Advertisement

ಕಾಂಗ್ರೆಸ್ ಕೇಂದ್ರ ಕಚೇರಿ, ಸೋನಿಯಾ ನಿವಾಸದ ಲಕ್ಷಾಂತರ ರೂ. ಬಾಡಿಗೆ ಬಾಕಿ: RTIನಲ್ಲಿ ಬಯಲು

04:40 PM Feb 10, 2022 | Team Udayavani |

ನವದೆಹಲಿ: ಕಾಂಗ್ರೆಸ್ ಮುಖಂಡರಿಗೆ ಮುಜುಗರಕ್ಕೀಡಾಗುವ ಮಾಹಿತಿಯೊಂದು ಆರ್ ಟಿಐನಿಂದ ಬಯಲಾಗಿದ್ದು, ರಾಷ್ಟ್ರರಾಜಧಾನಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿ ಹಾಗೂ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯ ನಿವಾಸದ ಲಕ್ಷಾಂತರ ರೂಪಾಯಿ ಬಾಡಿಗೆ ಬಾಕಿ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಅಯೋಧ್ಯೆ ಶ್ರೀರಾಮನ ಫ್ಯಾಕ್ಟರಿಯಿಂದ ಕೇಸರಿ ಶಾಲು ಬಂದಿತ್ತು: ಸಚಿವ ಈಶ್ವರಪ್ಪ

ಸಾಮಾಜಿಕ ಕಾರ್ಯಕರ್ತ ಸುಜೀತ್ ಪಟೇಲ್ ಸಲ್ಲಿಸಿರುವ ಆರ್ ಟಿಐಗೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೀಡಿರುವ ಪ್ರತ್ಯುತ್ತರದಲ್ಲಿ, ಕಾಂಗ್ರೆಸ್ ನಾಯಕಿ ಸೋನಿಯಾ ನಿವಾಸ ಹಾಗೂ ಕೆಲವು ಕಚೇರಿಗಳ ಬಾಡಿಗೆ ಬಾಕಿ ಇರುವ ಅಂಶ ಬಹಿರಂಗಗೊಂಡಿದೆ.

ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯ ಬಾಡಿಗೆ 12,69,902 ರೂಪಾಯಿ ಪಾವತಿಸಲು ಬಾಕಿ ಇದೆ. 2012ರ ಡಿಸೆಂಬರ್ ನಂತರ ಬಾಡಿಗೆ ಪಾವತಿಯಾಗಿಲ್ಲ ಎಂದು ಆರ್ ಟಿಐನಲ್ಲಿ ವಿವರಿಸಿದೆ.

ಅದೇ ರೀತಿ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದ ಬಾಡಿಗೆ 2020ರ ಸೆಪ್ಟೆಂಬರ್ ನಂತರ ಪಾವತಿಯಾಗಿಲ್ಲ. 10 ಜನಪಥ್ ನಿವಾಸದ ತಿಂಗಳ ಬಾಡಿಗೆ 4,610 ರೂಪಾಯಿ ಎಂದು ಆರ್ ಟಿಐ ಹೇಳಿದೆ.

Advertisement

ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್ ವಾಸವಾಗಿರುವ ಬಂಗಲೆಯ ಸುಮಾರು 5,07,911 ಲಕ್ಷ ರೂ. ಬಾಡಿಗೆ ಬಾಕಿ ಇದೆ. 2013ರ ಆಗಸ್ಟ್ ನಲ್ಲಿ ಕೊನೆಯದಾಗಿ ಬಾಡಿಗೆ ಪಾವತಿಸಲಾಗಿತ್ತು ಎಂದು ವರದಿ ತಿಳಿಸಿದೆ.

2010ರ ಜೂನ್ ನಲ್ಲಿ 9ಎ ರೋಸ್ ಅವೆನ್ಯೂ ಪ್ರದೇಶದಲ್ಲಿ ಪಕ್ಷದ ಕಚೇರಿ ನಿರ್ಮಾಣ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ನಿಯಮದ ಪ್ರಕಾರ ಕಾಂಗ್ರೆಸ್ ಪಕ್ಷ ಅಕ್ಬರ್ ರಸ್ತೆಯಲ್ಲಿರುವ ಕಚೇರಿ ಹಾಗೂ ಬಂಗಲೆಗಳನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ವಾಸ್ತವ್ಯ ಮುಂದುವರಿಕೆಗಾಗಿ ಹಲವು ಬಾರಿ ಅವಧಿಯನ್ನು ವಿಸ್ತರಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.

ಹಣಕಾಸಿನ ಅಗತ್ಯವಿದೆ; ಬಿಜೆಪಿ ವ್ಯಂಗ್ಯ

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪಕ್ಷದ ಕೇಂದ್ರ ಕಚೇರಿ ಮತ್ತು ನಿವಾಸಗಳ ಲಕ್ಷಾಂತರ ರೂ. ಬಾಡಿಗೆ ಬಾಕಿ ಇರಿಸಿಕೊಂಡಿರುವ ಬಗ್ಗೆ ಭಾರತೀಯ ಜನತಾ ಪಕ್ಷದ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ವ್ಯಂಗ್ಯವಾಡಿದ್ದು, ಸೋನಿಯಾ ಗಾಂಧಿಗೆ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ, ಯಾಕೆಂದರೆ ಈಗ ಯಾವುದೇ ಹಗರಣ ಮಾಡಲು ಆಗುತ್ತಿಲ್ಲ. ಚುನಾವಣೆಗಳಲ್ಲಿ ಸೋತ ಬಳಿಕ ಸೋನಿಯಾ ಗಾಂಧಿಜೀಗೆ ಬಾಡಿಗೆ ಪಾವತಿಸಲು ಆಗುತ್ತಿಲ್ಲ. ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ಮಾನವೀಯತೆ ನೆಲೆಯಲ್ಲಿ ನೆರವನ್ನು ನೀಡುತ್ತಿದ್ದು, ಅದಕ್ಕಾಗಿ #SoniaGandhiReliefFund ಪ್ರಚಾರಾಂದೋಲನ ಆರಂಭಿಸಿದ್ದು, ಸೋನಿಯಾ ಗಾಂಧಿ ಖಾತೆಗೆ 10 ರೂಪಾಯಿ ಕಳುಹಿಸಿದ್ದೇನೆ. ಪ್ರತಿಯೊಬ್ಬರು ಆಕೆಗೆ ನೆರವು ನೀಡಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಟ್ವೀಟ್ ನಲ್ಲಿ ಕುಹಕವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next