆಲ್‌ಗಳ ಮತ್ತು ರೆಸ್ಟೋರೆಂಟ್‌ಗಳ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಹೇಳುತ್ತಾರೆ.
ಸರ್ಕಾರ ನೆರವಿಗೆ ಬರಲಿ: ಕೊರೊನಾ ಲಾಕ್‌ಡೌನ್ ಹೋಟೆಲ್ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಕಟ್ಟಡ ಮಾಲಿಕರಿಗೂ ಅವರದೇ ಆದ ಬಾಧ್ಯತೆಗಳಿರುತ್ತವೆ. ಅವರು ಬಾಡಿಗೆ ಕೇಳುವುದನ್ನು ತಪ್ಪು ಎಂದು ಹೇಳಲು ಆಗಲ್ಲ. ಸಣ್ಣ ಹೋಟೆಲ್‌ಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬೇಕು. ಒಂದು ಬಾರಿಯ ಪ್ಯಾಕೇಜ್ ಘೋಷಣೆ, ಸುಲಭ ಸಾಲ ಸೌಲಭ್ಯ ಒದಗಿಸಬೇಕು, ಬಾಡಿಗೆ ವಿಚಾರದಲ್ಲಿ ಹೋಟೆಲ್ ಮಾಲಿಕರು, ಕಟ್ಟಡ ಮಾಲಿಕರ ನಡುವೆ ಸರ್ಕಾರವೇ ಸಂಧಾನ ಸೂತ್ರ ಏರ್ಪಡಿಸಬೇಕು ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಒತ್ತಾಯಿಸುತ್ತಾರೆ.
ಲಾಕ್‌ಡೌನ್ ಪರಿಣಾಮ ಹೋಟೆಲ್ ಉದ್ಯಮ ತುಂಬಾ ಸಂಕಷ್ಟಕ್ಕೆ ಸಿಲುಕಿದೆ. ಬಹುತೇಕ ಕಟ್ಟಡ ಮಾಲೀಕರು ಬಾಡಿಗೆಗೆ ಬೇಡಿಕೆ ಇಡುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಸರ್ಕಾರದ ಕೈಯಲ್ಲಿದೆ. ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ಸೂತ್ರ ಕಂಡುಕೊಳ್ಳಬೇಕು. ಕಟ್ಟಡ ಮಾಲೀಕರಿಗೆ ವಿನಾಯಿತಿ ಸಿಕ್ಕರೆ ಅವರು ಬಾಡಿಗೆದಾರರಿಗೆ ರಿಯಾಯ್ತಿ ಕೊಡುತ್ತಾರೆ’.
-ಚಂದ್ರಹಾಸ, ಜಂಟಿ ಕಾರ್ಯದರ್ಶಿ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್