ಬಾಗಲಕೋಟೆ: ಕಾರಣಾಂತರಗಳಿಂದ ತಂದೆ-ತಾಯಿಯರನ್ನು ಕಳೆದುಕೊಂಡು ಮಕ್ಕಳಲ್ಲಿ ಅನಾಥರೆಂಬ ಭಾವನೆ ಮೂಡದಂತೆ ನೋಡಿಕೊಳ್ಳಬೇಕೆಂದು ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಸರಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರದಲ್ಲಿ ಸೋಮವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿª, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಅನಾಥ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದ್ದು, ಶಿಕ್ಷಕರು ಇಂತಹ ಮಕ್ಕಳನ್ನು ತಮ್ಮ ಮಕ್ಕಳೆಂಬ ಭಾವನೆ ಹೊಂದಬೇಕು ಎಂದರು.
ಜನನ ಮರಣ ನಮ್ಮ ಕೈಯಲ್ಲಿ ಇಲ್ಲ. ಬಾಲಮಂದಿರದಲ್ಲಿರುವ ಮಕ್ಕಳು ಗುರಿ ಇಟ್ಟುಕೊಂಡು ಬೆಳೆಯಬೇಕು. ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರು ಅನಾಥ ಮಕ್ಕಳ ಮೇಲೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಮಕ್ಕಳಿಗೆ ಪ್ರವಾಸಿ ತಾಣಗಳ ವೀಕ್ಷಣೆ ಕೂಡಾ ಮಾಡಿಸುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಕೂಡಾ ಅನಾಥ ಮಕ್ಕಳಿಗೆ ಆದ್ಯತೆ ಮೇರೆಗೆ ಅನೇಕ ಯೋಜನೆ ಜಾರಿಗೆ ತಂದಿದ್ದಾರೆ. ಅವುಗಳ ಸದುಪಯೋಗವಾಗುವಂತೆ ಮಾಡಲು ತಿಳಿಸಿದರು.
ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಮಾತನಾಡಿ, ಮಕ್ಕಳಲ್ಲಿ ಅನಾಥರೆಂಬ ಭಾವನೆ ಮೂಡಿಸದೇ ಅವರು ಚೆನ್ನಾಗಿ ಓದಿ ಸಾಧನೆ ಮಾಡುವಂತರಾಗಬೇಕು. ಮಕ್ಕಳು ಒಳ್ಳೆಯ ರೀತಿಯಲ್ಲಿ ಓದಿ ಉತ್ತಮ ಹುದ್ದೆ ಅಲಂಕರಿಸುವಂತಾಗಬೇಕು. ವಸತಿ ಜತೆಗೆ ಬಾಲ ಮಂದಿರದಲ್ಲಿಯೇ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗ ಮಕ್ಕಳು ಪಡೆದುಕೊಂಡು ಒಳ್ಳೆಯ ರೀತಿಯಲ್ಲಿ ಶಿಕ್ಷಣ ಪಡೆಯಲು ಕರೆ ನೀಡಿದರು.
Related Articles
ಜಿಪಂ ಸಿಇಒ ಟಿ.ಭೂಬಾಲನ್ ಮಾತನಾಡಿ, ಬಾಲ ಮಂದಿರದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವೇಕ ಯೋಜನೆಯಡಿ ಎರಡು ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಬಾಲ ಮಂದಿರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಮಕ್ಕಳಿಗೆ ಪ್ರವಾಸ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಬರುವ ದಿನಗಳಲ್ಲಿ ಆಲಮಟ್ಟಿ ಮತ್ತು ಕೂಡಲಸಂಗಮ ಸ್ಥಳಗಳ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.
ಮಕ್ಕಳ ದಿನಾಚರಣೆಯಂದು ಜನಿಸಿದ ಮಕ್ಕಳ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್., ಕ್ಷೇತ್ರ ಶಿಕ್ಷಣಾಧಿಕಾರಿ ಸಾವಿತ್ರಿ ಕೊಂಡಕೋಳ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಉಪಸ್ಥಿತರಿದ್ದರು.
ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ಬಾಲಕಿಯರ ಬಾಲ ಮಂದಿರದ ಆವರಣದಲ್ಲಿ ವಿವೇಕ ಯೋಜನೆಯಡಿ ಮಂಜೂರಾದ ಎರಡು ಕೊಠಡಿ ಕಾಮಗಾರಿ ನಿರ್ಮಾಣಕ್ಕೆ ಶಾಸಕ ವೀರಣ್ಣ ಚರಂತಿಮಠ ಭೂಮಿಪೂಜೆ ನೆರವೇರಿಸಿ ಸೋಮವಾರ ಚಾಲನೆ ನೀಡಿದರು. ಸರಕಾರ ಆಯವ್ಯವದಲ್ಲಿ ಘೋಷಿಸಿದಂತೆ ವಿವೇಕ ಯೋಜನೆಯಡಿ ಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ ಜಿಲ್ಲೆಗೆ 25.57 ಕೋಟಿ ರೂ.ಗಳ ಅನುದಾನ ನೀಡಿದ್ದು, 199 ಕೊಠಡಿಗಳು ಮಂಜೂರಾಗಿದ್ದು, ಕಾಮಗಾರಿಗಳನ್ನು ತ್ವರಿತಗರಿಯಲ್ಲಿ ಕೈಗೊಳ್ಳಲಾಗುತ್ತಿದೆ.