ಮಂಗಳೂರು: ನಗರದ ಪ್ರಸಿದ್ಧ ಸಂತ ಅಲೋಶಿಯಸ್ ಕಾಲೇಜು ಚಾಪೆಲ್‌ನಲ್ಲಿರುವ 120 ವರ್ಷಗಳಷ್ಟು ಹಳೆಯ ಅಪೂರ್ವ ಫ್ರೆಸ್ಕೊ ಚಿತ್ರ ಕಲಾಕೃತಿಗಳ ಪುನರುಜ್ಜೀವನ ಕಾಮಗಾರಿ ಪ್ರಾರಂಭಗೊಂಡಿದ್ದು, 2019ರ ಎಪ್ರಿಲ್ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ನೈಸರ್ಗಿಕ ಮತ್ತು ಇತರ ಕಾರಣಗಳಿಂದಾಗಿ ಇಲ್ಲಿರುವ ಚಿತ್ರ ಕಲಾಕೃತಿಗಳ ಬಣ್ಣ ಮಾಸಿದ್ದು, ಈ ಹಿನ್ನೆಲೆಯಲ್ಲಿ ಅವುಗಳಿಗೆ ಪುನರಪಿ ಬಣ್ಣ ಬಳಿಯುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ| ಡೈನೇಶಿಯಸ್ ವಾಸ್ ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೆಸ್ವೀಟ್ ಸಂಸ್ಥೆಯ ಧರ್ಮಗುರುಗಳು1880ರಲ್ಲಿ ಸಂತ ಅಲೋಶಿಯಸ್ ಕಾಲೇಜು ಮತ್ತು ಅದರ ಆವರಣದಲ್ಲಿ ಚ್ಯಾಪೆಲ್ ಸ್ಥಾಪಿಸಿದ್ದರು. 1899ರಲ್ಲಿ ಇಟೆಲಿಯ ಜೆಸ್ವೀಟ್ ಸಂಸ್ಥೆಯ ಚಿತ್ರಕಾರ ಅಂಟೋನಿಯೊ ಮೊಸ್ಕೆನಿ ಅವರು ಚಾಪೆಲ್‌ನ ನಾಲ್ಕು ಗೋಡೆಗಳು ಮತ್ತು ಮೇಲ್ಫಾಗ ಸೇರಿದಂತೆ ಒಟ್ಟು 829 ಚದರಡಿ ವಿಸ್ತೀರ್ಣದಲ್ಲಿ ಯೇಸು ಕ್ರಿಸ್ತರ ಬದುಕಿನ ಕ್ಷಣಗಳು, ಸಂತ ಅಲೋಶಿಯಸ್ ಗೊಂಝಾಗಾ ಮತ್ತು ಇತರ ಕೆಥೋಲಿಕ್ ಸಂತರ ಫ್ರೆಸ್ಕೊ ಚಿತ್ರಗಳನ್ನು ರಚಿಸಿದ್ದರು.
ಚಿತ್ರಕಲಾಕೃತಿಗಳ ಬಣ್ಣ ಮಾಸುತ್ತಿರುವುದರಿಂದ ಕಾಲ ಕಾಲಕ್ಕೆ ಪುನರುಜ್ಜೀವನ ಮಾಡಲಾಗುತ್ತಿದ್ದು, ಈ ಹಿಂದೆ 1991- 94ರ ಅವಧಿಯಲ್ಲಿ ಲಕ್ನೋದ ಐಸಿಐ- ಇಂಟಾಚ್ ಸಂಸ್ಥೆಯ ಪರಿಣಿತ ಕಲಾವಿದರು ಪುನಶ್ಚೇತನ ಮಾಡಿದ್ದರು. ಈಗ 25 ವರ್ಷಗಳ ಬಳಿಕ ಮತ್ತೆ ಪುನಶ್ಚೇತನ ಕಾಮಗಾರಿಯನ್ನು ಇಂಟಾಚ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಮಗಾರಿಯ ವೆಚ್ಚ 1.5 ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ. 2017ರ ನವೆಂಬರ್‌ನಲ್ಲಿ ಕೆಲಸ ಆರಂಭವಾಗಿದ್ದು, 18 ತಿಂಗಳಲ್ಲಿ ಪೂರ್ತಿಗೊಳ್ಳುವುದೆಂದು ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.
2016ರಲ್ಲಿ ಈ ಚಿತ್ರಕಲೆಯ ಬಗೆಗೆ ದಾಖಲೀಕರಣ ಮತ್ತು ಅಧ್ಯಯನ ನಡೆಸಿದ್ದು, 2017 ಮಾರ್ಚ್‌ನಲ್ಲಿ ಯೋಜನಾ ವರದಿಯ ಪ್ರಸ್ತಾವ ಸಲ್ಲಿಸಲಾಗಿತ್ತು ಹಾಗೂ 2017 ನವೆಂಬರ್‌ನಲ್ಲಿ ಕೆಲಸ ಆರಂಭವಾಗಿತ್ತು ಎಂದು ಇಂಟಾಚ್ ಸಂಸ್ಥೆಯ ನಿರ್ದೇಶಕ ನೀಲಭ್ ಸಿನ್ಹಾ ಅವರು ತಿಳಿಸಿದರು. ಸಂತ ಅಲೋಶಿಯಸ್ ಕಾಲೇಜು ಚರ್ಚ್ ಪ್ರವಾಸಿ ತಾಣ ಕೂಡ ಆಗಿದ್ದು, ವಿದೇಶಿ ಪ್ರವಾಸಿಗರು ಕೂಡ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪ್ರಾಂಶುಪಾಲ ರೆ| ಡಾ| ಲಿಯೋ ಡಿ’ಸೋಜಾ, ಫಾ| ಕ್ರಿಸ್ಟೋಫರ್, ಫಾ| ಡೆನಿlಲ್ ಲೋಬೊ, ಇಂಟಾಚ್ ಸಂಸ್ಥೆಯ ಮಂಗಳೂರು ಘಟಕದ ಬಸು ಮತ್ತು ಇತರರು ಉಪಸ್ಥಿತರಿದ್ದರು.