Advertisement
ಜಾಗ್ವಾರ್, ಲ್ಯಾಂಡ್‌ರೋವರ್‌ನಂಥ ಲಕ್ಸುರಿ ಕಾರಿನಲ್ಲಿ ಲಾಂಗ್ ಡ್ರೈವ್ ಮಾಡಬೇಕೆಂದೋ, ಹ್ಯಾರ್ಲಿ ಡೆವಿಡ್‌ಸನ್‌ನಂಥ ಬೈಕ್‌ನಲ್ಲಿ ಕರ್ನಾಟಕ ಸುತ್ತಿಬರಬೇಕೆಂದೋ ಅಥವಾ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲೇ ಒಂದು ಸುತ್ತು ಹಾಕಿ ಬರೋಣವೆಂದೋ ಕನಸು ಕಾಣುವ ಯುವಕ-ಯುವತಿಯರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಆದರೆ ಇವೆಲ್ಲ “ನನ್ನಿಂದ ಸಾಧ್ಯವಿಲ್ಲ’ ಎಂದು ನಿರಾಸೆಯಿಂದ ಮೌನಕ್ಕೆ ಶರಣಾಗುವವರೇ ಜಾಸ್ತಿ.
Related Articles
Advertisement
ಕನ್ನಡಿಗರೇ ಕಟ್ಟಿ ಬೆಳೆಸಿದ ನೋಮಿ ಅಗಸ್ಟಿನ್ ಕಂಪನಿ: ಕಾರಷ್ಟೇ ಅಲ್ಲ ಬೈಕ್‌ಗಳನ್ನೂ ಸೆಲ್ಫ್ ರೈಡ್‌ಗೆ ಬಾಡಿಗೆ ನೀಡುವ ಮೂಲಕ ಕರ್ನಾಟಕದಲ್ಲಿ ಉದ್ಯಮಕ್ಕೆ ಇನ್ನೊಂದು ಆಯಾಮ ಪರಿಚಯಿಸಿದ ಕಂಪನಿ ಜೋಪ್‌ರೆಂಟ್. ಕನ್ನಡಿಗರೇ ಆರಂಭಿಸಿದ ಕಂಪನಿ ಇದು. ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನೋಮಿ ಅಗಸ್ಟಿನ್ ಎಂಬವರ ಹೂಡಿಕೆಯಲ್ಲಿ ಪ್ರದೀಪ್, ರಂಜನ್ ಹಾಗೂ ರಂಜನ್ ಕುಮಾರ್ ಕಂಪನಿಯ ಸಾರಥ್ಯ ಹೊತ್ತು ಮುನ್ನಡೆಸಿಕೊಂಡು ಬಂದಿದ್ದಾರೆ. ಹಂತ ಹಂತವಾಗಿ ಬೆಳೆದ ಕಂಪನಿ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಶಾಖೆ ಆರಂಭಿಸಿದೆ. ಬೆಂಗಳೂರಿನಲ್ಲಿಯೇ ಒಟ್ಟು 22 ಹಬ್‌ಗಳನ್ನು ಹೊಂದಿದೆ. ಇದೀಗ ತನ್ನದೇ ಗ್ರಾಹಕರು ದೇಶದ ಯಾವುದೇ ಮೂಲೆಗೆ ಹೋದರೂ ವಸತಿಗೂ ಸಮಸ್ಯೆ ಉಂಟಾಗಬಾರದೆನ್ನುವ ಕಾರಣದಿಂದ ವಸತಿ ಸೌಲಭ್ಯಕ್ಕೂ ಅವಕಾಶ ಮಾಡಿಕೊಡುತ್ತಿದೆ.
ಕಾರುಗಳಾದರೆ ಬಾಡಿಗೆ ಎಷ್ಟು?: ನಾಲ್ಕೈದು ಲಕ್ಷ ರೂ. ಬೆಲೆಬಾಳುವ ಕಾರುಗಳಾದಿಯಾಗಿ ಕೋಟಿ ರೂ. ಬೆಲೆಬಾಳುವ ಕಾರುಗಳೂ ದಿನ ಬಾಡಿಗೆಗೆ ಲಭ್ಯವಿರುತ್ತದೆ. ಕೆ10, ಇಯಾನ್, ಐ10, ಟಿಯಾಗೋ, ಕ್ವಿಡ್, ಎಟಿಯಾಸ್, ಫಿಗೋದಂತಹ ಕಾರುಗಳ ದಿನ ಬಾಡಿಗೆ 1500, 2000ದಿಂದ ಆರಂಭವಾದರೆ, ಸ್ಕಾರ್ಪಿಯೋ, ಇನ್ನೋವಾ, ಡಸ್ಟರ್, ಈಕೋನ್ಪೋರ್ಟ್ಸ್, ಎಕ್ಸ್ 1, ಕ್ಯೂ3, ಕ್ಯೂ7 ಕಾರುಗಳು 8ರಿಂದ 10ಸಾವಿರ ರೂ.ಗೆ ಬಾಡಿಗೆಗೆ ಲಭ್ಯವಿರುತ್ತದೆ. ಬೈಕ್‌ಗಳಿಗಿಂತ ಕಾರುಗಳನ್ನು ಬಾಡಿಗೆಗೆ ನೀಡುವ ಕಂಪನಿಗಳು ಜಾಸ್ತಿ ಇದ್ದು, ಸದ್ಯ ಬೆಂಗಳೂರಿನಲ್ಲಿ ಕಾರುಗಳನ್ನು ಬಾಡಿಗೆಗೆ ನೀಡುವ ಕಂಪನಿಗಳೇ ಜಾಸ್ತಿ ಇವೆ. ಕೆಲವು ಪ್ರತಿಷ್ಠಿತ ಕಂಪನಿಗಳೇ ಗಂಟೆ ಲೆಕ್ಕಾಚಾರದಲ್ಲಿಯೂ ಬಾಡಿಗೆಗೆ ನೀಡುತ್ತಿವೆ.
ಬೈಕ್‌ಗಳ ಬಾಡಿಗೆ ಎಷ್ಟಿರುತ್ತೆ?: ಮೂವತ್ತೈದು, ನಲವತ್ತೈದು, ಐವತ್ತೈದು ಸಾವಿರ ಬೆಲೆ ಬಾಳುವ ಸ್ಕೂಟರ್-ಬೈಕ್‌ಗಳಿಂದ ಹಿಡಿದು ಹತ್ತಿಪ್ಪತ್ತು ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳೂ ಬಾಡಿಗೆಗೆ ಲಭ್ಯವಿರುತ್ತದೆ. ಸ್ವಿಷ್, ಆಕ್ಟೀವಾ, ಜುಪಿಟರ್, ಡಿಯೋ, ಆ್ಯಕ್ಸಸ್, ಅಲ್ಫಾ, ವೆಗೋ, ನವಿಯಂಂಥ ಸಾಮಾನ್ಯ ಸಾಮರ್ಥ್ಯದ ಸ್ಕೂಟರ್‌ಗಳಿಂದ ಹಿಡಿದು ಹ್ಯಾರ್ಲಿ ಡೆವಿಡ್‌ಸನ್, ಹ್ಯಾರ್ಲಿ ರೋಡ್‌ಸ್ಟಾರ್, ಹಯಾಬುಸಾ, ರಾಯಲ್ ಥಂಡರ್‌ಬರ್ಡ್, ರಾಯಲ್ ಎನ್‌ಫೀಲ್ಡ್, ಹ್ಯಾರ್ಲಿ ಐರನ್, ಡೆಸಾರ್ಟ್ ಸ್ಟ್ರೋಮ್‌ಗಳಂಥ ದುಬಾರಿ ಬೈಕ್‌ಗಳನ್ನು ದಿನ ಬಾಡಿಗೆಗೆ ಲಭ್ಯವಿರುತ್ತದೆ. ಪ್ರತಿದಿನದ ಬಾಡಿಗೆ 300 ರೂ.ನಿಂದ ಆರಂಭವಾಗಿ 15,000 ರೂ.ತನಕ ಇರಲಿದೆ.
ಡೆಪಾಸಿಟ್ ಹೇಗೆ?: ಒಂದೊಮ್ಮೆ ಬುಕ್ ಮಾಡಲಾದ ವಾಹನವನ್ನು ಪ್ರಯಾಣಕ್ಕೂ ಮೊದಲು 0-48 ಗಂಟೆಗಳಲ್ಲಿ ತಿಳಿಸಿದರೆ ಅದಕ್ಕೆ ಶುಲ್ಕ ಭರಿಸ ಬೇಕಾ ಗುತ್ತದೆ. ಅದನ್ನು ವಾಹನ ನೀಡುವಾಗಲೇ ಪಡೆದು ಕೊಳ್ಳಲಾಗುವ ಸೆಕ್ಯೂರಿಟಿ ಡೆಪಾಸಿಟ್‌ನಲ್ಲಿಯೇ ಕಡಿತ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಡೆಪಾಸಿಟ್ ಮೊತ್ತದ ಶೇ.20ರಷ್ಟನ್ನು ಶುಲ್ಕವನ್ನಾಗಿ ಪಡೆಯ ಲಾಗುತ್ತದೆ. ಉಳಿದ ಶೇ.80ರಷ್ಟು ಹಣವನ್ನು ಬುಕಿಂಗ್ ಮಾಡಿರುವ ವ್ಯಕ್ತಿಗೆ ಒಂದು ವಾರದಲ್ಲಿ ರೀಫಂಡ್ ಮಾಡುವ ವ್ಯವಸ್ಥೆ ಬಹುತೇಕ ಕಂಪನಿಗಳಲ್ಲಿವೆ. ಒಂದೊಮ್ಮೆ ಬುಕ್ ಮಾಡಿಸಿಕೊಂಡು ವಾಹನ ನೀಡಲು ಸಾಧ್ಯ ವಾಗದೇ ಇದ್ದಲ್ಲಿ ಕಂಪನಿ ಎಲ್ಲಾ ಹಣವನ್ನು ಒಂದು ವಾರದಲ್ಲೇ ಮರಳಿಸುವುದಾಗಿ ಹೇಳಿಕೊಂಡಿರುತ್ತವೆ. ಇತ್ತೀಚೆಗೆ ಕೆಲ ಕಂಪನಿಗಳು ತಾವು ಕೇಳಿದ ದಾಖಲೆಗಳನ್ನೆಲ್ಲ ನೀಡಿದಲ್ಲಿ ಸೆಕ್ಯೂರಿಟಿ ಡೆಪಾಸಿಟ್ ಕೂಡ ಪಡೆಯುವುದಿಲ್ಲ.
ಯಾಕೆ ಬೆಸ್ಟ್?: ಕೋಟಿ ಕೋಟಿ, ಲಕ್ಷ ಲಕ್ಷ ರೂ. ಸುರಿದು ಲಕ್ಸುರಿ ಬೈಕ್, ಕಾರುಗಳನ್ನು ಕೊಂಡು ರಸ್ತೆಯಲ್ಲಿ ನಿಲ್ಲಿಸಲು ಯಾರಿಗೂ ಮನಸ್ಸು ಬಾರದು. ಅಷ್ಟಕ್ಕೂ ಮನೆಗೆರಡು ಕಾರೋ, ಬೈಕೋ ಇರುವಾಗ ಪಾರ್ಕಿಂಗ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲೂ ಸಾಧುವಿಲ್ಲ. ಹೀಗಾಗಿ ಸೆಲ್ಫ್ ರೈಡ್ ಸೆಲ್ಫ್ ಡ್ರೈವ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವೆಲ್ಲದರ ಜತೆಗೆ ಬಯಸಿದ ಸ್ಕೂಟರ್-ಬೈಕ್, ಕಾರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇರಲಿದೆ. ಅದರಲ್ಲೂ ಇತ್ತೀಚೆಗೆ ಕಿಲೋ ಮೀಟರ್ ಕೂಡ ಅನ್‌ಲಿಮಿಟೆಡ್. ಕಾರಣ ದೇಶದ ಯಾವುದೇ ಮೂಲೆಗೂ ಕೊಂಡೊಯ್ಯಬಹುದು. ಒಂದೆರಡು ವಾರ ಬೇಕೆಂದರೂ ಬಳಕೆ ಮಾಡಬಹುದು. ಆದರೆ ಒಂದು ದಿನವೆಂದು ಎರಡು ದಿನ ಬಳಕೆ ಮಾಡಿಕೊಳ್ಳುವಂತಿಲ್ಲ. ಈ ಬಗ್ಗೆ ಮೊದಲೇ ಮಾಹಿತಿ ನೀಡಬೇಕು.
ತಿಂಗಳ ಬಾಡಿಗೆ ಎಷ್ಟಿರುತ್ತೆ?: ಬೆಂಗಳೂರು ಸೇರಿದಂತೆ ದೇಶದಲ್ಲಿ ಒಂದೆರಡು ಕಂಪನಿಗಳು ಮಾತ್ರ ತಿಂಗಳ ಲೆಕ್ಕಾಚಾರದಲ್ಲಿ ಸ್ಕೂಟರ್, ಬೈಕ್ ಹಾಗೂ ಕಾರುಗಳನ್ನು ಬಾಡಿಗೆ ನೀಡುತ್ತಿವೆ. ಸ್ಕೂಟರ್‌ಗಳಾದರೆ ನಾಲ್ಕರಿಂದ ಆರು ಸಾವಿರ, ಬೈಕ್‌ಗಳಾದರೆ ಎಂಟರಿಂದ ಹತ್ತು ಸಾವಿರ, ಕಾರುಗಳಾದರೆ ಇಪ್ಪತ್ತರಿಂದ ಎಪ್ಪತ್ತು ಸಾವಿರ ರೂ.ಗಳಿಗೆ ತಿಂಗಳ ಬಾಡಿಗೆ ನೀಡಲಾಗುತ್ತದೆ.
ನಿಯಮಾವಳಿಗಳನ್ನು ಕಣ್ತೆರೆದು ಓದಿ: ಅಷ್ಟಕ್ಕೂ ಇದನ್ನೆಲ್ಲ ನಿಭಾಯಿಸುವುದು ಹೇಗೆ ಎನ್ನುವ ಕುತೂಹಲ ನಿಮ್ಮಲ್ಲಿ ಮೂಡಬಹುದು. ವಿಷಯ ಇಷ್ಟೆ, ಈ ಪ್ರಕಾರದ ಸಂಸ್ಥೆಗಳು ಬಾಡಿಗೆ ನೀಡುವ ವೇಳೆ ಒಂದಿಷ್ಟು ನಿಯಮಗಳನ್ನು ಮಾಡಿಕೊಂಡಿರುತ್ತವೆ. ಅಗತ್ಯವಾದಲ್ಲಿ ಒಂದಿಷ್ಟು ದಾಖಲೆಗಳನ್ನೂ ಪಡೆದುಕೊಳ್ಳುತ್ತವೆ. ಗ್ರಾಹಕ ಕೂಡ ನಿಯಮ ಉಲ್ಲಂ ಸಿದರೆ ಕಾನೂನು ಕ್ರಮ ಎದುರಿಸಬೇಕಾಗಿಯೂ ಬರಬಹುದು. ಕಾರಣ ನಿಯಮಗಳ ಬಗ್ಗೆ ಎಚ್ಚರದಿಂದಿರುವುದು ಸೂಕ್ತ.
“ಜೂಮ್’ ದೇಶಕ್ಕೇ ಮೊದಲು: ಬೆಂಗಳೂರಿಗೂ ಜೂಮ್ ಕಾರಿಗೂ ಅವಿನಾಭಾವ ಸಂಬಂಧವಿದೆ. “ಸೆಲ್ಫ್ ಡ್ರೈವ್’ಗೆ ಕಾರುಗಳನ್ನು ನೀಡಿ ಬಾಡಿಗೆ ಪಡೆಯುವುದನ್ನೇ ಉದ್ಯಮವಾಗಿ ಮಾಡಿಕೊಳ್ಳುವ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಬೆಂಗಳೂರಿನಲ್ಲಿ. ಗ್ರೆಗ್ ಮಾರನ್ ಹಾಗೂ ಡೇವಿಡ್ ಬ್ಯಾಕ್ “ಜೂಮ್’ ಕಂಪನಿಯ ಸಂಸ್ಥಾಪಕರು. ಜೂಮ್ ಕಾರಿನ ಪ್ರಧಾನ ಕಚೇರಿ ಕೂಡ ಬೆಂಗಳೂರಿನಲ್ಲೇ ಇದ್ದು, ಜೂಮ್ ದೇಶದ “ಸೆಲ್ಫ್ ಡ್ರೈವ್’ ಉದ್ಯಮ ಕ್ಷೇತ್ರದ ಮೊದಲ ಕಂಪನಿಯಾಗಿದೆ.
ಎಲ್ಲಿದ್ದರೂ ಗೊತ್ತಾಗುತ್ತೆ, ಹದ್ದಿನ ಕಣ್ಣಿಗೆ…: ಯಾವ ಧೈರ್ಯದ ಮೇಲೆ ಲಕ್ಷಾಂತರ ಮೌಲ್ಯದ ವಾಹನ ನೀಡುತ್ತಾರೆ? ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ ಇದಕ್ಕೆ ನೆರವಾಗುತ್ತಿರುವುದೇ ಜಿಪಿಆರ್‌ಎಸ್ ತಂತ್ರಜ್ಞಾನ. ಹೆಚ್ಚಿನ ಕಂಪನಿಗಳು ಬಾಡಿಗೆ ನೀಡುವ ವಾಹನಗಳಿಗೆ ಜಿಪಿಆರ್‌ಎಸ್ ಅಳವಡಿಕೆ ಮಾಡಿದ್ದು, ವಾಹನ ಎಲ್ಲೇ ಇದ್ದರೂ ಪತ್ತೆ ಮಾಡುವುದು ಕಷ್ಟವೇನಲ್ಲ. ವಾಹನದ ಚಲನ ವಲನದ ಮೇಲೆ ಸದಾ ಕಣ್ಣಿಟ್ಟಿರಲೆಂದೇ ತಂಡವೊಂದನ್ನು ರಚಿಸಿರಲಾಗುತ್ತದೆ. ಗ್ರಾಹಕರಿಗೆ ತೊಂದರೆ ಆದಲ್ಲಿಯೂ ತಕ್ಷಣ ಈ ತಂಡವೇ ಸ್ಪಂದಿಸುತ್ತದೆ. ಹೀಗಾಗಿ ಮೋಸ ಮಾಡುವ ಸಾಧ್ಯತೆಗಳೂ ಕಡಿಮೆ.
ಕಾರು, ಬೈಕ್ ಓಡಿಸಬೇಕೆನ್ನುವ ಹಂಬಲ ಎಲ್ಲರಲ್ಲೂ ಇರುತ್ತದೆ. ಆದರೆ ಸಾಧ್ಯವಾಗಿರುವುದಿಲ್ಲ. ಹಾಗೇ ಬೇರೆ ಊರಿಗೆ ಹೋದ ಸಂದರ್ಭದಲ್ಲಿ ನಮ್ಮದೇ ಒಂದು ವಾಹನ ಇದ್ದಿದ್ದರೆ ಎನಿಸುವುದುಂಟು. ಇದೆಲ್ಲದಕ್ಕೂ ಜೋಪ್‌ರೆಂಟ್ ಒಂದು ಪರಿಹಾರ ನೀಡಿದೆ.-ಪ್ರದೀಪ್, ವ್ಯವಸ್ಥಾಪಕರು, ಜೋಪ್‌ರೆಂಟ್ * ಗಣಪತಿ ಅಗ್ನಿಹೋತ್ರಿ