ಆಳಂದ: ತಾಲೂಕಿನ ತೀರ್ಥ ಗ್ರಾಮಕ್ಕೆ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಿ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದ್ದು, ಕೂಡಲೇ ನೀರು ಒದಗಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಕರವೇ ಪ್ರವೀಣ ಶೆಟ್ಟಿ ಬಣ ಒತ್ತಾಯಿಸಿದೆ.
ಈ ಕುರಿತು ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ ಕರವೇ ಅಧ್ಯಕ್ಷ ಕಿರಣ ಗುತ್ತೇದಾರ ನೇತೃತ್ವದಲ್ಲಿ ವೆಂಕಟೇಶ ರಾಠೊಡ, ಅವಿನಾಶ ರಾಠೊಡ, ಶ್ರೀನಿವಾಸ ತೇಲ್ಕರ್, ರಾಹುಲ್ ವಾಲೆ, ಭೋಜರಾಜ, ಸುಂದರಾಬಾಯಿ ನಿಂಬಾಳೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಬಳಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಕಾರ್ಯಕರ್ತರು, ಕುಡಿಯುವ ನೀರಿನ ಮೂಲವಾದ ತೆರೆದ ಬಾವಿ, ಕೊಳವೆ ಬಾವಿ ಮತ್ತು ಹಳ್ಳ ಬತ್ತಿಹೋಗಿವೆ. ದೂರದ ಹೊಲಗದ್ದೆಗಳಿಂದ ನೀರು ತರುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ನೀರು ಒದಗಿಸುವ ಕುರಿತು ಇಲ್ಲಿಯ ಮೇಲಾಧಿ ಕಾರಿಗಳಿಗೆ ಜನರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕುರಿತು ಕೇಳಿದಾಗ ಅವರು ಸಹ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಬಂದಿಲ್ಲ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆ ಈಡೇರಿಸದಿದ್ದರೆ ತಹಶೀಲ್ದಾರ ಕಾರ್ಯಾಲಯಕ್ಕೆ ಬೀಗ ಜಡಿದು ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಕರವೇ ಕಾರ್ಯಕರ್ತರು ಎಚ್ಚರಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಈ ಕುರಿತು ಸಂಬಂಧಿತ ಅಧಿದಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.